ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಪಥದಲ್ಲಿ ಸೇನಾ ಬಲ, ಪರಂಪರೆಯ ಝಲಕ್‌

ವರ್ಣರಂಜಿತ ಸಮಾರಂಭದಲ್ಲಿ ದಕ್ಷಿಣ ಏಷ್ಯಾ ದೇಶಗಳ ನಾಯಕರು ಭಾಗಿ
Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸೇನಾ ಶೌರ್ಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಝಲಕ್‌ ಅನ್ನು ದಕ್ಷಿಣ ಏಷ್ಯಾದ ಹತ್ತು ದೇಶಗಳ ನಾಯಕರೆದುರು ಭಾರತವು 69ನೇ ಗಣರಾಜ್ಯೋತ್ಸವ ದಿನದಂದು ಪ್ರದರ್ಶಿಸಿತು. 90 ನಿಮಿಷಗಳ ಈ ಭವ್ಯ ಪ್ರದರ್ಶನ ಸೇರಿದ್ದ ಸಾವಿರಾರು ಜನರನ್ನು ಮೂಕವಿಸ್ಮಿತಗೊಳಿಸಿತು.

ಎಂಐ–17 ವಿಮಾನಗಳು ಪ್ರದರ್ಶಿಸಬೇಕಿದ್ದ ಸ್ವಾಗತ ಹಾರಾಟವು ಬೆಳ್ಳಂಬೆಳಗ್ಗಿನ ಮಂಜಿನ ತೆರೆಯಿಂದಾಗಿ ನಡೆಯಲಿಲ್ಲ. ತ್ರಿವರ್ಣ ಧ್ವಜ ಮತ್ತು ಆಸಿಯಾನ್‌ನ ಧ್ವಜಗಳನ್ನು ಹೊತ್ತು ರಾಜಪಥದ ಮೇಲೆ ಈ ವಿಮಾನಗಳು ಹಾರಬೇಕಿದ್ದವು.

ಇದೊಂದನ್ನು ಬಿಟ್ಟು ಉಳಿದ ಎಲ್ಲ ಕಾರ್ಯಕ್ರಮಗಳೂ ನಿಗದಿಯಂತೆ ನಡೆದವು. ಸೇನಾ ಶಕ್ತಿಯ ಪ್ರದರ್ಶನದ ಜತೆಗೆ ದೇಶೀಯ ಸೇನಾ ಸಲಕರಣೆಗಳ ತಯಾರಿಕೆಯ ಪರಿಣತಿಯನ್ನೂ ರಾಜಪಥದಲ್ಲಿ ನೋಡಬಹುದಿತ್ತು. ಆಕಾಶ್‌ ವಾಯುಪ್ರದೇಶ ರಕ್ಷಣಾ ಕ್ಷಿಪಣಿ ವ್ಯವಸ್ಥೆ, ಬ್ರಹ್ಮೋಸ್‌ ಕ್ಷಿಪಣಿ ಮತ್ತು ವಿಮಾನ ವಾಹಕ ವಿಕ್ರಾಂತ್‌ ನೌಕೆಯ ಪ್ರತಿಕೃತಿಯನ್ನು ಪ್ರದರ್ಶಿಸಲಾಗಿತ್ತು.

ದೆಹಲಿ ಪ್ರದೇಶದ ಸೇನಾ ಕಮಾಂಡಿಂಗ್‌ ಅಧಿಕಾರಿ ಲೆ. ಜ. ಅಸಿತ್‌ ಮಿಸ್ತ್ರಿ ಅವರ ನೇತೃತ್ವದಲ್ಲಿ ರಜಪೂತ ರೈಫಲ್ಸ್‌ನ ಯೋಧರು ಆಸಿಯಾನ್‌ನ ಹತ್ತು ದೇಶಗಳ ಧ್ವಜಗಳನ್ನು ಹಿಡಿದು ಪಥಸಂಚಲನ ಆರಂಭಿಸಿದರು.

ಸ್ತಬ್ಧಚಿತ್ರ ವಿಭಾಗದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಸಿಯಾನ್‌ ದೇಶಗಳ ಜತೆಗಿನ ಸಂಬಂಧವನ್ನು ಬಿಂಬಿಸುವ
ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಿತು.

ಈ ದೇಶಗಳ ಸಾಂಸ್ಕೃತಿಕ ಹಿರಿಮೆಯೂ ಅದರಲ್ಲಿ ಅನಾವರಣಗೊಂಡಿತು. ವಿವಿಧ ರಾಜ್ಯಗಳು ಮತ್ತು ಇಲಾಖೆಗಳ ಸ್ತಬ್ಧಚಿತ್ರಗಳು ರಾಜಪಥದಲ್ಲಿ ಹಾದುಹೋದವು. ಒಟ್ಟು 23 ಸ್ತಬ್ಧಚಿತ್ರಗಳು ಇದ್ದವು. ಇವು ಹಾದು ಹೋಗುತ್ತಿದ್ದಂತೆಯೇ ಆಸಿಯಾನ್‌ ದೇಶಗಳ ಮುಖಂಡರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಪರಸ್ಪರರ ಜತೆಗೆ ಅವರು ಹರಟುತ್ತಿದ್ದರು. ಈ ಸಂದರ್ಭದ ಸೆಲ್ಫಿಗಳನ್ನೂ ಅವರು ತೆಗೆದುಕೊಂಡರು.

ಕೊನೆಯಲ್ಲಿ, ಭಾರತೀಯ ವಾಯುಪಡೆಯ ಮೈನವಿರೇಳಿಸುವ ಪ್ರದರ್ಶನ ನಡೆಯಿತು. ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಅತ್ಯಂತ ಕೆಳಗಿನಿಂದ ಹಾರಾಡಿದವು. ಜತೆಗೆ, ಮಿಗ್‌–29, ಎಸ್‌ಯು–30, ತೇಜಸ್‌ ಲಘು ಯುದ್ಧ ವಿಮಾನಗಳು, ಜಾಗ್ವಾರ್‌ ಯುದ್ಧ ವಿಮಾನಗಳು ಆಗಸವನ್ನು ಭೇದಿಸಿ ರೋಮಾಂಚನ ಮೂಡಿಸಿದವು. ಗಣರಾಜ್ಯೋತ್ಸವ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ರುದ್ರ ಶಸ್ತ್ರಸಜ್ಜಿತ
ಹೆಲಿಕಾಪ್ಟರ್‌ಗಳು ಭಾಗವಹಿಸಿದ್ದವು.

ವಿಶ್ವದಾದ್ಯಂತ ಗಣರಾಜ್ಯೋತ್ಸವ
ಬೀಜಿಂಗ್‌/ಮಾಸ್ಕೊ:
ವಿಶ್ವದಾದ್ಯಂತ ಭಾರತೀಯರು ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ 69 ನೇ ಗಣರಾಜ್ಯೋತ್ಸವ ಆಚರಿಸಿದರು.

ಚೀನಾದ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ರಾಯಭಾರಿ ಗೌತಮ್‌ ಬಂಬಾವಾಲೆ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಭಾಷಣವನ್ನು ಓದಿದರು. ಅನಂತರ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 300ಕ್ಕಿಂತಲೂ ಹೆಚ್ಚು ಮಂದಿ ಭಾರತೀಯರು ಪಾಲ್ಗೊಂಡಿದ್ದರು.

ಭಾಗವಹಿಸಿದ ಆಸಿಯಾನ್‌ ಗಣ್ಯರು

ಅಧ್ಯಕ್ಷರು
* ಜೊಕೊ ವಿಡೊಡೊ (ಇಂಡೋನೇಷ್ಯಾ)
* ರಾಡ್ರಿಗೊ ಡುಟರ್ಟೆ (ಫಿಲಿಪ್ಪೀನ್ಸ್‌)

ಪ್ರಧಾನಿಗಳು
* ಲೀ ಶಿಯನ್‌ ಲೂಂಗ್‌ (ಸಿಂಗಪುರ)
* ಗುವೆನ್‌ ಕ್ಸುವನ್‌ ಫುಕ್‌ (ವಿಯೆಟ್ನಾಂ)
* ಮೊಹಮ್ಮದ್‌ ನಜೀಬ್‌ ಬಿನ್‌ ಟುನ್‌ ಹಾಜಿ ಅಬ್ದುಲ್‌ ರಜಾಕ್‌ (ಮಲೇಷ್ಯಾ)
* ಜ. ಪ್ರಯುತ್‌ ಚನ್‌–ಒ–ಚಾ (ಥಾಯ್ಲೆಂಡ್‌)
* ಥಾಂಗ್ಲೌನ್‌ ಸಿಸೌಲಿಥ್‌ (ಲಾವೋಸ್‌)
* ಹುನ್‌ ಸೆನ್‌ (ಕಾಂಬೋಡಿಯಾ)
* ಬ್ರೂನಿಯ ಸುಲ್ತಾನ ಹಾಜಿ ಹಸನಲ್‌ ಬೊಲ್ಕಿಯ ಮುಯಿಜದ್ದೀನ್‌ ವದಾವುಲ್ಲಾ
* ಮ್ಯಾನ್ಮಾರ್‌ನ ಸ್ಟೇಟ್‌ ಕೌನ್ಸಿಲರ್‌ ಆಂಗ್‌ ಸಾನ್‌ ಸೂಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT