ಶಿವಕುಮಾರ ಸ್ವಾಮೀಜಿಗೆ ಮೂರು ಸ್ಟೆಂಟ್‌ ಅಳವಡಿಕೆ

7

ಶಿವಕುಮಾರ ಸ್ವಾಮೀಜಿಗೆ ಮೂರು ಸ್ಟೆಂಟ್‌ ಅಳವಡಿಕೆ

Published:
Updated:
ಶಿವಕುಮಾರ ಸ್ವಾಮೀಜಿಗೆ ಮೂರು ಸ್ಟೆಂಟ್‌ ಅಳವಡಿಕೆ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ವೈದ್ಯರು ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ಎಂಡೊಸ್ಕೋಪಿ ಮೂಲಕ ಮೂರು ಸ್ಟೆಂಟ್‌ಗಳನ್ನು ಅಳವಡಿಸಿದರು.

‘ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಸ್ವಾಮೀಜಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಜ್ವರ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಹಾಗೂ ಕಫ ಹೆಚ್ಚಾಗಿತ್ತು. ಮಠದಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಶುಕ್ರವಾರ ಬೆಳಿಗ್ಗೆ 8.30ಕ್ಕೆ ನಮ್ಮಲ್ಲಿಗೆ ಕರೆತಂದರು’ ಎಂದು ಬಿಜಿಎಸ್‌ ಆಸ್ಪತ್ರೆಯ ವೈದ್ಯ ಡಾ.ರವೀಂದ್ರನಾಥ್ ತಿಳಿಸಿದರು.

‘ಸ್ವಾಮೀಜಿಯ ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಯಲ್ಲಿ ಸಮಸ್ಯೆ ಉಂಟಾಗಿತ್ತು. ಇದರಿಂದ ಪಿತ್ತಕೋಶ ಬ್ಲಾಕ್‌ ಆಗುತ್ತಿದೆ. ಸ್ವಾಮೀಜಿಗೆ 110 ವರ್ಷ ವಯಸ್ಸಾಗಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಸ್ಟೆಂಟ್‌ಗಳ ಮೂಲಕವೇ ಬ್ಲಾಕ್‌ಗಳನ್ನು ಸರಿಪಡಿಸಬೇಕು. ಈ ಬಾರಿ ಒಂದು ಮೆಟಲ್‌ ಹಾಗೂ ಎರಡು ಪ್ಲಾಸ್ಟಿಕ್‌ ಸ್ಟೆಂಟ್‌ಗಳನ್ನು ಹಾಕಿದ್ದೇವೆ. ಅವರಿಗೆ ಈವರೆಗೆ ಒಟ್ಟು ಎಂಟು ಸ್ಟೆಂಟ್‌ ಅಳವಡಿಸಲಾಗಿದೆ’ ಎಂದು ವಿವರಿಸಿದರು.

‘ಸದ್ಯ ಶ್ರೀಗಳಿಗೆ ನ್ಯುಮೋನಿಯಾ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳಿದ್ದು, ಅದಕ್ಕೆ ಚಿಕಿತ್ಸೆ ನೀಡುತ್ತಿದ್ದೇವೆ. ಡ್ರಿಪ್ಸ್‌ ಮೂಲಕ ಔಷಧಿ ನೀಡುತ್ತಿದ್ದೇವೆ. ರಾತ್ರಿ ಆಹಾರ ಸೇವನೆಗೆ ಅವಕಾಶ ನೀಡಲಾಗುತ್ತದೆ. ಬೆಳಿಗ್ಗೆವರೆಗೂ ಅವರ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸುತ್ತೇವೆ. ಸಂಪೂರ್ಣ ಚೇತರಿಸಿಕೊಂಡರೆ, ಶನಿವಾರ ಮಧ್ಯಾಹ್ನ ಮಠಕ್ಕೆ ಕಳುಹಿಸುತ್ತೇವೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸ್ವಾಮೀಜಿಯ ಆರೋಗ್ಯ ವಿಚಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry