ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿದ್ದಿರಾ ‘ಕಹಳೆ’ ದನಿ

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

‘ಜೀವನದ ಭಾಷೆ ಯಾವುದಾದರೇನು ಜೀವ ತುಂಬಿದ, ತುಂಬುವ ಭಾಷೆ ಕನ್ನಡವೇ. ಕನ್ನಡ ಸಾಹಿತ್ಯ ಸಾಗರಕ್ಕೆ ಒಂದು ಹನಿಯನ್ನು ಸೇರಿಸೋಣ’ ಎಂಬ ಧ್ಯೇಯದೊಂದಿಗೆ ಸಮಾನ ಮನಸ್ಕರ ಸಮೂಹವೊಂದು ಕನ್ನಡ ಸೇವೆಯಲ್ಲಿ ತೊಡಗಿದೆ. ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಬರವಣಿಗೆಯನ್ನು ಕಲಿಯುತ್ತ, ಕಲಿಸುತ್ತ ಸಾಗಿದೆ. ಈ ಸಮೂಹದ ಹೆಸರು ‘ಕಹಳೆ’. ಕಹಳೆಯ ಕರೆಗೆ ಓಗೊಟ್ಟವರು ಕೋರಮಂಗಲದ ‘ಅಟ ಗಲಾಟ’ದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಸೇರಿ, ಸಾಹಿತ್ಯ ಸಂಬಂಧಿತ ಚಟುವಟಿಕೆ ನಡೆಸುತ್ತಾರೆ.

ಸ್ವರಚಿತ ಅಥವಾ ತಮಗೆ ಇಷ್ಟವಾದ ಕವನಗಳನ್ನು ಆಸಕ್ತರು ವಾಚಿಸುತ್ತಾರೆ. ವಿಮರ್ಶೆ, ಮೆಚ್ಚುಗೆಯ ಮಾತುಗಳಿಂದ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುತ್ತಾರೆ. ತಿಳಿದವರು ನೀಡುವ ಸಲಹೆಗಳಿಂದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾರೆ. ಈವರೆಗೂ ಇಲ್ಲಿ 9 ಪದ್ಯಗೋಷ್ಠಿಗಳು ನಡೆದಿವೆ. ಇದರಲ್ಲಿ ಭಾಗವಹಿಸಲು ಶಿವಮೊಗ್ಗ, ಮೈಸೂರಿನಿಂದಲೂ ಸಾಹಿತ್ಯಾಸಕ್ತರು ಬಂದಿದ್ದರಂತೆ.

ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರಮಕ್ಕೆ ಬರಲಾಗದಿದ್ದವರಿಗೂ ಇಲ್ಲೊಂದು ಅವಕಾಶವಿದೆ. ತಮ್ಮ ಕವಿತೆಯ ಓದನ್ನು ಸೆಲ್ಫಿ ವಿಡಿಯೊ ಮೂಲಕ ಕಳಿಸಬಹುದು. ಅಕ್ಷರರೂಪದಲ್ಲಿ ಕಳಿಸಲೂ ಅವಕಾಶವಿದೆ. ಅದನ್ನು ಕಹಳೆ ತಂಡ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಹಾಕುತ್ತದೆ. ಬರೆದ ಪದ್ಯವನ್ನು ಬ್ಲಾಗ್‌ನಲ್ಲಿ ಪ್ರಕಟಿಸುತ್ತದೆ.

‘ಸಂಗೀತ, ನಾಟಕ, ಸಿನಿಮಾಗಳಿಗೆ ಸಾಹಿತ್ಯವೇ ಆಧಾರ. ಹಾಗಾಗಿ ಅದರೆಡೆಗೆ ಅಸಕ್ತಿ ಮೂಡಿದರೆ, ಉಳಿದವು ಅರ್ಥವಾಗುತ್ತವೆ, ಅಭಿರುಚಿ ಬೆಳೆಯುತ್ತದೆ. ನಾವು ಸೇರುವ ಸಭೆಯಲ್ಲಿ ಓದಿದ ಅಥವಾ ಆಸಕ್ತರು ಬರೆದ ಹೊತ್ತಗೆಯ ವೈಶಿಷ್ಟ್ಯ ಹೇಳಬಹುದು. ಇದರಿಂದ ಇತರರಲ್ಲಿಯೂ ಸಾಹಿತ್ಯಾಸಕ್ತಿ ಬೆಳೆಯುತ್ತದೆ’ ಎನ್ನುತ್ತಾರೆ ಕಹಳೆ ತಂಡದ ಮುಂದಾಳು ವಿನಯಕುಮಾರ್‌ ಎಸ್‌. ಸಜ್ಜನರ.

ಸಾಹಿತಿಗಳನ್ನು ಆಹ್ವಾನಿಸಿ ಅವರಿಂದ ಬರವಣಿಗೆಯ ಸೂಕ್ಷ್ಮತೆಗಳನ್ನು ಕರಗತ ಮಾಡಿಕೊಡಲು ತಂಡ ಶ್ರಮಿಸುತ್ತಿದೆ. ‘ನಾವು ಕಂಡ ಘಟನೆಗಳು, ಕನಸು, ನಿಸರ್ಗ, ಮನದಲ್ಲಿ ಮೂಡುವ ವಿಚಾರಗಳಿಗೆ ಲೆಕ್ಕವಿಲ್ಲ. ಭಾವನೆಗಳನ್ನು ಅಕ್ಷರದಲ್ಲಿ ಹಿಡಿದಿಡಲು ಯುವ ಕಥಾಗಾರರಿಗೆ, ಕವಿಗಳಿಗೆ ಪ್ರೋತ್ಸಾಹ ಬೇಕು. ಬರವಣಿಗೆ ಮತ್ತು ಅದರ ಪ್ರಕಟಣೆಯ ಕುರಿತು ತಿಳಿಸಲು ಸಾಹಿತಿ ಮತ್ತು ಪ್ರಕಾಶಕರನ್ನು ಕರೆದು ಸಂವಾದ ಏರ್ಪಡಿಸುತ್ತೇವೆ. ಇತ್ತಿಚೆಗೆ ಬಂದಿದ್ದ ವಸುಧೇಂದ್ರ ಅವರು ಕಥೆ ಹುಟ್ಟುವ, ಕಟ್ಟುವ ಬಗೆಯನ್ನು ವಿವರಿಸಿದರು’ ಎಂದು ವಿನಯಕುಮಾರ್‌ ನೆನದರು.

ಕಥೆ ಮತ್ತು ಕವಿತೆಗಳನ್ನು ರಚಿಸುವ ಸ್ಪರ್ಧೆಗಳನ್ನು ‘ಕಹಳೆ’ ಆಯೋಜಿಸುತ್ತಿದೆ. ಅದರಲ್ಲಿ ವಿಜೇತರಾದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಿದೆ. ಸ್ಪರ್ಧೆಗಳ ಆಯೋಜನೆಗೆ ನಮ್ಮ ಕರ್ನಾಟಕ ಮೀಮ್‌, ಅರಳಿಕಟ್ಟೆ, ಇರುವೆ, ಕನ್ನಡ ಗೊತ್ತಿಲ್ಲ.ಕಾಮ್‌, ಹೆಮ್ಮೆಯ ಕನ್ನಡಿಗ ಸಮೂಹಗಳು ಸಹಕಾರ ನೀಡುತ್ತಿವೆ.

ಈ ತಂಡವು ವಿಶಿಷ್ಟವಾದ ಬುಕ್‌ಮಾರ್ಕ್‌ಗಳನ್ನು ರೂಪಿಸಿದೆ. ಇದರಲ್ಲಿ ಹೆಸರಾಂತ ಸಾಹಿತಿಗಳ ರೇಖಾಚಿತ್ರಗಳಿವೆ. ಕವಿಗಳ ಸಾಲುಗಳಿವೆ. ಲೇಖಕರ ಸೃಜನಾತ್ಮಕ ನುಡಿಗಳಿವೆ. ಇದಲ್ಲದೆ ಇದರ ಮೇಲೊಂದು ಕ್ಯೂಆರ್‌ ಕೋಡ್‌ ಮುದ್ರಿಸಲಾಗಿದೆ. ಅದನ್ನು ಸ್ಕ್ಯಾನ್‌ ಮಾಡಿದರೆ ಕನ್ನಡ ಬೆಳೆಸಲು ಶ್ರಮಿಸುತ್ತಿರುವ ಹಲವಾರು ಸಮೂಹಗಳ ಲಿಂಕ್‌ಗಳು ಸಿಗುತ್ತವೆ. ಅಲ್ಲಿ ಕನ್ನಡ ಕಲಿಕೆ, ಹಾಸ್ಯ, ಸಿನಿಮಾ ವಿಮರ್ಶೆ, ಪುಸ್ತಕ ಮಳಿಗೆಗೆ ಸಂಬಂಧಿಸಿದ ಜಾಲತಾಣಗಳ ವಿಳಾಸಗಳು ಸಿಗುತ್ತವೆ.

ಮೈಸೂರಿನಲ್ಲಿ ಎಂಜಿನಿಯರಿಂಗ್‌ ಓದುವಾಗ ಬೆಳೆದ ಸಾಹಿತ್ಯಾಸಕ್ತಿಯನ್ನು ವಿನಯಕುಮಾರ್‌ ಇಂದಿಗೂ ಪೋಷಿಸುತ್ತಿದ್ದಾರೆ. ಇದರಿಂದಾಗಿ ಇವರ ಎರಡು ಕವನ ಸಂಕಲನಗಳು ಹೊರಬಂದಿವೆ. ನಗರದ ಸ್ನೈಡರ್‌ ಎಲೆಕ್ಟ್ರಿಕ್‌ ಕಂಪೆನಿಯಲ್ಲಿ ದುಡಿಯುವ ಇವರು ವಾರಾಂತ್ಯವನ್ನು ಕನ್ನಡಪರ ಚಟುವಟಿಕೆಗಳಿಗೆ ಮೀಸಲಿಡುತ್ತಾರೆ. ‘ಕಹಳೆ’ಯ ನಾದ ಮೊಳಗಲು ಸ್ನೇಹಿತರಾದ ಬಸವರಾಜ, ಪ್ರವೀಣ್‌ ಗೆಳತಿಯರಾದ ಸುಷ್ಮಾ, ವಾರಿಜಾ ಹೆಬ್ಬಾರ್‌ ಸಾಥ್‌ ನೀಡುತ್ತಿದ್ದಾರೆ.

ಸಂಪರ್ಕಕ್ಕೆ: ‘ಕಹಳೆ’ ಫೇಸ್‌ಬುಕ್ ಪುಟ– facebook.com/Kahale.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT