ಬುಧವಾರ, ಜೂನ್ 23, 2021
22 °C

ಭಾರತದ ವಿದೇಶಾಂಗ ನೀತಿಯ ಕಾರ್ಮೋಡದಲ್ಲೊಂದು ಬೆಳ್ಳಿಕಿರಣ

ಉಮಾಪತಿ. ಡಿ. Updated:

ಅಕ್ಷರ ಗಾತ್ರ : | |

ಭಾರತದ ವಿದೇಶಾಂಗ ನೀತಿಯ ಕಾರ್ಮೋಡದಲ್ಲೊಂದು ಬೆಳ್ಳಿಕಿರಣ

‘ಆಸಿಯಾನ್’ ಶೃಂಗಸಭೆ ಶುಕ್ರವಾರ ದೆಹಲಿಯಲ್ಲಿ ಮುಕ್ತಾಯವಾಯಿತು. 2012ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್ ಅವರು ಆಸಿಯಾನ್‌ನ ಎಲ್ಲ ಹತ್ತು ದೇಶಗಳ ನಾಯಕರನ್ನೂ ಮೊದಲ ಸಲ ಭಾರತಕ್ಕೆ ಆಹ್ವಾನಿಸಿದ್ದರು. ‘ಪೂರ್ವದೆಡೆಗೆ ಗಮನ’ (Look East) ಎಂಬ ಭಾರತದ ನೀತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇನ್ನಷ್ಟು ಮುಂದಕ್ಕೆ ಒಯ್ಯಿತು. ‘ಪೂರ್ವದೊಡನೆ ಸಕ್ರಿಯ ಸಹಭಾಗಿತ್ವ’ (Act East) ಎಂದು ಬಣ್ಣಿಸಿತು. ಆಸಿಯಾನ್ ಜೊತೆಗಿನ ತನ್ನ ಸಂವಾದದ 25ನೆಯ ವರ್ಷಾಚರಣೆಗೆಂದು ಎಲ್ಲ ಹತ್ತು ಮಂದಿ ನಾಯಕರನ್ನು 69ನೆಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆಹ್ವಾನಿಸಿದರು ಮೋದಿ. ಪರಸ್ಪರ ಸಂಬಂಧವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುವ ಕುರಿತು ಭಾರತ ಮತ್ತು ಆಸಿಯಾನ್ ಬದ್ಧತೆಯನ್ನು ಸಾರಿದ ಸಂದರ್ಭವಿದು.

‘ಆಸಿಯಾನ್’ ಎಂದರೇನು?

ಆಗ್ನೇಯ ಏಷ್ಯಾ ಭೂಭಾಗದ ಹತ್ತು ದೇಶಗಳ ಭೌಗೋಳಿಕ- ರಾಜಕೀಯ- ಆರ್ಥಿಕ ಸಂಘಟನೆಯೇ ಆಸಿಯಾನ್ (ASEAN). ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಪುರ ಹಾಗೂ ಥಾಯ್ಲೆಂಡ್ ಈ ಸಂಘಟನೆಯನ್ನು 1987ರಲ್ಲಿ ಸ್ಥಾಪಿಸಿದವು. ಆ ನಂತರ ಸದಸ್ಯತ್ವವನ್ನು ಬ್ರೂನೈ, ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಂ ದೇಶಗಳಿಗೆ ವಿಸ್ತರಿಸಲಾಯಿತು.

‘ಆಸಿಯಾನ್’ ಸ್ಥಾಪನೆಯ ಗೊತ್ತುಗುರಿಗಳು ಯಾವುವು?

ಸದಸ್ಯ ದೇಶಗಳ ಭೂಪ್ರದೇಶದಲ್ಲಿ ಶಾಂತಿ ಸ್ಥಾಪನೆ, ಸ್ಥಿರತೆಯ ರಕ್ಷಣೆ, ವ್ಯಾಪಾರ- ಸಾಮಾಜಿಕ- ಸಾಂಸ್ಕೃತಿಕ ಅಭಿವೃದ್ಧಿ ಸಾಧನೆ ಈ ಸಂಘಟನೆಯ ಗುರಿ. ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಅವಕಾಶಗಳನ್ನು ಕಲ್ಪಿಸುವುದು ಈ ಸಂಘಟನೆಯ ಉದ್ದೇಶ.

ಭಾರತ ಈ ಸಂಘಟನೆಯ ಸದಸ್ಯ ದೇಶವೇ?

ಭಾರತ ಈ ಸಂಘಟನೆಯ ಸದಸ್ಯ ದೇಶ ಅಲ್ಲ. 1992ರಲ್ಲಿ ವಲಯ ಸಹಭಾಗಿತ್ವವನ್ನು ಭಾರತಕ್ಕೆ ನೀಡಲಾಯಿತು. ಸಂವಾದ ಪಾಲುದಾರಿಕೆ ಮತ್ತು ಪ್ರಾದೇಶಿಕ ವೇದಿಕೆಯ ಸದಸ್ಯತ್ವ 1996ರಲ್ಲಿ ದೊರೆಯಿತು. ಪಾಕಿಸ್ತಾನವನ್ನೂ ಸೇರಿಸಿಕೊಳ್ಳಬೇಕೆಂದು ಇಂಡೋನೇಷ್ಯಾ ಮತ್ತು ಮಲೇಷ್ಯಾ ನಡೆಸಿದ ಪ್ರಯತ್ನಗಳು ಸಫಲವಾಗಲಿಲ್ಲ. ಉಭಯ ರಾಷ್ಟ್ರಗಳ ನಡುವಣ ಹಗೆಯ ಹೊಗೆ ಆಸಿಯಾನ್ ಸಭೆಗಳನ್ನು ಉಸಿರು ಕಟ್ಟಿಸೀತು ಎಂಬ ಇತರೆ ದೇಶಗಳ ಶಂಕೆ ಅಡ್ಡಬಂತು.

ಆಸಿಯಾನ್ ಸಹವಾಸ ಭಾರತಕ್ಕೆ ಯಾಕೆ ಬೇಕಿತ್ತು?

ಏಷ್ಯಾ ವಲಯದಲ್ಲಿ ತಾನು ಮಾಡಿದ್ದೇ ಸರಿಯೆಂದು ಸಮರ್ಥಿಸಿಕೊಳ್ಳುವ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಎದುರಿಸುವ ಮತ್ತು ಪ್ರಬಲ ಶಕ್ತಿಯಾಗಿ ಹೊರಹೊಮ್ಮುವ ಭಾರತದ ಆಶೋತ್ತರವೇ ಅದನ್ನು ಆಸಿಯಾನ್ ಜೊತೆ ಹೆಚ್ಚು ಹೆಚ್ಚು ಬೆಸೆಯಿತು. ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಶೇ 10ರಷ್ಟು ಮೊತ್ತದ ಮೂಲ ಆಸಿಯಾನ್ ದೇಶಗಳು. ಆಸಿಯಾನ್ ವ್ಯಾಪಾರ– ವಾಣಿಜ್ಯ ಪಾಲುದಾರ ದೇಶಗಳ ಪೈಕಿ ಚೀನಾ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗೂ ಯುರೋಪಿಯನ್ ಒಕ್ಕೂಟದ ನಂತರದ ಏಳನೆಯ ಸ್ಥಾನ ಭಾರತದ್ದು. 10 ಸಾವಿರ ಕೋಟಿಗಳಷ್ಟು ಡಾಲರುಗಳ ಮೊತ್ತದ (ಅಂದಾಜು ₹ 6.50 ಲಕ್ಷ ಕೋಟಿ) ದ್ವಿಪಕ್ಷೀಯ ವ್ಯಾಪಾರೋದ್ಯಮದ ಗುರಿಯನ್ನು ಈ ವೇಳೆಗೆ ಮುಟ್ಟಬೇಕೆಂದು 2012ರಲ್ಲಿ ನಿಗದಿ ಮಾಡಲಾಗಿತ್ತು. ಈವರೆಗೆ 7600 ಕೋಟಿ ಡಾಲರುಗಳ ಮೊತ್ತದ (ಅಂದಾಜು ₹ 4.94 ಲಕ್ಷ ಕೋಟಿ) ದ್ವಿಮುಖ ವ್ಯಾಪಾರ ಸಾಧಿಸಲಾಗಿದೆ.

ಭಾರತ ಮತ್ತು ಆಸಿಯಾನ್ ದೇಶಗಳ ಒಟ್ಟು ಜನಸಂಖ್ಯೆ 185 ಕೋಟಿ (ಜಗತ್ತಿನ ಶೇ 30ರಷ್ಟು). ಮೂರನೆಯ ಅತಿ ದೊಡ್ಡ ಅರ್ಥವ್ಯವಸ್ಥೆ. ಭಯೋತ್ಪಾದನೆ ಕುರಿತ ಸಮಾನ ಕಾಳಜಿಯಿಂದ ಮೊದಲುಗೊಂಡು, ವ್ಯಾಪಾರ ಮತ್ತು ಪ್ರವಾಸೋದ್ಯಮ ವಲಯಗಳಲ್ಲಿ ಅಪರಿಮಿತ ಅವಕಾಶಗಳು ಭಾರತ-ಆಸಿಯಾನ್ ಸಂಬಂಧವನ್ನು ಗಟ್ಟಿಗೊಳಿಸಿವೆ.

ಆಸಿಯಾನ್ ದೆಹಲಿ ಶೃಂಗಸಭೆಗೆ ಮೋದಿ ಕಾರ್ಯಸೂಚಿ ಏನು?

ಭಾರತಕ್ಕೆ ಭಯೋತ್ಪಾದನೆಯ ರವಾನೆಯ ಪಾಕಿಸ್ತಾನದ ಹುನ್ನಾರದ ವಿರುದ್ಧ ಆಸಿಯಾನ್ ಬೆಂಬಲ ಗಳಿಕೆ ಪ್ರಧಾನಿಯವರ ಗುರಿ. ಹಾಲಿ ಶೃಂಗಸಭೆಯ ದೆಹಲಿ ಘೋಷಣೆಯು ‘ಗಡಿಯಾಚೆಯಿಂದ ಭಯೋತ್ಪಾದನೆ’ ವಿರುದ್ಧ ದನಿ ಎತ್ತಿತು. ಭಯೋತ್ಪಾದಕರನ್ನು, ಭಯೋತ್ಪಾದನಾ ಜಾಲವನ್ನು, ಭಯೋತ್ಪಾದಕ ಗುಂಪುಗಳನ್ನು ಆಡಗಿಸುವಲ್ಲಿ ಆಸಿಯಾನ್ ದೇಶಗಳು ಮತ್ತು ಭಾರತದ ನಡುವೆ ಸಂಪೂರ್ಣ ಸಹಕಾರದ ಒಪ್ಪಂದ ಏರ್ಪಟ್ಟಿತು. ಭಯೋತ್ಪಾದನಾ ಕೃತ್ಯಗಳಿಗೆ ಯಾವ ಕಾರ್ಯಕಾರಣಗಳೂ ಸಮರ್ಥನೆ ಆಗಲಾರವು ಎಂದು ದೆಹಲಿ ಘೋಷಣೆ ಸಾರಿತು. 2019ನೆಯ ಸಾಲನ್ನು ಪ್ರವಾಸೋದ್ಯಮ ವರ್ಷವೆಂದು ಭಾರತ-ಆಸಿಯಾನ್ ದೇಶಗಳು ಆಚರಿಸಬೇಕು ಎಂದು ಪ್ರಧಾನಿ ಘೋಷಿಸಿದ್ದಾರೆ. ಭಾರತದ ಡಿಜಿಟಲ್ ಬಾಹುಬಲವನ್ನು ಆಸಿಯಾನ್ ಗ್ರಾಮಾಂತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ವಿಸ್ತರಿಸುವುದಾಗಿ ಹೇಳಿದ್ದಾರೆ.

ಈ ಸಂಘಟನೆಗೆ ಭಾರತದ ಅಗತ್ಯವೇನು?

ಆಸಿಯಾನ್ ವಲಯದಲ್ಲಿ ತನ್ನ ಪ್ರಾಬಲ್ಯ ಪ್ರಶ್ನಾತೀತ ಎನ್ನುವ ಮಟ್ಟಿಗೆ ಚೀನಾ ವ್ಯಾಪಿಸಿಕೊಂಡಿದೆ. ತಮ್ಮ ಪ್ರಾದೇಶಿಕ ಸಾರ್ವಭೌಮತ್ವವನ್ನು ತನ್ನ ಪದತಲದಲ್ಲಿ ಶರಣಾಗಿಸಬೇಕು ಎನ್ನುವ ಮಟ್ಟಿಗೆ ತನ್ನ ನೆರೆಹೊರೆಯ ಆಸಿಯಾನ್ ದೇಶಗಳನ್ನು ಚೀನಾ ಬ್ಲ್ಯಾಕ್‌ಮೇಲ್ ಮಾಡತೊಡಗಿದೆ. ಬಹುಮುಖ್ಯ ದ್ವೀಪಗಳನ್ನು ಏಕಪಕ್ಷೀಯವಾಗಿ ವಶಪಡಿಸಿಕೊಂಡಿದೆ. ಅಮೆರಿಕೆಯೂ ತನ್ನ ಬಾಹುಗಳನ್ನು ಬಳಸಿ ಚಾಚಿದೆ. ಈ ಎರಡು ದೊಡ್ಡಣ್ಣಗಳ ಅಬ್ಬರದ ವಿರುದ್ಧ ಸಮತೂಕವನ್ನು ಕಾಯುವ ಶಕ್ತಿಯಾಗಿ ಭಾರತ ಇರಬೇಕೆಂದು ಆಸಿಯಾನ್ ದೇಶಗಳು ಬಯಸಿವೆ. ಈ ವಲಯದ ನಿರೀಕ್ಷೆಯ ಎತ್ತರಕ್ಕೆ ಭಾರತ ಏರಬಲ್ಲದೇ ಎಂಬುದನ್ನು ಜಗತ್ತು ಕಾದು ನೋಡುತ್ತಿದೆ.

ಆಸಿಯಾನ್ ಎದುರಿಸಿರುವ ಟೀಕೆ ಏನು?

ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತೆ ಕೃತಿಗಿಂತ ಮಾತೇ ಮುಂದು ಎಂಬ ಟೀಕೆಯನ್ನು ಆಸಿಯಾನ್‌ನ ವಾರ್ಷಿಕ ಶೃಂಗಸಭೆಗಳು ಎದುರಿಸಿರುವುದು ಉಂಟು. ಐವತ್ತು ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿದ ಆಸಿಯಾನ್ ವಲಯದಲ್ಲಿ ತಮ್ಮ ಆರ್ಥಿಕ ಮತ್ತು ರಾಜಕೀಯ ಛಾಪು ಮೂಡಿಸಲು ಅಮೆರಿಕೆ ಮತ್ತು ಚೀನಾ ಲಾಗಾಯಿತಿನಿಂದ ಪೈಪೋಟಿ ನಡೆಸುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.