ವಿರೋಧ ಪಕ್ಷಗಳಿಂದ ‘ಸಂವಿಧಾನ ಉಳಿಸಿ’ ರ‍್ಯಾಲಿ

7
ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿವಿಧ ಪಕ್ಷಗಳ ನಾಯಕರು

ವಿರೋಧ ಪಕ್ಷಗಳಿಂದ ‘ಸಂವಿಧಾನ ಉಳಿಸಿ’ ರ‍್ಯಾಲಿ

Published:
Updated:
ವಿರೋಧ ಪಕ್ಷಗಳಿಂದ ‘ಸಂವಿಧಾನ ಉಳಿಸಿ’ ರ‍್ಯಾಲಿ

ಮುಂಬೈ: ದೇಶದ ಪ್ರಮುಖ ವಿರೋಧ ಪಕ್ಷಗಳೆಲ್ಲ ಶುಕ್ರವಾರ ಮುಂಬೈನಲ್ಲಿ ಸೇರಿ ‘ಸಂವಿಧಾನ ಉಳಿಸಿ’ ರ‍್ಯಾಲಿ ನಡೆಸಿವೆ.

ದೇಶವು ಸಂವಿಧಾನ ಅಂಗೀಕರಿಸಿದ ದಿನದಂದೇ (ಗಣರಾಜ್ಯೋತ್ಸವ) ನಡೆದ ರ‍್ಯಾಲಿಯು ಓವಲ್‌ ಮೈದಾನದ ಸಮೀಪದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಪ್ರತಿಮೆ ಬಳಿಯಿಂದ ಆರಂಭಗೊಂಡು ಗೇಡ್‌ ವೇ ಆಫ್‌ ಇಂಡಿಯಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆ ಬಳಿ ಮುಕ್ತಾಯ ಕಂಡಿತು.

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಅಶೋಕ್‌ ಚವಾಣ್‌, ಸುಶೀಲ್‌ ಕುಮಾರ್‌ ಶಿಂಧೆ, ಜೆಡಿಯು ನಾಯಕ ಶರದ್‌ ಯಾದವ್‌, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ, ತೃಣಮೂಲ ಕಾಂಗ್ರೆಸ್‌ ನಾಯಕ ದಿನೇಶ್‌ ತ್ರಿಪಾಠಿ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಭಾಗವಹಿಸಿದ್ದರು.

ಪಟೇಲ್‌ ಮೀಸಲಾತಿ ಹೋರಾಟ ನಾಯಕ ಹಾರ್ದಿಕ್‌ ಪಟೇಲ್‌, ಎನ್‌ಸಿಪಿ ಮುಖಂಡರಾದ ಅಜಿತ್‌ ಪವಾರ್‌, ಪ್ರುಫುಲ್‌ ಪಟೇಲ್‌ ಮತ್ತು ಸುಪ್ರಿಯಾ ಸುಲೆ, ಮಹಾರಾಷ್ಟ್ರ ವಿಧಾನಸಭಾ ವಿರೋಧ ಪಕ್ಷದ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್‌ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಧನಂಜಯ ಮುಂಡೆ ಭಾಗವಹಿಸಿದ್ದರು.

ಈ ಮಧ್ಯೆ, ವಿಖೆ ಪಾಟೀಲ್‌ ಅವರ ಮನೆಯಲ್ಲಿ ನಡೆದ ಸಭೆಯೊಂದರಲ್ಲಿ ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ಕೂಡ ಭಾಗವಹಿಸಿದ್ದಾರೆ.

‘ಸಂವಿಧಾನ ಉಳಿಸಿ’ ರ‍್ಯಾಲಿ 2019ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ–ವಿರೋಧಿ ಶಕ್ತಿಗಳನ್ನು ಒಂದುಗೂಡಿಸಲು ನಡೆಸಿದ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ. ಸ್ವಾಭಿಮಾನಿ ಶೇತ್ಕರಿ ಸಂಘಟನೆಯ (ಎಸ್‌ಎಸ್‌ಎಸ್‌) ಮುಖಂಡ, ಸಂಸದ ರಾಜು ಶೆಟ್ಟಿ ಅವರು ಈ ರ‍್ಯಾಲಿ ಸಂಚಾಲಕರಾಗಿದ್ದರು.

ತಿರಂಗ ಯಾತ್ರೆ: ಬಿಜೆಪಿ ಪ್ರತ್ಯುತ್ತರ

ವಿರೋಧ ಪಕ್ಷಗಳ ರ‍್ಯಾಲಿಗೆ ಪ್ರತಿಯಾಗಿ ಬಿಜೆಪಿಯು ಮುಂಬೈ ಮತ್ತು ಮಹಾರಾಷ್ಟ್ರದ ಎಲ್ಲ ಜಿಲ್ಲೆಗಳಲ್ಲಿ ‘ತಿರಂಗ ಯಾತ್ರೆ’  ಹಮ್ಮಿಕೊಂಡಿತ್ತು.

ಯಾತ್ರೆಯ ಭಾಗವಾಗಿ ಬಿಜೆಪಿ ಮುಖಂಡರು ಚೈತ್ಯಭೂಮಿಗೆ ಭೇಟಿ ನೀಡಿ ಅಂಬೇಡ್ಕರ್‌ ಅವರಿಗೆ ನಮನ ಸಲ್ಲಿಸಿದರು.

‘ಸಂವಿಧಾನಕ್ಕೆ ಯಾವುದೇ ಹಾನಿಯಾಗಿಲ್ಲ. ಇವತ್ತು ನಡೆದಿರುವುದು ‘ಪಕ್ಷ ಉಳಿಸಿ’ ರ‍್ಯಾಲಿ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಕಂಗಾರ್‌ ಮೈದಾನದಲ್ಲಿ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಅವರೂ ಅಧಿಕಾರದಲ್ಲಿದ್ದರು... ಭಾರಿ ಭ್ರಷ್ಟಾಚಾರ ನಡೆಸಿದ್ದರು... ಆಗ ಅವರಿಗೆ ಸಂವಿಧಾನ ನೆನಪಾಗಲಿಲ್ಲವೇ...? ಸಂವಿಧಾನ ನಮ್ಮ ತಾಯಿ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry