ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಥಾಗರಸ್‌ ಪರಂಪರೆ

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

–ಸುಜನ್‌ 

ಪೈಥಾಗರಸ್‌ನ ಹೆಸರನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ಕೂಡ ಕೇಳಿರುತ್ತಾರಲ್ಲವೆ? ಅವನ ಹೆಸರಿನಲ್ಲಿರುವ ಪ್ರಮೇಯವೇ ಇದಕ್ಕೆ ಕಾರಣ. ಪ್ರಾಚೀನ ಗ್ರೀಸ್‌ನ ತತ್ತ್ವಶಾಸ್ತ್ರ ಪರಂಪರೆಯಲ್ಲಿ ‘ಪೈಥಾಗರಸ್‌ ಪರಂಪರೆ’ ಕೂಡ ಉಲ್ಲೇಖಾರ್ಹವಾಗಿದೆ.

ಪೈಥಾಗರಸ್‌ನ ಕಾಲ ಕ್ರಿ.ಪೂ. 582–500 ಎಂಬ ಎಣಿಕೆಯಿದೆ. ಇವನು ಮಿಲೆಟಸ್‌ ಸಮೀಪದಲ್ಲಿರುವ ಸ್ಯಾಮೋಸ್‌ ದ್ವೀಪದವನು. ಕೆಲವರು ಇತಿಹಾಸಕಾರರು ಅವನ ಐತಿಹಾಸಿಕತೆಯ ಬಗ್ಗೆಯೇ ಸಂದೇಹವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಹಲವರು ಪ್ರಾಚೀನ ಇತಿಹಾಸಕಾರರು ಮತ್ತು ತತ್ತ್ವಶಾಸ್ತ್ರಜ್ಞರು ಅವನನ್ನು ಉಲ್ಲೇಖಿಸಿದ್ದಾರೆ. ಪ್ಲೇಟೋ ತನ್ನ ‘ರಿಪಬ್ಲಿಕ್‌’ನಲ್ಲಿ ಒಮ್ಮೆ ಪೈಥಾಗರಸ್‌ನನ್ನು ಸ್ಮರಿಸಿದ್ದಾನೆ.

ವಿಚಾರಕ್ಕೆ ಅಧ್ಯಾತ್ಮವನ್ನೂ ಗಣಿತವನ್ನೂ ಬೆಸೆದವನು ಪೈಥಾಗರಸ್‌. ಅವನ ಆಲೋಚನೆಗಳ ಮೇಲೆ ಈಜಿಪ್ಟ್‌ ಮತ್ತು ಬ್ಯಾಬಿಲೋನಿಯಾಗಳ ಪ್ರಭಾವ ಇತ್ತೆಂದು ಕೆಲವರು ವಿದ್ವಾಂಸರು ಪ್ರತಿಪಾದಿಸಿದ್ದಾರೆ. ಅವನ ಗಣಿತದ ಮೇಲೆ ಪೌರಸ್ತ್ಯ ಸಂಸ್ಕೃತಿಗಳ ಪ್ರಭಾವವೂ ಇತ್ತೆಂದೂ ಹೇಳುತ್ತಾರೆ. ಆತ್ಮದ ಅಮರತ್ವ ಬೋಧಿಸುತ್ತಿದ್ದ ಅವನು, ಶರೀರವೇ ಒಂದು ಬಂಧನ – ಎಂದು ಪ್ರತಿಪಾದಿಸುತ್ತಿದ್ದವನು. ಪೈಥಾಗರಸ್‌ ಪಂಥದವರು ಕೆಲವೊಂದು ಧಾರ್ಮಿಕ ಆಚರಣೆಗಳನ್ನು ತುಂಬ ನಿಗೂಢವಾಗಿ ಆಚರಿಸುತ್ತಿದ್ದರಂತೆ. ಅವನ ಪ್ರಖ್ಯಾತ ‘ಸಮಕೋನ ತ್ರಿಭುಜ’ದ ಪ್ರಮೇಯವನ್ನು ಕಂಡುಹಿಡಿದ ಮೇಲೆ ಒಂದು ಎತ್ತನ್ನು ಅವನು ಬಲಿಕೊಟ್ಟನಂತೆ!

  ಆತ್ಮದ ದೇಹಾಂತರ ಪ್ರವೇಶದ ಬಗ್ಗೆ ಪೈಥಾಗರಸ್‌ಗೆ ತುಂಬ ನಂಬಿಕೆಯಿದ್ದಿತು. ಹೀಗಾಗಿ ಅವನು ಮಾಂಸಾಹಾರವನ್ನು ಕೂಡ ವಿರೋಧಿಸುತ್ತಿದ್ದ. ಪ್ರಾಣಿಗಳು ಸತ್ತಮೇಲೆ ಅವುಗಳ ಆತ್ಮಗಳು ಅವುಗಳನ್ನು ಕೊಂದವರ ದೇಹವನ್ನು ಪ್ರವೇಶಿಸುತ್ತವೆ ಎಂದು ಅವನು ನಂಬಿದ್ದನಂತೆ.

ಸಂಗೀತಶಾಸ್ತ್ರಕ್ಕೂ ಪೈಥಾಗರಸ್‌ನ ಕೊಡುಗೆ ಸಂದಿದೆ ಎನ್ನುವುದು ವಿದ್ವಾಂಸರ ವಾದ. ಅವನ ಪ್ರಯೋಗಶೀಲತೆಯ ಬಗ್ಗೆ ಕ್ರಿ. ಶ. ಆರನೇ ಶತಮಾನದ ಬಿಥಿಯಸ್‌ ಒಂದು ಕಥೆಯನ್ನು ಹೇಳಿದ್ದಾನೆ:

‘ಪೈಥಾಗರಸನು ಒಂದು ಕಮ್ಮಾರನ ಅಂಗಡಿಯ ಮುಂದೆ ಸಾಗುತ್ತಿರುತ್ತಾನೆ. ಆಗ ಸುತ್ತಿಗೆಯ ಹೊಡೆತಗಳು ಅಡಿಗಲ್ಲಿನ ಮೇಲೆ ಬೀಳುತ್ತಾ ಬೀಳುತ್ತಾ ಸ್ವಲ್ಪ ಹೆಚ್ಚು ಕಡಿಮೆ ಒಂದು ವಿಧದ ಸಂಗೀತ ತರಂಗಗಳೇಳುತ್ತಿರುತ್ತವೆ. ಈ ಸಂಗತಿ ಥಟ್ಟನೆ ಪೈಥಾಗರಸನನ್ನು ಅಲ್ಲಿಯೇ ತಡೆದು ನಿಲ್ಲಿಸುತ್ತದೆ. ತನ್ನೊಳಗಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಹೊಸ ಸಂದರ್ಭ ಒದಗಿ ಬಂದು, ತಡೆಯಲಾಗದೆ ಕುಲುಮೆಯ ಬಳಿ ನಡೆಯುತ್ತಿರುವ ಸಂಗತಿಯನ್ನು ಗಮನಿಸುತ್ತಾ ನಿಲ್ಲುತ್ತಾನೆ. ಅಲ್ಲಿ ಉಂಟಾಗುತ್ತಿದ್ದ ವಿವಿಧ ನಾದಗಳ ಉತ್ಪತ್ತಿಯು ಸುತ್ತಿಗೆಯಿಂದ ಬಡಿಯುತ್ತಿದ್ದ ವ್ಯಕ್ತಿಯ ಬಲದ ಮೇಲೆ ಅವಲಂಬಿತವಾಗಿದೆ ಎಂದು ಅವನಿಗೆ ಅನಿಸುತ್ತದೆ...’

ಈ ಕಥೆಯನ್ನು ವಿಮರ್ಶಿಸುತ್ತ ಫ್ಯಾರಿಂಗ್‌ಟನ್‌ ‘ಈ ಮಾರ್ಗದಲ್ಲಿ ತುಸು ಗೊಂದಲಗಳಿವೆ. ಈ ಸುತ್ತಿಗೆ ಪ್ರಯೋಗಗಳಿಂದ ಈ ಬಗೆಯ ಫಲಿತಾಂಶಗಳು ಬರಲು ಸಾಧ್ಯವಿಲ್ಲ... ಅದಾಗ್ಗ್ಯೂ ವಿಜ್ಞಾನದ ಇತಿಹಾಸದಲ್ಲಿ ಇಂತಹ ಪ್ರಯೋಗವೊಂದು ಅತ್ಯಂತ ಗಮನಾರ್ಹವಾದದ್ದು’ ಎಂದಿದ್ದಾನೆ.

(‘ಪ್ರಾಚೀನ ಗ್ರೀಸಿನಲ್ಲಿ ತತ್ತ್ವಶಾಸ್ತ್ರ’, ಡಾ. ಆರ್‌. ದತ್ತ; ಕನ್ನಡಕ್ಕೆ: ಪ್ರೊ. ಟಿ. ವೆಂಕಟೇಶಮೂರ್ತಿ)

***

ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001 email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT