ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೀಮಸೇನ ಜೋಶಿ ನಿಜವಾದ ಗಂಧರ್ವರು’

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಹಿಂದೂಸ್ತಾನಿ ಸಂಗೀತದ ಕಿರಾಣಾ ಘರಾಣ ‘ಗಾಯಕಿ’ಯಲ್ಲಿ ಹಾಡುವ ನೀವು ಪಂ.ಭೀಮಸೇನ ಜೋಶಿ ಪ್ರಭಾವಕ್ಕೆ ಒಳಗಾದವರು. ನಿಮ್ಮ ಗಾಯನಕ್ಕೆ ಅವರಿಂದ ಬೆನ್ನುತಟ್ಟಿಸಿಕೊಂಡ ಹೆಮ್ಮೆ ನಿಮ್ಮದು...

ನನ್ನ ಗುರು ಶ್ರೀಪತಿ ಪಾಡಿಗಾರ್‌ ಅವರು ಭೀಮಸೇನ ಜೋಶಿ ಅವರ ಶಿಷ್ಯರಾಗಿದ್ದವರು. ಭೀಮಸೇನ ಜೋಶಿ ಅವರ ಗಾಯನ ಶೈಲಿಯಿಂದ ಆಕರ್ಷಿತನಾದವನು ನಾನು. ಅವರ ಗಾಯನದ ಶ್ರೇಷ್ಠತೆ ಬಗ್ಗೆ ಮಾತನಾಡುವುದಕ್ಕೂ ನಾನು ಬಹಳ ಚಿಕ್ಕವ. ಭೀಮಸೇನ ಜೋಶಿ ಅವರನ್ನು ‘ನಿಜವಾದ ಗಂಧರ್ವ’ ಎಂದೇ ನಾನು ವ್ಯಾಖ್ಯಾನಿಸುತ್ತೇನೆ. ಅವರ ಮುಂದೆ ನಾನು ಕಛೇರಿ ನೀಡಿದ್ದು, ಅವರು ಬೆನ್ನು ತಟ್ಟಿದ್ದು ನಿಜಕ್ಕೂ ನನ್ನ ಜೀವನದಲ್ಲಿ ಮರೆಯಲಾರದ ಘಟನೆ.

ಅದು 1995ನೇ ಇಸವಿ. ನಾನಾಗ ಗೋವಾ ಆಕಾಶವಾಣಿಯಲ್ಲಿ ನಿಲಯ ಕಲಾವಿದನಾಗಿದ್ದೆ. ಆಗಾಗ ಸಂಗೀತ ಕಛೇರಿಗಳನ್ನೂ ನೀಡುತ್ತಿದ್ದೆ. ನನ್ನ ಗಾಯನವನ್ನು ಪಂ.ಜೋಶಿ ಅವರು ಗಮನಿಸುತ್ತಲೇ ಇದ್ದರು. ಒಮ್ಮೆ ಇಂಥ ಮಹಾನ್‌ ಸಂಗೀತ ತಾರೆಯಿಂದ ನನಗೆ ದೂರವಾಣಿ ಬಂತು. ಪುಣೆಯಲ್ಲಿ ನಡೆಯುವ ‘ಸವಾಯಿ ಗಂಧರ್ವ ಸಂಗೀತ ಮಹೋತ್ಸವ’ದಲ್ಲಿ ನಾನು ಹಾಡಬೇಕು ಎಂದು ಸ್ವತಃ ಅವರೇ ಆಹ್ವಾನ ನೀಡಿದರು. ನನಗಿದು ನಿಜವೋ, ಕನಸೋ ಎಂಬಷ್ಟು ಅಚ್ಚರಿ. ಇಂಥ ಮೇರು ಕಲಾವಿದ ನನಗೆ ಹಾಡಲು ಅವಕಾಶ ನೀಡಿದ್ದು, ಅವರೇ ಎದುರುಗಡೆ ಕುಳಿತಾಗ ಹಾಡಿದ್ದು, ನನಗೆ ತಂಬೂರಿ ಶ್ರುತಿ ಮಾಡಿ ಕೊಟ್ಟದ್ದು, ಸಂಜೆಯ ರಾಗ ‘ಯಮನ್‌’ ಅನ್ನು ನಾನು ಹಾಡಿದ್ದು.. ಎಲ್ಲವೂ ನನ್ನ ಪುಣ್ಯವೆಂದೇ ಹೇಳಬೇಕು.

ಶಾಸ್ತ್ರೀಯ ಸಂಗೀತದಲ್ಲಿ ಅಭಿರುಚಿ ಹುಟ್ಟಲು ನಿಮ್ಮ ತಾಯಿಯೇ ಪ್ರೇರಣೆ ಎಂದಿರಿ. ಅದು ಹೇಗೆ?

ನನ್ನ ತಾಯಿಯ ಹೆಸರು ಸುಧಾ. ಅವರು ದೇವರನಾಮ ಹಾಡ್ತಿದ್ರು. ಆದರೆ ಶಾಸ್ತ್ರೀಯ ಸಂಗೀತ ಕಲಿಯಲು ಆಗಲಿಲ್ಲ. ಮಗನಾದರೂ ಹಿಂದೂಸ್ತಾನಿ ಸಂಗೀತ ಕಲಿಯಲಿ ಎಂದು ಆರಂಭದಿಂದಲೇ ಉತ್ತೇಜನ ನೀಡ್ತಿದ್ರು. ಅವರೇ ನನ್ನ ಮೊದಲ ಗುರು. ನಾನು ಚಿಕ್ಕವನಿದ್ದಾಗ ಕುಂದಗೋಳದಲ್ಲಿ ಅಹೋರಾತ್ರಿ ಸಂಗೀತೋತ್ಸವಕ್ಕೆ ಕರೆದೊಯ್ದಿದ್ದರು. ಅಲ್ಲಿ ಭೀಮಸೇನ ಜೋಶಿ, ಬಸವರಾಜ ರಾಜಗುರು ಅವರನ್ನೆಲ್ಲ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಚಿಕ್ಕವನಿದ್ದಾಗಿನಿಂದಲೂ ದಿನಕ್ಕೆ ನಾಲ್ಕೈದು ಗಂಟೆ ನಿರಂತರ ರಿಯಾಜ್‌ ಮಾಡ್ತಿದ್ದೆ. ಬಿಎ ಮ್ಯೂಸಿಕ್‌ ಓದಿ ಗೋವಾ ಆಕಾಶವಾಣಿಯಲ್ಲಿ 13 ವರ್ಷ ಕೆಲಸ ಮಾಡಿದೆ. ಈಗ ಹೆಚ್ಚಾಗಿ ಸಂಗೀತ ಕಛೇರಿಗಳಲ್ಲೇ ಕಳೆಯುವುದರಿಂದ ಸದಾ ರಿಯಾಜ್‌ ಸಿಕ್ಕಿದಂತೆ. ಮಕ್ಕಳಿಗೆ ಕಲಿಸುವುದರಿಂದಲೂ ಸದಾ ಸಂಗೀತದ ಜತೆಯಲ್ಲೇ ಇರುತ್ತೇನೆ.

ಹೊಸ ರಾಗಗಳನ್ನು ಸೃಷ್ಟಿಸಿದ ಬಗ್ಗೆ ಮಾತನಾಡಿ...

ಮೊದಲಿನಿಂದಲೂ ಭೀಮಸೇನ ಜೋಶಿ ಅವರು ಹಾಡುತ್ತಿದ್ದ ಶುದ್ಧಕಲ್ಯಾಣ್‌, ಮುಲ್ತಾನಿ, ತೋಡಿ, ಲಲತ್‌, ಪೂರಿಯ ಧನಾಶ್ರೀ, ಬೃಂದಾವನಿ ಸಾರಂಗ್‌ ಕೇಳುತ್ತಿದ್ದೆ, ಹಾಡುತ್ತಿದ್ದೆ. ಕೇಳುಗರಿಗೆ ಇನ್ನೂ ಏನಾದರೂ ಹೊಸತು ಕೊಡೋಣ ಎಂದು ನಾನೇ ಎರಡು ರಾಗಗಳನ್ನು ಸೃಷ್ಟಿಸಿದೆ. ‘ಮಧುಪ್ರಿಯ’ ಹಾಗೂ ‘ಭಿನ್ನ ಗಾಂಧಾರ’ ಆ ಎರಡು ರಾಗಗಳು. ಇದನ್ನೂ ಕಛೇರಿಗಳಲ್ಲಿ ಹಾಡುತ್ತೇನೆ. ಜತೆಗೆ ಕೇಳುಗರ ಅಭಿರುಚಿಗೆ ತಕ್ಕಂತೆ ಭಜನ್, ಮರಾಠಿ ಅಭಂಗ್‌, ಠುಮ್ರಿ, ವಚನ, ದಾಸವಾಣಿಗಳನ್ನೂ ಶಾಸ್ತ್ರೀಯ ಸಂಗೀತದ ಜತೆ ಜತೆಯಲ್ಲೇ ಹಾಡುತ್ತೇನೆ.

ಬೆಂಗಳೂರಿನಲ್ಲಿ ಹಾಡಲು ಹೇಗನಿಸುತ್ತದೆ?

ಪುರಂದರ ಮಂಟಪದಲ್ಲಿ ಈ ಹಿಂದೆಯೂ ಹಾಡಿದ್ದೆ. ಅಲ್ಲಿ ಸದಭಿರುಚಿಯ ಕೇಳುಗರಿದ್ದಾರೆ. ಈ ಸಂಸ್ಥೆಯ ರೂವಾರಿ ವಿ.ಲಕ್ಷ್ಮೀನಾರಾಯಣ ಅವರು ಸಂಗೀತಕ್ಕೆ ಬಹಳ ಪ್ರೋತ್ಸಾಹ ಕೊಡುತ್ತಾರೆ. ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗೆ ಸದಾ ಅವಕಾಶ ನೀಡುತ್ತಲೇ ಇರುತ್ತಾರೆ. ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ಬರೀ ಕರ್ನಾಟಕ ಸಂಗೀತ ಕೇಳುಗರೇ ಇದ್ದರು. ಆದರೆ ಈಗ ಎಲ್ಲ ಪ್ರಕಾರದ ಸಂಗೀತವನ್ನೂ ಆಸ್ವಾದಿಸುವ ಸಂಗೀತ ರಸಿಕರಿದ್ದಾರೆ ಎಂಬುದೇ ಸಂತಸದ ವಿಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT