ಅಂಡಾಣು ದಾನದ ವಿವಿಧ ಆಯಾಮ

7

ಅಂಡಾಣು ದಾನದ ವಿವಿಧ ಆಯಾಮ

Published:
Updated:
ಅಂಡಾಣು ದಾನದ ವಿವಿಧ ಆಯಾಮ

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ ಸೇರಿದಂತೆ ಅನೇಕ ಮೆಟ್ರೊ ನಗರಗಳಲ್ಲಿ ಅಂಡಾಣು ದಾನವು ಉದ್ಯಮದ ರೂಪ ಪಡೆಯುತ್ತಿದೆ. ಅಂಡಾಣು ದಾನಿಗಳ ಪಟ್ಟಿಯಲ್ಲಿ ಹದಿಹರೆಯದ ಬಾಲಕಿಯರೂ ಇದ್ದಾರೆ! ಹಣ ಗಳಿಕೆಯ ಸುಲಭ ಮಾರ್ಗವಾಗಿ ಅಂಡಾಣು ಮಾರಾಟವನ್ನು ಆಯ್ದುಕೊಳ್ಳುವವರು ಮತ್ತು ಹಣದ ಆಮಿಷ ಒಡ್ಡಿ ಅಂಡಾಣು ಮಾರಾಟಕ್ಕೆ ಓಲೈಸುವವರ ಮೇಲೆ ಕಟ್ಟುನಿಟ್ಟಿನ ಕಣ್ಗಾವಲಿಡಲು ಈಗಿರುವ ಐಸಿಎಂಆರ್‌ ನಿಯಮಗಳಿಂದ ಸಾಧ್ಯವಾಗುತ್ತಿಲ್ಲ! ಈ ವರ್ತುಲದೊಳಗೆ ಸುತ್ತುಹಾಕಿದ ‘ಪ್ರಜಾವಾಣಿ’ ಕಂಡದ್ದು...

***

‘ನಾನು ಯಾವುದೋ ಒಂದು ಸುಳ್ಳು ಹೆಸರು ಹೇಳುವ ಬದಲು ನೀವೇ ನಿಮಗಿಷ್ಟವಾದ ಹೆಸರಿಟ್ಟುಕೊಳ್ಳಿ. ನಮ್ಮೂರು ಅರುಣಾಚಲ ಪ್ರದೇಶದ ಯಾವುದೋ ಒಂದು ಜಿಲ್ಲೆ... ಬೇಕಿದ್ದರೆ ಚಾಂಗ್ಲಾಂಗ್ ಅಂದುಕೊಳ್ಳಿ. ನಿಮ್ಮ ದಾರಿ ತಪ್ಪಿಸಲು ನಾನು ಇಂತಹ ಕೆಲ ಸುಳ್ಳು ಸೇರಿಸಬಹುದು. ಆದರೆ ನನ್ನ ಕಥೆ ಸುಳ್ಳಲ್ಲ’.

ಬೆಂಗಳೂರಿನ ಕನ್ನಿಂಗ್‌ಹ್ಯಾಮ್‌ ರಸ್ತೆಯ ಕಾಫಿ ಶಾಪ್‌ನಲ್ಲಿ ಕೂತು ಹೀಗೆ ನೇರ ನೇರ ಮಾತಿಗಿಳಿದ ಈ ದಿಟ್ಟೆ, ನರ್ಸಿಂಗ್‌ ವಿದ್ಯಾರ್ಥಿನಿ.

‘ಎಗ್ ಡೋನರ್‌ (ಅಂಡಾಣು ದಾನಿ) ಆಗಬೇಕು ಅಂತ ನಿರ್ಧರಿಸಿದಾಗ ನನಗೆ 20 ವರ್ಷ. ಯಾರದೋ ಉದ್ಧಾರಕ್ಕಾಗಿ ನಾನು ಈ ನಿರ್ಧಾರ ಕೈಗೊಳ್ಳಲಿಲ್ಲ. ನನಗೆ ಹಣದ ತುರ್ತು ಇತ್ತು. ಅನೇಕ ಎಆರ್‌ಟಿ (Assisted Reproductive Technology) ಬ್ಯಾಂಕ್‌ಗಳವರು ಕನಿಷ್ಠ 21 ವರ್ಷವಾಗಿರಬೇಕು ಅಂದರು. ನನ್ನ ವಯಸ್ಸಿನ ದಾಖಲೆ ಕಳೆದುಹೋಗಿದೆ ಅಂತ ಒಬ್ಬ ಏಜೆಂಟರಿಗೆ ಸುಳ್ಳು ಹೇಳಿ ನಂಬಿಸಿದೆ (ಇಲ್ಲಿ ನಾವು ಏಜೆಂಟರನ್ನು ನಂಬಿಸಿದರೆ ಸಾಕು. ಮುಂದೆ ಎಆರ್‌ಟಿ ಬ್ಯಾಂಕ್‌ ಹಾಗೂ ವೈದ್ಯರನ್ನು ನಂಬಿಸುವ ಕೆಲಸ ಅವರದೇ). ಇದು ‘ವಿಕ್ಕಿ ಡೋನರ್‌’ನಷ್ಟು ಸುಲಭವೇನಲ್ಲ. ಖಾಸಗಿ ಕೋಣೆಯೊಂದರಲ್ಲಿ ಉದ್ರೇಕಗೊಳ್ಳುವ ಕೆಲವು ಚಿತ್ರಗಳನ್ನು ಅಥವಾ ವಿಡಿಯೊಗಳನ್ನು ನೀಡಿದರೆ ವೀರ್ಯಾಣು ಸಂಗ್ರಹ ಪ್ರಕ್ರಿಯೆ ಮುಗಿದು ಹೋಗುತ್ತದೆ. ಆದರೆ ಇದು ಹಾಗಲ್ಲ. ಹೆಚ್ಚು ಅಂಡಾಣು ಬೆಳೆಯಲು ಸತತವಾಗಿ 10-12 ದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕು.

ಇದರಿಂದ ಆರೋಗ್ಯದಲ್ಲಿ ಏರು–ಪೇರು ಆಗುತ್ತದೆ. ವೈದ್ಯಕೀಯ ವಿದ್ಯಾರ್ಥಿನಿಯಾದ ನನಗೆ ಇದರ ಅರಿವಿತ್ತು. ಆದರೆ ನನ್ನ ಮುಂದೆ ಬೇರೆ ದಾರಿಗಳಿರಲಿಲ್ಲ. 40 ಸಾವಿರದಿಂದ 60 ಸಾವಿರ ರೂಪಾಯಿವರೆಗೂ ಹಣ ಸಿಗುತ್ತದಲ್ಲ... ಇಷ್ಟು ಕಷ್ಟಪಡಬೇಕಲ್ಲವೇ?’

‘ಅಪ್ಪನ ಅಕಾಲಿಕ ಮರಣದಿಂದ ನಾನು ನನ್ನ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಬೇಕಾಗಿತ್ತು... ಅಪ್ಪನನ್ನು ಕಳೆದುಕೊಂಡೆ. ಅಪ್ಪನ ಕನಸನ್ನೂ, ಅಮ್ಮನನ್ನೂ ನಾನು ಸಲುಹಬೇಕಿತ್ತು. ಈ ತಿಂಗಳು ನನ್ನ ಎರಡನೇ ಸೆಷನ್‌ ಇದೆ. ಓದು ಮುಗಿದು ನಾನು ಊರಿಗೆ ಮರಳುವಷ್ಟರಲ್ಲಿ ಇನ್ನೊಮ್ಮೆ ಕೊಡುತ್ತೇನೆ. ಈ ಹಣದಲ್ಲಿ ನನ್ನ ಓದು ಮುಗಿದು, ನನ್ನಮ್ಮನಿಗೆ ಅಲ್ಲಿಯೇ ಒಂದು ಪುಟ್ಟ ಮನೆಯನ್ನು ಲೀಸ್‌ಗೆ ಹಾಕಿಕೊಡಬೇಕು. ಆನಂತರ ನಾನು ಕೆಲಸ ಹುಡುಕಬೇಕು...’

ಇಷ್ಟು ಹೇಳಿ ಎದ್ದು ಹೋಗುವ ಮುನ್ನ ಅರುಣಾಚಲ ಪ್ರದೇಶದ ಅಮೃತಾ ಮತ್ತೊಂದು ಮಾತು ಸೇರಿಸಿದರು ‘ಹಣಕ್ಕೆ ಮೈ ಮಾರಿಕೊಳ್ಳುವುದಕ್ಕಿಂತ, ಅಂಡಾಣು ಮಾರಿಕೊಳ್ಳುವುದು ಹಿತವಲ್ಲವೇ?’ ಎಆರ್‌ಟಿ ಬ್ಯಾಂಕ್‌ನ ಏಜೆಂಟರೊಬ್ಬರ ಮೂಲಕ ಸತತವಾಗಿ ಮನವೊಲಿಸಿದ ಪರಿಣಾಮ ತನ್ನ ನಿಜ ಹೆಸರು ಬಿಟ್ಟುಕೊಡದೇ ಅಮೃತಾ ಇಷ್ಟು ಹೇಳಿದ್ದೇ ಹೆಚ್ಚು.

***

‘ಎಗ್‌ ಡೋನರ್‌’ ಅಂದರೆ ‘ಅಂಡಾಣು ದಾನಿ’. ಕಳೆದ 10–15 ವರ್ಷಗಳಲ್ಲಿ ಅಂಡಾಣು ಬೇಡಿಕೆ ದ್ವಿಗುಣಗೊಂಡಿದೆ. ವೈದ್ಯಕೀಯ ವಲಯದ ಪ್ರಗತಿಯ ಜೊತೆ ಜೊತೆಗೇ ಅಂಡಾಣು ದಾನದ ಮುಖವೂ ಬದಲಾಗುತ್ತಿದೆ. ಒಂದು ದಶಕದಿಂದ ಈಚೆಗೆ ದೊಡ್ಡ ಸದ್ದು ಮಾಡುತ್ತಿರುವ ಅಂಡಾಣು ಮಾರಾಟ, ನಿಯಮ ಮೀರಿ ಬೆಳೆಯುತ್ತಿದೆಯೇ ಎನ್ನುವ ಅನುಮಾನದ ಬೆನ್ನು ಹತ್ತಿ ಹೋದಾಗ ಎದುರಾಗಿದ್ದು ಅಂಡಾಣು ದಾನಿಗಳ ಮನಕಲುಕುವ ಕತೆಗಳೇ.

ಬೆಂಗಳೂರಿನ ಜಾಲಹಳ್ಳಿಯ ಪುಟ್ಟ ಮನೆಯಲ್ಲಿ ಮಾತಿಗೆ ಸಿಕ್ಕವರು ಬಳ್ಳಾರಿಯ 27 ವರ್ಷದ ಭವಾನಿ. ತನ್ನ ದುರಂತ ಬದುಕಿನ ಜೊತೆ ಜೊತೆಗೇ ಅಂಡಾಣು ಮಾರಾಟದ ಮತ್ತೊಂದು ಆಯಾಮವನ್ನು ಭವಾನಿ ತೆರೆದಿಟ್ಟರು.

‘ಎಕ್ಸಿಜೆಂಟ್‌ ಆಗಿ ನಮ್ಮವರು ಪೂರ್ತಿ ಹಾಸಿಗಿ ಹಿಡದ್ರು. ಎರಡು ಮಕ್ಕಳ್ನ ಕಟ್ಗೊಂಡು ನಾನು ಸಂಸಾರ ಎಳೀಬೇಕಾಯ್ತು. ನಾನೂ ಕೆಲಸ ಮಾಡ್ತಿದ್ನಿ, 9 ಸಾವಿರ ರೂಪಾಯಿ ಪಗಾರ‍್ರೀ ನನಗ. ಮನಿ ಬಾಡಿಗಿ, ದಿನಸಿ, ಗಂಡನ ದವಾಖಾನಿ, ಮಕ್ಳ ಸಾಲಿ–ಸಮದ... ಏನ್‌ ಮಾಡೂದು ಅಂತ ಗೊತ್ತಾಗ್ದ ಒದ್ದಾಡಾಕತ್ತಿದ್ನಿ. ನಮ್ಮನಿ ಹಂತ್ಯಾಕ ಒಬ್ರು ದವಾಖಾನ್ಯಾಗ ಕೆಲಸ ಮಾಡ್ತಾರ‍್ರಿ... ಅವರೇ ನನಗ ಈ ದಾರಿ ತೋರಿಸಿದ್ರು... ಹತ್ತು ದಿನ ಇಂಜೆಕ್ಷನ್ ತಗೊಂಡ್ನಿ, ಏನೂ ತ್ರಾಸ್ ಆಗ್ಲಿಲ್ರಿ... ಆದ್ರ ಅಂಡಾಣು ಕೊಟ್ಟ ಮ್ಯಾಲ ಒಂದೀಟು ತ್ರಾಸ್ ಆಯ್ತು. ಮೈಯೆಲ್ಲಾ ಉಬ್ಬಿಕೊಂಡ್ತು, ಹೊಟ್ಟಿ ಬ್ಯಾನಿ ಆಯ್ತು... ನನಗೇನೊ ಆಗಿಬಿಡ್ತೇನೊ... ಮುಂದ ನನ್ನ ಮಕ್ಳ ಗತಿ ಏನೊ ಭಗವಂತ ಅಂತ ಅಂಜಿಕಿ ಬಂತು! ಡಾಕ್ಟರ‍್ರು ಜೀವಕ್ಕ ಏನೂ ತೊಂದ್ರಿ ಇಲ್ಲ ಅಂತ ಔಷಧಿ ಕೊಟ್ರು... ಒಮ್ಮಿ 35 ಸಾವಿರ ರೂಪಾಯಿ, ಒಮ್ಮಿ 40 ಸಾವಿರ ರೂಪಾಯಿ ಕೊಟ್ರು... ಪುಣ್ಯಾತ್ಮರು... ನಮಗೂ ರೊಕ್ಕಾ ಸಿಗ್ತಾವು... ಇನ್ನೊಬ್ಬರ ಮನಿಗೆ ದೀಪಾನೂ ಹಚ್ದಂಗ ಆಕೈತಿ... ಏನ್‌ ತಪ್‌ ಹೇಳ್ರಿ?’ ಭವಾನಿ ತಡೆದೂ ತಡೆದೂ ಮಾತಾಡಿದರು.

ಹಾಗೆ ನೋಡಿದರೆ ಬಂಜೆತನದ ನೋವುಣ್ಣುವ ಅನೇಕ ಮಹಿಳೆಯರಿಗೆ ಅಂಡಾಣು ದಾನ ವರದಾನ. ವಂಶವಾಹಿನಿಯ ಸಮಸ್ಯೆ, ವಯೋಸಹಜ ಬಂಜೆತನ, ಗರ್ಭಾಶಯ ಸಂಬಂಧಿ ಸಮಸ್ಯೆಗಳು, ಎಂಡೊಮೆಟ್ರಿಯಾಸಿಸ್ ಅಥವಾ ಕ್ಯಾನ್ಸರ್‌ನಂತಹ ಕಾಯಿಲೆಗೆ ಗುರಿಯಾಗಿ ತಾಯ್ತನದ ಅವಕಾಶದಿಂದ ವಂಚಿತರಾದ ಮಹಿಳೆಯರಿಗೆ ಅಂಡಾಣು ದಾನಿಗಳು ಸಾಕ್ಷಾತ್‌ ದೇವರಿದ್ದಂತೆಯೇ. ಆದರೆ ಇತ್ತೀಚೆಗೆ ಈ ಬೆಳವಣಿಗೆ ಬೇರೆಯದೇ ರೂಪ ಪಡೆಯುತ್ತಿದೆ!

ಒಂದೆಡೆ ಆನ್‌ಲೈನ್‌ನಲ್ಲಿಯೇ ಮಾಹಿತಿ ಹುಡುಕಿ, ಏಜೆಂಟರನ್ನು ಸಂಪರ್ಕಿಸಿ ತಾವಾಗಿಯೇ ಅಸುರಕ್ಷಿತ ಅಂಡಾಣು ಮಾರಾಟದ ವರ್ತುಲಕ್ಕೆ ಬೀಳುವ ಹದಿಹರೆಯದ ಬಾಲಕಿಯರು. ಇನ್ನೊಂದೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ವೈದ್ಯಕೀಯ ಕ್ಯಾಂಪ್‌ಗಳಲ್ಲಿ ಗ್ರಾಮೀಣ, ತಾಲ್ಲೂಕು ಮಟ್ಟದ ಹೆಣ್ಣುಮಕ್ಕಳನ್ನು ಅಂಡಾಣು ಮಾರಾಟಕ್ಕೆ ಒತ್ತಾಯಿಸುವ ಏಜೆಂಟರು. ಕೆಲವರು ನಿಯಮಗಳ ಅನುಸಾರ ಕೆಲಸ ಮಾಡಿದರೆ, ಇನ್ನು ಕೆಲವರು ಅಂಡಾಣು ಕೊಡುವವರು ಸಿಕ್ಕರೆ ಸಾಕು, ದಾನಿಗಳ ಅಗತ್ಯ ದಾಖಲೆಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಇನ್ನು ‘ಏನೂ ಆಗದು’ ಎನ್ನುವ ಮೊಂಡು ಧೈರ್ಯದಿಂದ ಸ್ವತಃ ಹೆಣ್ಣುಮಕ್ಕಳೇ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಂಡು, ಬೇರೆ ಬೇರೆ ಕ್ಲಿನಿಕ್‌ಗಳಲ್ಲಿ ಅಂಡಾಣು ನೀಡುವುದೂ ಇದೆ.

ಅಷ್ಟಕ್ಕೂ ಮೇಲ್ನೋಟಕ್ಕೆ ಸುಲಭವಾಗಿ ಕಂಡುಬರುವ ಈ ಪ್ರಕ್ರಿಯೆಯಲ್ಲಿ ಅಪಾಯದ ಅಂಚುಗಳೂ ಇದ್ದೇ ಇರುತ್ತವೆ. ಇವು ಸಣ್ಣ ಪ್ರಮಾಣದಲ್ಲಿಯೂ ಇರಬಹುದು, ಅಪಾಯಕಾರಿಯೂ ಆಗಬಹುದು.

ಅಂಡಾಣು ದಾನದ ಒಟ್ಟು ಪ್ರಕ್ರಿಯೆಯಲ್ಲಿ ಒಬ್ಬ ಹೆಣ್ಣುಮಗಳು ಐದು ಹಂತಗಳ ತಪಾಸಣೆ, ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ.

ಅಂಡಾಣು ದಾನಿಗಳು ಹಾಗೂ ಐವಿಎಫ್ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವ ಕೆಲಸವನ್ನು ಏಜೆಂಟರು ಮತ್ತು ಎಆರ್‌ಟಿ ಬ್ಯಾಂಕ್‌ನವರು ಮಾಡುತ್ತಾರೆ. ಮೊದಲ ಹಂತದ ಪರಿಶೀಲನೆಯನ್ನು ಅವರೇ ಮಾಡುವುದು. ದಾನಿಯ ದಾಖಲೆಗಳನ್ನು ಪರಿಶೀಲಿಸುವ ಜೊತೆಗೆ ಅವರಿಗೆ ಇದರ ಬಗ್ಗೆ ಮಾಹಿತಿ ನೀಡಿ, ಸಮಾಲೋಚನೆಯನ್ನೂ ಮಾಡುತ್ತಾರೆ. ಒಪ್ಪಿಗೆ ಪತ್ರಕ್ಕೆ ಸಹಿ ಪಡೆದು, ನೋಂದಣಿ ಮಾಡಿಕೊಳ್ಳುತ್ತಾರೆ.

ಐವಿಎಫ್ ಕೇಂದ್ರಕ್ಕೆ ಬಂದ ನಂತರ ಎರಡನೇ ಹಂತ ಆರಂಭವಾಗುತ್ತದೆ. ವೈದ್ಯರು ಸ್ಕ್ಯಾನ್ ಮೂಲಕ ಅಂಡಾಣುಗಳ ಪರೀಕ್ಷೆ ಮಾಡುತ್ತಾರೆ. ಆ ದಾನಿಯಿಂದ ಸಾಕಷ್ಟು ಅಂಡಾಣುಗಳು ಸಿಗಬಹುದು ಎನಿಸಿದ ನಂತರ ಕೆಲ ನಿರ್ದಿಷ್ಟ ರಕ್ತಪರೀಕ್ಷೆಗಳನ್ನು ಮಾಡುತ್ತಾರೆ (ಆರ್.ಎಚ್. ಸ್ಟೇಟಸ್, ಎಚ್.ಬಿ., ಆರ್.ಬಿ.ಸಿ., ಡಬ್ಲ್ಯೂಬಿಸಿ, ಬ್ಲಡ್ ಯೂರಿಯಾ, ಎಚ್.ಸಿ.ಪಿ.ಟಿ., ಎಚ್.ಐ.ವಿ.). ಎಚ್.ಐ.ವಿ., ಲೈಂಗಿಕ ಸೋಂಕುಗಳು, ಥೈರಾಯ್ಡ್ ಬಗ್ಗೆ ತಿಳಿದುಕೊಳ್ಳಲು ಕೆಲವು ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ.

ಇದಾದ ಮೇಲೆ ಮುಟ್ಟಾದ ಎರಡನೇ ದಿನಕ್ಕೆ ಹಾರ್ಮೋನ್ ಮತ್ತು ಅಂಡಾಣುಗಳ ಗುಣಮಟ್ಟವನ್ನು ತಿಳಿಯಲು ಕೆಲವು (ಎಲ್.ಎಚ್., ಎಫ್.ಎಸ್.ಎಚ್-2, ಎ.ಎಂ.ಎಚ್.ಟಿ., ಎಸ್.ಎಚ್.) ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದೆಲ್ಲ ಮುಗಿದ ಮೇಲೆ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಒಪ್ಪಂದಕ್ಕೆ (ಫಾರ್ಮ್– ಎಂ1 ಮತ್ತು ಫಾರ್ಮ್– ಕೆ) ಸಹಿ ಪಡೆದು ನೋಂದಣಿ ಮಾಡಿಕೊಳ್ಳಲಾಗುತ್ತದೆ.

ಮುಟ್ಟಾದ ಮೂರನೇ ದಿನದಿಂದ 10–12 ದಿನಗಳ ಕಾಲ, ಹೆಚ್ಚಿನ ಸಂಖ್ಯೆಯಲ್ಲಿ ಅಂಡಾಣು ಬಿಡುಗಡೆ ಆಗುವಂತೆ ಪ್ರತಿದಿನ ‘ಗೊನಡಾಟ್ರೋಪಿನ್’ ಇಂಜೆಕ್ಷನ್ ಕೊಡಲಾಗುತ್ತದೆ. ಜೊತೆಗೆ ಪ್ರತಿ ಎರಡು ದಿನಕ್ಕೊಮ್ಮೆ ಅಲ್ಟ್ರಾಸೌಂಡ್ ಪರೀಕ್ಷೆಯ ಮೂಲಕ ಅಂಡಾಶಯಗಳಲ್ಲಿ ಅಂಡಾಣು ಬೆಳವಣಿಗೆಯ ಹಂತವನ್ನು ಪರೀಕ್ಷಿಸಲಾಗುತ್ತದೆ.

10-12ನೇ ದಿನಕ್ಕೆ ಅಂಡಾಣು ಚೆನ್ನಾಗಿ ಬೆಳೆದಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಂಡು, ರಾತ್ರಿ ಒಂದು ಎಚ್.ಸಿ.ಜಿ. ಇಂಜೆಕ್ಷನ್ ನೀಡಲಾಗುತ್ತದೆ. 35 ಗಂಟೆಯ ನಂತರ ಅಂಡಾಣು ತೆಗೆಯುವ ಪ್ರಕ್ರಿಯೆ ಆರಂಭವಾಗುತ್ತದೆ. ಸೂಜಿಯಿಂದ ಯೋನಿಯ ಮೂಲಕ ಅಂಡಾಣುಗಳನ್ನು ಎಳೆದು ಟ್ಯೂಬ್‌ನಲ್ಲಿ

ಸಂಗ್ರಹಿಸಲಾಗುತ್ತದೆ.

ಎಷ್ಟೇ ಎಚ್ಚರಿಕೆ ವಹಿಸಿದರೂ, ಹೆಚ್ಚು ಅಂಡಾಣುಗಳನ್ನು ಬೆಳೆಸಲು ನೀಡಲಾಗುವ ಇಂಜೆಕ್ಷನ್‌ನಿಂದ ಕೆಲವೊಮ್ಮೆ ಅಡ್ಡಪರಿಣಾಮಗಳಾಗುತ್ತವೆ. ಕೆಲವೊಮ್ಮೆ ಅಂಡಾಣು ನಿಯಂತ್ರಣ ಮೀರಿ ಬೆಳೆಯುವ ಸಾಧ್ಯತೆ ಇರುತ್ತದೆ. ಅಂದರೆ ಅತಿಹೆಚ್ಚು ಅಂಡಾಣು ಬೆಳೆಯಬಹುದು (20ಕ್ಕಿಂತ ಅಧಿಕ). ಇದನ್ನು ವೈದ್ಯಕೀಯ ಭಾಷೆಯಲ್ಲಿ Ovarian Hyperstimulation Syndrome (OHS) ಎಂದು ಕರೆಯಲಾಗುತ್ತದೆ. ಇದರಿಂದ ಅಂಡಾಶಯದ ಗಾತ್ರ ಎರಡು–ಮೂರು ಪಟ್ಟು ಹೆಚ್ಚಾಗಬಹುದು, ಊದಿಕೊಳ್ಳಬಹುದು. ಆಗ ಅದಕ್ಕೆ ಹೊಂದಿಕೊಂಡಿರುವ ಅಂಗಾಂಶಗಳ ಮೇಲೂ ಪರಿಣಾಮ ಉಂಟಾಗುತ್ತದೆ.

‘ಇಸ್ಟ್ರೋಜನ್‌ ಹಾರ್ಮೋನ್‌ ಅತಿಹೆಚ್ಚು ಪ್ರಮಾಣದಲ್ಲಿ ಬಿಡುಗಡೆ ಆದಾಗ ಒ.ಎಚ್.ಎಸ್.ನಂತಹ ಪರಿಣಾಮಗಳು ಉಂಟಾಗಬಹುದು. ಆಗ ಹೊಟ್ಟೆ ಊದಿಕೊಳ್ಳುವುದು, ಹೊಟ್ಟೆ ನೋವುಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸುಮಾರು 10– 15 ವರ್ಷಗಳ ಹಿಂದೆ ಇಂತಹ ಸ್ಥಿತಿಯನ್ನು ನಿಯಂತ್ರಿಸುವುದು ವೈದ್ಯಕೀಯ ವಲಯಕ್ಕೆ ಸವಾಲಾಗಿತ್ತು. ಆದರೆ ಈಗ ಈ ಸ್ಥಿತಿಯನ್ನು ಸುಲಭವಾಗಿ ನಿಯಂತ್ರಿಸಬಹುದು’ ಎನ್ನುತ್ತಾರೆ ಮಣಿಪಾಲ್‌ ಫರ್ಟಿಲಿಟಿ ಸೆಂಟರ್‌ನ ಕ್ಲಿನಿಕಲ್‌ ಡೈರೆಕ್ಟರ್‌ ಡಾ. ನಿರ್ಮಲಾ ಟಿ.ಎಸ್‌.

‘ಅಂಡಾಣು ದಾನದ ಪ್ರಕ್ರಿಯೆ ಹೇಗೆಲ್ಲ ನಡೆಯುತ್ತದೆ, ಯಾರು ಈ ಪ್ರಕ್ರಿಯೆಗೆ ಒಳಪಡಬಹುದು, ಎಷ್ಟು ಬಾರಿ ದಾನ ಮಾಡಬಹುದು, ಮಾಡುವ ಮುನ್ನ ಮತ್ತು ಮಾಡಿದ ನಂತರ ವಹಿಸಬಹುದಾದ ಎಚ್ಚರಿಕೆಗಳೇನು ಎನ್ನುವುದನ್ನು ತಿಳಿದುಕೊಂಡು ಸೂಕ್ತ ಮಾನದಂಡಗಳನ್ನು ಅನುಸರಿಸಿದಲ್ಲಿ ಅಂಡಾಣು ದಾನ ಸಂಪೂರ್ಣ ಸುರಕ್ಷಿತ. ‘21ರಿಂದ 36 ವರ್ಷದೊಳಗಿನ ಒಬ್ಬ ಮಹಿಳೆ ಒಂದು ಬಾರಿ ಗರಿಷ್ಠ 10ರಿಂದ 15 ಅಂಡಾಣುಗಳನ್ನು ದಾನ ಮಾಡಬಹುದು. ಅದೂ ಜೀವಮಾನದಲ್ಲಿ ಮೂರು ಬಾರಿ ಮಾತ್ರ. ಅಲ್ಲದೆ, ದಾನಿ ಯಾವುದೇ ಬಗೆಯ ಮಾನಸಿಕ ಅಥವಾ ದೈಹಿಕ ಒತ್ತಡದಿಂದ ಬಳಲುತ್ತಿರಬಾರದು. ಲೈಂಗಿಕ ಸೋಂಕು ಅಥವಾ ಕಾಯಿಲೆಗಳಿರುವವರಂತೂ ಸಂಪೂರ್ಣ ಅನರ್ಹ. ಧೂಮಪಾನ, ಮದ್ಯಪಾನ ಮಾಡುವವರನ್ನೂ ಪರಿಗಣಿಸುವುದಿಲ್ಲ’ ಎನ್ನುತ್ತಾರೆ ಸಂತಾನಫಲತಜ್ಞೆ ಡಾ. ದೇವಿಕಾ ಗುಣಶೀಲ.

ಆದರೆ ಐಸಿಎಂಆರ್‌ (The Indian Council of Medical Research) ನಿಯಮಗಳನ್ನು ಸ್ವತಃ ದಾನಿಗಳೇ ಉಲ್ಲಂಘಿಸಿ ಹಣಕ್ಕಾಗಿ ಅಂಡಾಣು ಮಾರಾಟ ಮಾಡುವುದೂ ಇದೆ. ಇಂತಹ ಮಾಹಿತಿಗಳನ್ನೂ ಖುದ್ದು ದಾನಿಗಳೇ ನೀಡುವುದೂ ಇದೆ.

ಬೆಳಗಾವಿಯ 25 ವರ್ಷದ ರೋಹಿಣಿ ತಾನು ನಾಲ್ಕು ಬಾರಿ ಅಂಡಾಣು ನೀಡಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ– ‘ಬಾಡಿಗೆ ತಾಯ್ತನಕ್ಕಿಂತ ಇದು ಉತ್ತಮ ಆಯ್ಕೆ. ಅಲ್ಲಿ ಒಂದೂವರೆ ವರ್ಷ ತಾಯ್ತನ, ಬಾಣಂತನ ಅಂತೆಲ್ಲಾ ಹೈರಾಣಾಗಬೇಕು. ಕೆಲವೊಮ್ಮೆ ದಂಪತಿಯ ನಡುವೆ ಇದರಿಂದ ಸಮಸ್ಯೆ ಆಗಬಹುದು. ಸಂಬಂಧಿಕರು, ನೆರೆ–ಹೊರೆಯವರ ಪ್ರಶ್ನೆಗಳಿಗೆ ಉತ್ತರಿಸುವುದೂ ಕಷ್ಟ. ಆದರೆ ಅಂಡಾಣು ಕೊಡುವುದು ಸುಲಭ ಮತ್ತು ಸುರಕ್ಷಿತ. ಸಾಕಷ್ಟು ಹಣವೂ ಕೈಸೇರುತ್ತದೆ. ನಾಲ್ಕು ಬಾರಿ ಅಂಡಾಣು ಕೊಟ್ಟಿದ್ದೇನೆ. ಒಮ್ಮೆ ಹುಬ್ಬಳ್ಳಿಯಲ್ಲಿ, ಮೂರು ಬಾರಿ ಬೆಂಗಳೂರಿನಲ್ಲಿ’.

ಈ ಬಗ್ಗೆ ಕೆಲ ಏಜೆಂಟರನ್ನು, ಎಆರ್‌ಟಿ ಬ್ಯಾಂಕ್‌ನವರನ್ನುಕೇಳಿದರೆ ಅವರು ದಾನಿಗಳನ್ನೇ ಹೊಣೆಯಾಗಿಸುತ್ತಾರೆ–‘ಇಲ್ಲಿ ನಾವುಯಾರನ್ನೂ ಎತ್ತಿಕೊಂಡು ಹೋಗಿ, ಅಂಡಾಣುಗಳನ್ನ ಕಿತ್ತುಕೊಳ್ಳೋಕೆ ಆಗೊಲ್ಲ. ಯಾರೋ ಗೊತ್ತಿಲ್ದೇ ಇರೋರನ್ನ ಕರ್ಕೊಂಡು ಹೋಗಿ ಕಿಡ್ನಿ ಕಿತ್ಕೋತಿದ್ರಂತಲ್ಲ... ಹಂಗೂ ಆಗಲ್ಲ. ಇಲ್ಲಿ ಅವರೇ ಸ್ವಇಚ್ಛೆಯಿಂದ ಬರಬೇಕು. ಈ ಕಾಲೇಜು ಹುಡುಗಿಯರೆಲ್ಲ ತಾವಾಗೇ ಬಂದು, ಬಾಯ್‌ಫ್ರೆಂಡ್‌ನ ಗಂಡ ಅಂತ ತೋರಿಸಿ ರಿಜಿಸ್ಟರ್‌ ಮಾಡ್ಕೋತಾರೆ. ನಾವು ನಮ್ಮ ಕೆಲಸ ಬಿಟ್ಟು ಪೊಲೀಸ್‌ ಕೆಲಸ ಮಾಡಾಕಾಗಲ್ಲ. ಇದನ್ನೆಲ್ಲ ತಡೀಬೇಕು ಅಂತಿದ್ರೆ ನಿಯಮಗಳು ಇನ್ನೂ ಬಿಗಿಯಾಗಬೇಕು. ಆದ್ರೆ ನಮ್ಮ ಕೈಯಲ್ಲಿನ ಕೆಲ್ಸ ಕಿತ್ಕೊಬಾರದು’ ಎನ್ನುವುದು ಏಜೆಂಟರಾದ ರಘು ಅವರ ಅರಿಕೆ.

‘ನಾವು ಐಸಿಎಂಆರ್‌ ನಿಯಮಗಳ ಅನುಸಾರವೇ ಕೆಲಸ ಮಾಡುತ್ತೇವೆ. ನಮ್ಮಲ್ಲಿ ತಿಂಗಳಿಗೆ 10ರಿಂದ 15 ಜನ ಅಂಡಾಣು ದಾನಿಗಳು ಬರುತ್ತಾರೆ. ಕಾಲೇಜು ಹುಡುಗಿಯರು ಬಂದಾಗ ನಾವು ಅವರಿಗೆ ತಿಳಿ ಹೇಳಿ, ಹಿಂತಿರುಗಿ ಕಳಿಸುತ್ತೇವೆ. ಆದರೆ ಅವರು ಮತ್ತೆ ಅನಧಿಕೃತ ಏಜೆಂಟರನ್ನು ಹುಡುಕಿಕೊಂಡು ಹೋಗುತ್ತಾರೆ. ಈಗಂತೂ ಅಂಡಾಣುಗಳ ಬೇಡಿಕೆ ಬಹಳಷ್ಟಿದೆ. ಎಷ್ಟು ಪೂರೈಕೆ ಮಾಡಿದರೂ ಬೇಡಿಕೆಯನ್ನು ಸರಿಗಟ್ಟಿಸಲು ಆಗುತ್ತಿಲ್ಲ’ ಎನ್ನುವುದು ಎಆರ್‌ಟಿ ಬ್ಯಾಂಕ್‌ ಒಂದರ ವ್ಯವಸ್ಥಾಪಕರ ಮಾತು.

ಈಗಿರುವ ಐಸಿಎಂಆರ್‌ ನಿಯಮಗಳ ಅಡಿಯಲ್ಲಿ ಇಂತಹ ಪ್ರಕರಣಗಳನ್ನುಪತ್ತೆ ಹಚ್ಚುವುದು ಕಷ್ಟ. ಈಗ ಎಆರ್‌ಟಿ ಬ್ಯಾಂಕ್‌ಗಳು ಹಾಗೂ ಐವಿಎಫ್‌ ಕೇಂದ್ರಗಳು, ಆಸ್ಪತ್ರೆಗಳ ನಡುವೆ ಪರಸ್ಪರ ಸಂಪರ್ಕ, ಸಂವಾದಕ್ಕೆ ಆಸ್ಪದವಿಲ್ಲ. ಎಲ್ಲರೂ ಪ್ರತ್ಯೇಕವಾಗಿಯೇ ಕಾರ್ಯನಿರ್ವಹಿಸಬೇಕಿದೆ. ಒಂದು ಬಾರಿ ಒಂದು ಬ್ಯಾಂಕ್‌ ಮೂಲಕ ಒಂದು ಕ್ಲಿನಿಕ್‌ನಲ್ಲಿ ಅಂಡಾಣು ಕೊಟ್ಟವರು, ಎರಡನೇ ಬಾರಿ, ಮೂರನೇ ಬಾರಿ ಬೇರೆ ಬೇರೆ ಏಜೆಂಟರಿಂದ, ಬ್ಯಾಂಕ್‌ಗಳಿಂದ ಬೇರೆ ಬೇರೆ ಐವಿಎಫ್‌ ಕ್ಲಿನಿಕ್‌ಗಳಿಗೆ ಬಂದರೆ ವೈದ್ಯರಿಗೆ ಅವರ ಪೂರ್ವಾಪರ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಅನೇಕ ಕಡೆ ‘ಫಸ್ಟ್ ಪೇಶಂಟ್’ ಆಗಿಯೇ ಹೋಗಿರುತ್ತಾರೆ. ಈಗಾಗಲೇ ಅವರು ಈ ಪ್ರಕ್ರಿಯೆಗೆ ಒಳಗಾಗಿದ್ದಾರೆಯೇ ಎನ್ನುವುದನ್ನು ಕಂಡುಹಿಡಿಯುವ ಯಾವ ಮಾನದಂಡಗಳೂ, ಪರೀಕ್ಷೆಗಳೂ ಲಭ್ಯವಿಲ್ಲ.

‘ಈಗಿರುವ ನಿಯಮಗಳ ಪ್ರಕಾರ ಆರೋಗ್ಯವಂತ ಮಹಿಳೆಯರು, ತಮ್ಮ ಜೀವಮಾನದಲ್ಲಿ, ಆರು ತಿಂಗಳ ಅಂತರದಲ್ಲಿ ಮೂರು ಬಾರಿ ಅಂಡಾಣು ದಾನ ಮಾಡಲು ಅವಕಾಶವಿದೆ. ಅವರಿಗೆ ಗೌರವಧನ ಕೊಡುವುದರಲ್ಲಿಯೂ ತಪ್ಪಿಲ್ಲ. ಆದರೆ ಅವರು ಇದನ್ನೇ ತಮ್ಮ ಹಣ ಗಳಿಕೆಯ ಮೂಲವಾಗಿ ತೆಗೆದುಕೊಳ್ಳಬಾರದು. ಈ ಬಗ್ಗೆ ಕಾನೂನಿದ್ದರೂ ಅದನ್ನು ಮುರಿಯಲು ಅಂಥವರು ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಐಸಿಎಂಆರ್‌ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ‘ಐಸಿಎಂಆರ್‌ ಮಾರ್ಗಸೂಚಿ ಸಮಿತಿ’ ಕೆಲವು ಮಹತ್ವಪೂರ್ಣ ಬದಲಾವಣೆಗಳನ್ನು ತರಲು ನಿರ್ಧರಿಸಿದೆ. ಅಂಡಾಣು ದಾನಿಗಳು, ವೀರ್ಯಾಣು ದಾನಿಗಳು, ಅವುಗಳ ಫಲಾನುಭವಿಗಳು ಹಾಗೂ ಬಾಡಿಗೆ ತಾಯಂದಿರನ್ನು ‘ನ್ಯಾಷನಲ್ ರಿಜಿಸ್ಟ್ರಿ’ಯಲ್ಲಿ ದಾಖಲಿಸುವ ಬಗ್ಗೆ ಚಿಂತನೆ ನಡೆದಿದೆ. ಈ ದಾಖಲೆಯೊಂದಿಗೆ ಆಧಾರ್ ಕಾರ್ಡ್‌ ಲಿಂಕ್ ಮಾಡಿದಾಗ ಪ್ರತಿಯೊಬ್ಬರ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಸಿಗುತ್ತದೆ. ಆಗ ಯಾರು ಯಾವುದೇ ಏಜೆನ್ಸಿಯಲ್ಲಿ ನೋಂದಣಿ ಮಾಡಿಕೊಂಡರೂ ಅವರ ಪೂರ್ವಾಪರ ನಮಗೆ ಲಭ್ಯವಾಗುತ್ತದೆ. ಹಿಂದೆ ಅವರು ಯಾವಾಗ, ಎಲ್ಲಿ, ಎಷ್ಟು ಬಾರಿ ಅಂಡಾಣು ಕೊಟ್ಟರು ಎನ್ನುವುದನ್ನೂ ಸುಲಭವಾಗಿ ಗುರುತಿಸಬಹುದು’ ಎಂದು ಮಾಹಿತಿ ನೀಡುತ್ತಾರೆ ಪ್ರನಾಳ ಶಿಶು ತಜ್ಞೆ ಡಾ. ಕಾಮಿನಿ ರಾವ್.

ಇಂದು ಬಹುತೇಕ ಮಹಿಳೆಯರು ಹಣಕ್ಕಾಗಿಯೇ ಅಂಡಾಣು ನೀಡಲು ಮುಂದೆ ಬರುತ್ತಿದ್ದಾರೆ. ಆರ್ಥಿಕ ಸಂಕಷ್ಟ, ಕುಟುಂಬದ ಜವಾಬ್ದಾರಿ ಇದಕ್ಕೆ ಕಾರಣ. ಆದರೆ ಐಷಾರಾಮಿ ಜೀವನಶೈಲಿಗಾಗಿಯೂ ಕೆಲವರು ಅಂಡಾಣು ನೀಡಲು ಮುಂದಾಗುತ್ತಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಸಾಮಾನ್ಯವಾಗಿ ಪ್ರತಿ ದಾನಿ, ಒಂದು ಬಾರಿ ಅಂಡಾಣು ನೀಡಿದರೆ ಸುಮಾರು  ₹30 ಸಾವಿರದಿಂದ  35 ಸಾವಿರ ಪಡೆಯುತ್ತಾರೆ. ಪ್ರೀಮಿಯಂ ಪಟ್ಟಿಯಲ್ಲಿರುವವರು ₹50 ಸಾವಿರದಿಂದ ₹ 1 ಲಕ್ಷದವರೆಗೆ ಹಣ ಪಡೆಯುತ್ತಾರೆ. ಅವರ ಸೌಂದರ್ಯ, ಎತ್ತರ, ಶೈಕ್ಷಣಿಕ ಅರ್ಹತೆ, ಆನುವಂಶೀಯತೆಯ ಆಧಾರದ ಮೇಲೆ ದಾನಿಗಳನ್ನು ವರ್ಗೀಕರಿಸಲಾಗುತ್ತದೆ.  ‘ದಿವಾ ದಾನಿಗಳು’ ಎಂದು ಕರೆಯಲಾಗುವ ಈ ವರ್ಗದಲ್ಲಿರುವವರು ಇದಕ್ಕಿಂತಲೂ ಹೆಚ್ಚು ಹಣ ಪಡೆಯುವುದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry