ಸೈನಾಗೆ ಮಣಿದ ಸಿಂಧು

7

ಸೈನಾಗೆ ಮಣಿದ ಸಿಂಧು

Published:
Updated:
ಸೈನಾಗೆ ಮಣಿದ ಸಿಂಧು

ಜಕಾರ್ತ: ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಶುಕ್ರವಾರ ನಡೆದ ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಎಂಟರ ಘಟ್ಟದ ರೋಚಕ ಹಣಾಹಣಿಯಲ್ಲಿ ಭಾರತದವರೇ ಆದ  ಪಿ.ವಿ. ಸಿಂಧು ವಿರುದ್ಧ ಜಯಿಸಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಹಣಾಹಣಿಯಲ್ಲಿ ಸೈನಾ 21–13, 21–19ರಲ್ಲಿ ನೇರ ಗೇಮ್‌ಗಳಿಂದ ಸಿಂಧು ಎದುರು ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು. ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಆಟಗಾರ್ತಿಯರ ಹಣಾಹಣಿ ತೀವ್ರ ಕುತೂಹಲ ಸೃಷ್ಟಿಸಿತ್ತು. ಇತ್ತೀಚೆಗಷ್ಟೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಸೈನಾ, ಸಿಂಧು ಎದುರಿನ ತಮ್ಮ ಗೆಲುವಿನ ದಾಖಲೆಯನ್ನು ಹೆಚ್ಚಿಸಿಕೊಂಡರು.

ಸಿಂಧು ಹಾಗೂ ಸೈನಾ ಭಾರತದಿಂದ ಹೊರಗೆ ಆಡಿದ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಮೊದಲ ಗೇಮ್‌ನಲ್ಲಿ 3–0ರಲ್ಲಿ ಮುನ್ನಡೆ ಪಡೆದುಕೊಂಡ ಸೈನಾ ಬಳಿಕ ಹಿಂತಿರುಗಿ ನೋಡಲಿಲ್ಲ. ಸಿಂಧು 4–4ರಲ್ಲಿ ಸಮಬಲದ ಹೋರಾಟ ನಡೆಸಿದರು. ಆದರೆ ಸೈನಾ ಪಾಯಿಂಟ್ಸ್‌ಗಳ ಅಂತರವನ್ನು ಹೆಚ್ಚಿಸಿಕೊಂಡರು.  27 ವರ್ಷದ ಸೈನಾ ಅವರ ಪ್ರಬಲ ಸ್ಮ್ಯಾಷ್‌ಗಳಿಗೆ ಸಿಂಧು ಬಳಿ ಉತ್ತರ ಇರಲಿಲ್ಲ. 18–10ರಲ್ಲಿ ಮುನ್ನಡೆ ಪಡೆದ ಸೈನಾ ಆ ಬಳಿಕ ಸುಲಭದಲ್ಲಿ ಮೂರು ಪಾಯಿಂಟ್ಸ್ ಗಿಟ್ಟಿಸಿದರು.

ಎರಡನೇ ಗೇಮ್‌ನಲ್ಲಿ 3–3ರವರೆಗೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಸಿಂಧು ಅಮೋಘ ರಿಟರ್ನ್ಸ್‌ಗಳಿಂದ 10–5ರಲ್ಲಿ ಮುನ್ನಡೆ ಪಡೆದರು. ಐದು ನೇರ ಪಾಯಿಂಟ್ಸ್ ಪಡೆದ ಸೈನಾ ತಿರುಗೇಟು ನೀಡುವ ಮೂಲಕ 10–10ರಲ್ಲಿ ಸಮಬಲ ಮಾಡಿಕೊಂಡರು.

ಸಿಂಧು 11–10ರಲ್ಲಿ ಮುಂದಿದ್ದರು. ಈ ವೇಳೆ ದೀರ್ಘ ರ‍್ಯಾಲಿಗಳಿಂದ ಮತ್ತೊಮ್ಮೆ 14–14ರಲ್ಲಿ ಪೈಪೋಟಿ ನಡೆದಿತ್ತು. ಆ ಬಳಿಕ ಸೈನಾ 15–14ರಲ್ಲಿ ಮುಂದಡಿ ಇಟ್ಟರು. ಅಲ್ಲಿಂದ ಮುಂದೆ ಸೈನಾ ಮುನ್ನಡೆ ಬಿಟ್ಟುಕೊಡಲಿಲ್ಲ.

ಮುಂದಿನ ಸುತ್ತಿನಲ್ಲಿ ಭಾರತದ ಆಟಗಾರ್ತಿ ಥಾಯ್ಲೆಂಡ್‌ನ ರಾಚನಕ್ ಇಂಟನಾನ್‌ ಎದುರು ಆಡಲಿದ್ದಾರೆ. ರಾಚನಕ್‌ ಇನ್ನೊಂದು ಕ್ವಾರ್ಟರ್‌

ಫೈನಲ್ ಪೈಪೋಟಿಯಲ್ಲಿ ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry