ಈಶಾನ್ಯ ಪಡೆಗೆ ಸೋಲುಣಿಸಿದ ಬಿಎಫ್‌ಸಿ

7
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಆತಿಥೇಯರಿಗೆ ಗೋಲು ಗಳಿಸಿಕೊಟ್ಟ ಜುವಾನ್‌, ಚೆಟ್ರಿ

ಈಶಾನ್ಯ ಪಡೆಗೆ ಸೋಲುಣಿಸಿದ ಬಿಎಫ್‌ಸಿ

Published:
Updated:
ಈಶಾನ್ಯ ಪಡೆಗೆ ಸೋಲುಣಿಸಿದ ಬಿಎಫ್‌ಸಿ

ಬೆಂಗಳೂರು: ನಾರ್ತ್‌ ಈಸ್ಟ್ ತಂಡದ ಬಲಿಷ್ಠ ರಕ್ಷಣಾ ಗೋಡೆಯನ್ನು ಛಿದ್ರ ಮಾಡಿದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ನಗರದ ಫುಟ್‌ಬಾಲ್‌ ಪ್ರಿಯರನ್ನು ಮುದಗೊಳಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಪಂದ್ಯದಲ್ಲಿ 2–1 ಗೋಲುಗಳಿಂದ ಗೆದ್ದ ಸುನಿಲ್‌ ಚೆಟ್ರಿ ಬಳಗ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ರಕ್ಷಣೆ ಮತ್ತು ಆಕ್ರಮಣದಲ್ಲಿ ತೋರಿದ ಅಮೋಘ ಸಾಮರ್ಥ್ಯ ಹಾಗೂ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್ ಸಂಧು ಅವರ ಚಾಣಾಕ್ಷ ಆಟ ಬಿಎಫ್‌ಸಿ ಗೆಲುವಿಗೆ ಕಾರಣವಾಯಿತು.

ಆರಂಭದಲ್ಲಿ ಎರಡೂ ತಂಡದವರು ಪ್ರಬಲ ಆಕ್ರಮಣದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಮೂರನೇ ನಿಮಿಷದಲ್ಲಿ ನಾರ್ತ್ ಈಸ್ಟ್‌ ತಂಡಕ್ಕೆ ಫ್ರೀ ಕಿಕ್‌ ಅವಕಾಶ ಲಭಿಸಿತು. ಎಡಬದಿಯಿಂದ ಮಾರ್ಸಿನ್ಹೊ ಒದ್ದ ಚೆಂಡನ್ನು ಗುರಿ ಸೇರಿಸಲು ಸಿಸಾರಿಯೋಗೆ ಸಾಧ್ಯವಾಗಲಿಲ್ಲ.

14ನೇ ನಿಮಿಷದಲ್ಲಿ ಡಾಂಗೆಲ್‌ ಎಸಗಿದ ತಪ್ಪು ಬಿಎಫ್‌ಸಿಯ ಮುನ್ನಡೆಗೆ ಕಾರಣವಾಯಿತು. ಎಜು ಗ್ರೇಸಿಯಾ ಎಡಬದಿಯಿಂದ ಲಾಫ್ಟ್‌ ಮಾಡಿದ ಚೆಂಡನ್ನು ಹೆಡ್ ಮಾಡಿದ ಜುವಾನ್‌ ಸುಲಭವಾಗಿ ಗೋಲು ಗಳಿಸಿದರು.

ತಿರುಗೇಟು ನೀಡಿದ ನಾರ್ತ್ ಈಸ್ಟ್‌

ಪಂದ್ಯದ ಮೇಲೆ ಆತಿಥೇಯರು ಆಧಿಪತ್ಯ ಸ್ಥಾಪಿಸಿ ಬೀಗುತ್ತಿದ್ದಾಗಲೇ ನಾರ್ತ್ ಈಸ್ಟ್ ತಂಡ ತಿರುಗೇಟು ನೀಡಿತು. 45ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಮಾರ್ಸಿನ್ಹೊ

ಸುಲಭವಾಗಿ ಚೆಂಡನ್ನು ಗುರಿ ಸೇರಿಸಿದರು. ದ್ವಿತೀಯಾರ್ಧದ ಆರಂಭದಲ್ಲೇ ಸುನಿಲ್ ಚೆಟ್ರಿ ಮ್ಯಾಜಿಕ್‌ ಮಾಡಿದರು. ಗೋಲು ಗಳಿಸಲು ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಹರ್ಮನ್‌ಜೋತ್ ಕಾಬ್ರಾಗೆ ಸಾಧ್ಯವಾಗಲಿಲ್ಲ. ಚೆಂಡು ಗೋಲ್‌ಕೀಪರ್ ರೆಹನೇಶ್‌ ಅವರ ಕೈಗೆ ಮುತ್ತಿಕ್ಕಿ ವಾಪಸ್ ಸಿಡಿದು ನಿರ್ಮಲ್ ಚೆಟ್ರಿ ಅವರ ಕಾಲಿಗೆ ಬಡಿದು ಚಿಮ್ಮಿತು. ಗೋಲುಪೆಟ್ಟಿಗೆಯ ಬಲಬದಿಯಲ್ಲಿ ಕಾಯುತ್ತಿದ್ದ ಸುನಿಲ್ ಚೆಟ್ರಿ ಮಿಂಚಿನ ವೇಗದಲ್ಲಿ ಒದ್ದು ತಂಡಕ್ಕೆ 2–1ರ ಮುನ್ನಡೆ ಗಳಿಸಿಕೊಟ್ಟರು.

ಕೈಕೊಟ್ಟ ಬೆಳಕು; ಕೋಚ್‌ ಅಸಮಾಧಾನ

ಕ್ರೀಡಾಂಗಣದ ವಿಐಪಿ ಗ್ಯಾಲರಿ ಕಡೆಯಿಂದ ಹೊನಲು ಬೆಳಕು ಸೂಸುತ್ತಿದ್ದ ವಿದ್ಯುತ್ ದೀಪಗಳು ಪಂದ್ಯದ 23ನೇ ನಿಮಿಷದಲ್ಲಿ ಏಕಾಏಕಿ ಆಫ್‌ ಆದವು. ಹೀಗಾಗಿ ಪಂದ್ಯಕ್ಕೆ ಕೆಲಕಾಲ ಅಡ್ಡಿಯಾಯಿತು. ಬಿಎಫ್‌ಸಿ ಈ ಸಂದರ್ಭದಲ್ಲಿ 1–0 ಮುನ್ನಡೆಯಲ್ಲಿತ್ತು. ತಂಡದ ಆಟಗಾರರು ಮತ್ತು ಕೋಚ್‌ ಆಲ್ಬರ್ಟ್ ರೊಕಾ ಬೇಸರ ವ್ಯಕ್ತಪಡಿಸಿದರು. ಆರು ನಿಮಿಷಗಳ ನಂತರ ಪಂದ್ಯ ಮತ್ತೆ ಆರಂಭಗೊಂಡಿತು.

ನಾಯಕನ ಒಳ ಉಡುಪಿಗೆ ರೆಫರಿ ಆಕ್ಷೇಪ

ಪಂದ್ಯದ ಏಳನೇ ನಿಮಿಷದಲ್ಲಿ ನಾರ್ತ್ ಈಸ್ಟ್ ತಂಡದ ನಾಯಕ ಗೊನ್ಜಾಲ್ವಸ್‌ ಅವರನ್ನು ರೆಫರಿ ಹೊರಗೆ ಕಳುಹಿಸಿದರು. ನಾರ್ತ್ ಈಸ್ಟ್‌ ತಂಡದ ಗೋಲು ಪೆಟ್ಟಿಗೆ ಬಳಿ ಮಿಕು ಅವರ ಕಾಲಿಗೆ ಸೋಕಿ ಬಿದ್ದ ಗೊನ್ಜಾಲ್ವಸ್‌ ಕಪ್ಪು ಬಣ್ಣದ ಒಳ ಉಡುಪು ಧರಿಸಿರುವುದು ರೆಫರಿ ಗಮನಕ್ಕೆ ಬಂತು. ಅವರು ಅದನ್ನು ಬದಲಾಯಿಸಿ ಬರುವಂತೆ ಸೂಚಿಸಿದರು. ಆದರೆ ರೆಫರಿ ಜೊತೆ ನಾಯಕ ವಾಗ್ವಾದ ನಡೆಸಿದ ಕಾರಣ ಕೆಲಕಾಲ ಆಟಕ್ಕೆ ಅಡ್ಡಿಯಾಯಿತು. ಸಹ ಆಟಗಾರರು ಬಂದು ಮನವೊಲಿಸಿದ ನಂತರ ಗೊನ್ಜಾಲ್ವಸ್ ತಂಡದ ಡಗ್‌ಔಟ್‌ಗೆ ತೆರಳಿ ಕಪ್ಪು ಬಟ್ಟೆಯನ್ನು ತೆಗೆದಿರಿಸಿ ಬಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry