ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರಿಗೆ ಅಭಯ: ಪ್ರಕರಣ ಕೈಬಿಡಲು ಸರ್ಕಾರ ಮುಂದು

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಪಟ್ಟಂತೆ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಪ್ರಕರಣಗಳನ್ನು ಕೈಬಿಡುವ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಮಂಗಳೂರು ಮತ್ತು ಬೆಳಗಾವಿ ನಗರಗಳ ಪೊಲೀಸ್‌ ಆಯುಕ್ತರು, ವಿವಿಧ ಜಿಲ್ಲೆಗಳ ಪೊಲೀಸ್‌ ವರಿಷ್ಠರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಗುರುವಾರ (ಜ. 25) ಪತ್ರ ರವಾನೆಯಾಗಿದೆ.

‘ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಐದು ವರ್ಷಗಳ (2013–2017) ಅವಧಿಯಲ್ಲಿ ನಡೆದಿರುವ ಕೋಮುಗಲಭೆಗಳಿಗೆ ಸಂಬಂಧಪಟ್ಟಂತೆ ಅಲ್ಪಸಂಖ್ಯಾತ ಸಮುದಾಯದ ಮುಗ್ಧರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಬೇಕು’ ಎಂದು ಜ. 2ರಂದೇ  ಪತ್ರ ಬರೆಯಲಾಗಿತ್ತು.

ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಕೆಜಿಎಫ್, ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ಬಳ್ಳಾರಿ, ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಪೊಲೀಸ್‌ ವರಿಷ್ಠರಿಗೆ ಈ ಪತ್ರ ಕಳಿಸಲಾಗಿತ್ತು. ಜ.19ರಂದು ಮತ್ತೊಂದು ಪತ್ರ ಬರೆಯಲಾಗಿತ್ತು.

ಆದರೆ, ಆ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂಬ ಕಾರಣಕ್ಕೆ ಮತ್ತೊಮ್ಮೆ ನೆನಪಿನೋಲೆ ರವಾನಿಸಲಾಗಿದೆ. ಹಿಂಪಡೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನೂ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

ಚುನಾವಣಾ ರಾಜಕೀಯ: ‘ಕರಾವಳಿ ಭಾಗದಲ್ಲಿ ಈಚೆಗೆ ಕೋಮು ಸಂಘರ್ಷಕ್ಕೆ ಇಬ್ಬರು ಬಲಿಯಾಗಿದ್ದು, ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಿರುವಾಗ, ನಿರ್ದಿಷ್ಟ ಸಮುದಾಯದ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸಿದರೆ ದ್ವೇಷಕ್ಕೆ ಇನ್ನಷ್ಟು ತುಪ್ಪಸುರಿದಂತಾಗುತ್ತದೆ. ಚುನಾವಣೆ ದೃಷ್ಟಿಯಿಂದ ಮಾತ್ರ ಆಲೋಚನೆ ಮಾಡಲಾಗುತ್ತಿದ್ದು, ಇದರಿಂದ ಉಂಟಾಗುವ ಗಂಭೀರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಯುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಹೋರಾಟಗಾರರು, ರೈತರ ಮೇಲಿನ ಮೊಕದ್ದಮೆ ವಾಪಸ್‌: ಸಿದ್ದರಾಮಯ್ಯ

‘ಕೋಮುಗಲಭೆ ಹಾಗೂ ಇತರ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದಾಖಲಾಗಿರುವ ಪ್ರಕರಣಗಳಷ್ಟೇ ಅಲ್ಲ, ಕನ್ನಡಪರ ಹೋರಾಟಗಾರರು, ರೈತರು ಹಾಗೂ ಇತರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನೂ ಕೈಬಿಡುವ ಬಗ್ಗೆ ಚಿಂತಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

‘ಈ ವಿಷಯದಲ್ಲಿ ಗೃಹ ಇಲಾಖೆ ಅಭಿಪ್ರಾಯ ಪಡೆದು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದೂ ಅವರು ಹೇಳಿದ್ದಾರೆ.

‘ಪ್ರಜಾತಂತ್ರಕ್ಕೆ ಅಪಾಯಕಾರಿ’

ಕೋಮು ಸಂಘರ್ಷದಲ್ಲಿ ಭಾಗಿಯಾಗಿರುವ ಅಲ್ಪಸಂಖ್ಯಾತರ ವಿರುದ್ಧದ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಸಿದ್ದರಾಮಯ್ಯ ನಿರ್ಧಾರ ಪ್ರಜಾತಂತ್ರಕ್ಕೆ ಅಪಾಯಕಾರಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

‘ಸಿದ್ದರಾಮಯ್ಯನವರೇ ನೀವು ಯಾಕೆ ಮುಗ್ಧ ಹಿಂದೂ ಯುವಕರ ಮೇಲೆ ಮೊಕದ್ದಮೆಗಳನ್ನು ವಾಪಸ್ ಪಡೆಯುತ್ತಿಲ್ಲ’ ಎಂದು ಪ್ರಶ್ನಿಸಿದ ಅವರು, ಜಿಹಾದಿಗಳ ವಿರುದ್ಧದ ಮೊಕದ್ದಮೆ ವಾಪಸ್ ಪಡೆಯುವ ಮೂಲಕ ಕೋಮು ಸಂಘರ್ಷ ಹಾಗೂ ಮತ್ತಷ್ಟು ಹಿಂದೂಗಳ ಕೊಲೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದು ಹರಿಹಾಯ್ದರು.

* ಕ್ರಿಮಿನಲ್‌ಗಳ ಮೊಕದ್ದಮೆ ವಾಪಸ್ ಪಡೆಯುವ ಮೂಲಕ ಚುನಾವಣೆ ಹೊತ್ತಿನಲ್ಲಿ ದಂಗೆ ಎಬ್ಬಿಸುವುದು ಸಿ.ಎಂ ಉದ್ದೇಶ.

–ಮುರುಳೀಧರರಾವ್, ಬಿಜೆಪಿ ರಾಜ್ಯ ಉಸ್ತುವಾರಿ 

ಮುಖ್ಯಾಂಶಗಳು

* 5 ವರ್ಷಗಳ ಅವಧಿಯಲ್ಲಿ ದಾಖಲಾಗಿರುವ ಪ್ರಕರಣ

* 21 ಜಿಲ್ಲೆಗಳ ಎಸ್‌.ಪಿಗಳಿಗೆ ಪತ್ರ ರವಾನೆ

* ಜನವರಿ 2, 19ರಂದು ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT