ಅಪಾಯಕಾರಿ ಪಿಚ್; ಮೂರನೇ ದಿನದಾಟ ಸ್ಥಗಿತ

7
ಕೆಟ್ಟ ಬೌನ್ಸ್‌ರ್‌ಗಳಿಗೆ ದಿಟ್ಟ ಉತ್ತರ ನೀಡಿದ ಭಾರತದ ಬ್ಯಾಟ್ಸ್‌ಮನ್‌ಗಳು; ಕೊಹ್ಲಿ ಬಳಗದ ಮುಂದೆ ಜಯದ ಅವಕಾಶ

ಅಪಾಯಕಾರಿ ಪಿಚ್; ಮೂರನೇ ದಿನದಾಟ ಸ್ಥಗಿತ

Published:
Updated:
ಅಪಾಯಕಾರಿ ಪಿಚ್; ಮೂರನೇ ದಿನದಾಟ ಸ್ಥಗಿತ

ಜೋಹಾನ್ಸ್‌ಬರ್ಗ್: ಬ್ಯಾಟ್ಸ್‌ಮನ್‌ಗಳ ತಲೆಮಟ್ಟಕ್ಕೆ ಚೆಂಡು ಪುಟಿಯುತ್ತಿದ್ದ ಕಾರಣ ‘ಅಪಾಯಕಾರಿ’ ಎಂದು ಘೋಷಿಸಿ ಟೆಸ್ಟ್ ಪಂದ್ಯದ ಮೂರನೇ ದಿನದಾಟವನ್ನು ಸ್ಥಗಿತಗೊಳಿಸಿದ ಘಟನೆ ಶುಕ್ರವಾರ ನಡೆಯಿತು.

ಇಡೀ ದಿನ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಮೈಕೈಗೆ ಪೆಟ್ಟು ತಿಂದರೂ ದಿಟ್ಟವಾಗಿ ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾ ತಂಡಕ್ಕೆ 241 ರನ್‌ಗಳ ಗೆಲುವಿನ ಗುರಿ ನೀಡಿತ್ತು. ಈ ಸರಣಿಯಲ್ಲಿ ಈಗಾಗಲೇ 2–0ಯಿಂದ ಹಿನ್ನಡೆಯಲ್ಲಿರುವ ಕೊಹ್ಲಿ ಬಳಗವು ಮೂರನೇ ಪಂದ್ಯದಲ್ಲಿ ಜಯಗಳಿಸುವ ಅವಕಾಶವನ್ನು ಸೃಷ್ಟಿಸಿಕೊಂಡಿದೆ.

ಮೊದಲ ಇನಿಂಗ್ಸ್‌ನಲ್ಲಿ 187 ರನ್‌ಗಳಿಗೆ ಆಲೌಟ್ ಆಗಿದ್ದ ವಿರಾಟ್ ಬಳಗವು ದಕ್ಷಿಣ ಆಫ್ರಿಕಾ ತಂಡವನ್ನು 194ಕ್ಕೆ ಹೆಡೆಮುರಿ ಕಟ್ಟಿತ್ತು.  ಆನಂತರ ಬ್ಯಾಟಿಂಗ್ ಆರಂಭಿಸಿತ್ತು. ದಕ್ಷಿಣ ಆಫ್ರಿಕಾ ವೇಗಿ ವರ್ನಾನ್ ಫಿಲ್ಯಾಂಡರ್ ಮತ್ತು ಆ್ಯಂಡಿಲಿ ಪಿಶುವಾಯೊ ಅವರ ಅಪಾಯಕಾರಿ ಬೌನ್ಸ್‌ರ್‌ಗಳನ್ನು ಎದುರಿಸಿಯೂ ಸವಾಲಿನ ಮೊತ್ತ ಕಲೆ ಹಾಕಿತು.

ನಂತರ ಬ್ಯಾಟಿಂಗ್ ಆರಂಭಿಸಿದ್ದ ಆತಿಥೇಯ ತಂಡಕ್ಕೆ ಆಘಾತವನ್ನೂ ನೀಡಿತ್ತು. ಮೊಹಮ್ಮದ್ ಶಮಿ ತಮ್ಮ ಮೊದಲ ಓವರ್‌ನಲ್ಲಿಯೇ ಮರ್ಕರಮ್ ಅವರ ವಿಕೆಟ್ ಕಬಳಿಸಿದ್ದರು. ಇದರಿಂದಾಗಿ ತಂಡವು ಐದು ರನ್‌ ಮೊತ್ತಕ್ಕೆ ಒಂದು ವಿಕೆಟ್ ಕಳೆದುಕೊಂಡಿತ್ತು.

ಇನಿಂಗ್ಸ್‌ನ ಒಂಬತ್ತನೇ ಓವರ್ ಬೌಲಿಂಗ್ ಮಾಡಿದ ಜಸ್‌ಪ್ರೀತ್ ಬೂಮ್ರಾ ಅವರ ಎಸೆತವು ಡೀನ್ ಎಲ್ಗರ್ ಅವರ ಹೆಲ್ಮೆಟ್‌ನ ಜಾಲರಿಗೆ ಅಪ್ಪಳಿಸಿತು. ಇದರಿಂದ ಡೀನ್ ಆಘಾತಕ್ಕೊಳಗಾದರು. ಕೂಡಲೇ ತಂಡದ ಫಿಸಿಯೋ ಪಿಚ್‌ಗೆ ಧಾವಿಸಿ ಬಂದು ಎಲ್ಗರ್ ಕೈಗೆ ಆಗಿದ್ದ ಗಾಯಕ್ಕೆ ಐಸ್‌ಪ್ಯಾ ಕ್ ನೀಡಿದರು. ಇದರ ಬೆನ್ನಲ್ಲಿಯೇ ಅಂಪೈರ್ ಇಯಾನ್ ಗೌಲ್ಡ್‌ ಮತ್ತು ಅಲೀಮ್ ದಾರ್ ಪರಸ್ಪರ ಚರ್ಚಿಸಿದರು.

ಪಂದ್ಯದ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ಕೂಡ ಅವರನ್ನು ಸೇರಿಕೊಂಡರು. ದಿನದಾಟ ಸ್ಥಗಿತಗೊಳಿಸಲು ನಿರ್ಧರಿಸಿದರು. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇದಕ್ಕೆ ಆಕ್ಷೇಪಿಸಿ ಅಂಪೈರ್‌ಗೆ ಆಟ ಮುಂದುವರಿಸುವಂತೆ ಮನವಿ ಮಾಡಿದರು. ಆದರೆ ಆಂಪೈರ್‌ಗಳು ಜಗ್ಗಲಿಲ್ಲ.

ಬೆಳಿಗ್ಗೆ ಬ್ಯಾಟಿಂಗ್ ಮಾಡಿದ್ದ ಭಾರತ ತಂಡದ ಮುರಳಿ ವಿಜಯ್ ಕೂಡ ಐದು ಬಾರಿ ಬೌನ್ಸರ್‌ಗಳ ಪೆಟ್ಟು ತಿಂದಿದ್ದರು. ರಹಾನೆ, ಭುವನೇಶ್ವರ್ ಕೂಡ ಅಪಾಯ ಎದುರಿಸಿದ್ದರು. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry