ಸಂವಿಧಾನ ಒಪ್ಪಿಕೊಳ್ಳುವುದೇ ರಾಷ್ಟ್ರೀಯತೆಯೆ: ಹೆಗಡೆ ಪ್ರಶ್ನೆ

7

ಸಂವಿಧಾನ ಒಪ್ಪಿಕೊಳ್ಳುವುದೇ ರಾಷ್ಟ್ರೀಯತೆಯೆ: ಹೆಗಡೆ ಪ್ರಶ್ನೆ

Published:
Updated:
ಸಂವಿಧಾನ ಒಪ್ಪಿಕೊಳ್ಳುವುದೇ ರಾಷ್ಟ್ರೀಯತೆಯೆ: ಹೆಗಡೆ ಪ್ರಶ್ನೆ

ಬೆಂಗಳೂರು: ‘ಕೇವಲ ಸಂವಿಧಾನವನ್ನು ಒಪ್ಪಿಕೊಳ್ಳುವುದೇ ರಾಷ್ಟ್ರೀಯತೆಯೇ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಪ್ರಶ್ನಿಸಿದರು.

‘ರಾಷ್ಟ್ರ ಧ್ವಜಕ್ಕೆ ನಮನ ಸಲ್ಲಿಸಿ, ಬಾಯಿ ಮಾತಿನಲ್ಲಿ ಸಂವಿಧಾನ ಒಪ್ಪಿಕೊಂಡರೆ ಸಾಲದು. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಗೌರವಿಸಿದರೆ ಸಂವಿಧಾನವನ್ನು ಗೌರವಿಸಿದಂತೆ. ಇದನ್ನು ನಾವು (ಬಿಜೆಪಿಯವರು) ಒಪ್ಪಿಕೊಳ್ಳುತ್ತೇವೆ. ಬೇರೆಯವರು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ’ ಎಂದರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ‘ನಮ್ಮ ಮಣ್ಣಿನ ಸಂಸ್ಕೃತಿಗೆ ಗೌರವ ಕೊಡದವರು ಸಂವಿಧಾನದ ಬಗ್ಗೆ ಮಾತನಾಡುವುದೇ ಅರ್ಥಹೀನ. ನಾನು ಯಾವುದೇ ಮಾತನಾಡಿದರೂ ಅದಕ್ಕೆ ವಿವಾದದ ಬಣ್ಣ ಕಟ್ಟಲಾಗುತ್ತಿದೆ. ಇದ್ದುದ್ದನ್ನು ಇದ್ದಂತೆ ಹೇಳಿದರೆ ಕೆಲವರಿಗೆ ಒಗ್ಗುವುದಿಲ್ಲ. ಯಾರನ್ನೋ ತೃಪ್ತಿ ಪಡಿಸುವುದಕ್ಕೆ ನಾವು ಮುಂದಾಗಬಾರದು. ಕಂಡದ್ದನ್ನು ಕಂಡಂತೆ ಹೇಳಬೇಕೇ ವಿನಾ ಸುತ್ತಿ ಬಳಸಿ ಹೇಳುವುದರಲ್ಲಿ ಅರ್ಥವೇ ಇಲ್ಲ’ ಎಂದರು.

‘ನಮ್ಮ ಪರಂಪರೆ ಅರ್ಥ ಮಾಡಿಕೊಳ್ಳಲು ಒಂದು ಜನ್ಮ ಸಾಲದು. ಹಿಂದೆ ಜನರು ಅಮೆರಿಕ ತಬ್ಬಿಕೊಳ್ಳುತ್ತಿದ್ದರು. ಈಗ ಇಡೀ ಜಗತ್ತು ಭಾರತವನ್ನು ಒಪ್ಪಿಕೊಳ್ಳುತ್ತಿದೆ. ಇಂತಹ ವಿಷಯಗಳನ್ನು ನಾನು ಹೇಳಲು ಹೋದರೆ, ವಾಸ್ತವ ಅರ್ಥ ಮಾಡಿಕೊಳ್ಳದ ಕೆಲವರಿಗೆ ಬಣ್ಣದ ಕನ್ನಡಕ ಕೊಟ್ಟಂತೆ ಆಗುತ್ತದೆ. ಅದರ ಮೂಲಕ ಜಗತ್ತನ್ನು ನೋಡಲು ಅವರು ಆರಂಭಿಸುತ್ತಾರೆ’ ಎಂದರು.

ಹೆಗಡೆ ಹೇಳಿಕೆ ಸರಿಯಲ್ಲ: ಸಿಂಧ್ಯ

‘ನಮ್ಮ ದೇಶದ ಸಂವಿಧಾನವನ್ನು ಯಾವುದೇ ರಾಷ್ಟ್ರ ಅಳವಡಿಸಿಕೊಳ್ಳುವಷ್ಟು ಉತ್ತಮವಾಗಿದೆ. ಸಂವಿಧಾನವನ್ನೇ ಬದಲಿಸಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮಾತನಾಡಿರುವುದು ಸರಿಯಲ್ಲ’ ಎಂದು ಜೆಡಿಎಸ್‌ ಮುಖಂಡ ಪಿ.ಜಿ.ಆರ್‌.ಸಿಂಧ್ಯ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಸಂವಿಧಾನವನ್ನು ಸಂದರ್ಭಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳುವುದು ಅವಶ್ಯಕ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry