ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಂಹ ಯಾರು ಎಂಬುದನ್ನು ಜನ ತೀರ್ಮಾನಿಸುತ್ತಾರೆ’

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಂಹ ಯಾರಾಗಬೇಕು ಎಂಬುದನ್ನು 2018ರ ಚುನಾವಣೆಯಲ್ಲಿ ಜನರು ತೀರ್ಮಾನಿಸುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

‘ಈಗ ಹುಲಿ(ಅಮಿತ್ ಶಾ) ಬಂದಿದೆ, ಫೆ.4ರಂದು ಸಿಂಹ(ನರೇಂದ್ರ ಮೋದಿ) ಬರಲಿದೆ’ ಎಂದು ಕೆ.ಎಸ್‌. ಈಶ್ವರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಇಂತಹ ಹುಲಿ, ಸಿಂಹ, ಕಿರುಬಗಳನ್ನು ಸಾಕಷ್ಟು ನೋಡಿದ್ದೇವೆ’ ಎಂದರು.

‘ಕೇಂದ್ರದ ಅನುದಾನ ದುರ್ಬಳಕೆ ಆಗಿದೆ ಎಂದು ಅಮಿತ್ ಶಾ ಮಾಡಿರುವ ಆರೋಪ ಬೇಜವಾಬ್ದಾರಿಯಿಂದ ಕೂಡಿದೆ. ಅನುದಾನ ಖರ್ಚು ಮಾಡಿರುವ ಬಗ್ಗೆ ಲೆಕ್ಕಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕಾಲ ಕಾಲಕ್ಕೆ ನೀಡಲಾಗುತ್ತಿದೆ. ಲೆಕ್ಕ ಕೊಟ್ಟ ಬಳಿಕವೇ ಮುಂದಿನ ವರ್ಷದ ಅನುದಾನ ಬಿಡುಗಡೆಯಾಗುತ್ತದೆ. ಇದರ ಅರಿವೇ ಇಲ್ಲದೆ ಶಾ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಲೆಕ್ಕ ಕೇಳಲು ಶಾ ಯಾರು? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ವಿವಿಧ ರಾಜ್ಯಗಳು ಲೆಕ್ಕ ಕೊಡಬೇಕು ಎಂಬ ಕಾನೂನು ಇದೆಯೇ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ದೆಹಲಿಗೆ ತಲು‍ಪಿವೆ’ ಎಂಬ ಶಾ ಹೇಳಿಕೆಗೂ ಪ್ರತಿಕ್ರಿಯಿಸಿದ ಪರಮೇಶ್ವರ, ‘ಅಕ್ರಮಗಳಿದ್ದರೆ ಮೊದಲು ರಾಜ್ಯದ ಜನತೆಯ ಮುಂದಿಟ್ಟು ಬಹಿರಂಗ ಚರ್ಚೆ ನಡೆಸಿ’ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಕಾರ್ಯಕರ್ತರ ಮನೆ ಮುಂದೆ ಮಾತ್ರ ಕಾರುಗಳು ನಿಲ್ಲುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಮನೆಗಳ ಮುಂದೆಯೂ ಕಾರುಗಳು ನಿಂತಿವೆ. ಎಲ್ಲರೂ ಸ್ವಾಭಿಮಾನದಿಂದ ಬದುಕುವ ವಾತಾವರಣವನ್ನು ರಾಜ್ಯ ಸರ್ಕಾರ ಕಲ್ಪಿಸಿಕೊಟ್ಟಿದೆ ಎಂದರು.

‘ಹುಲಿ, ಸಿಂಹಗಳು ಕಾಡಿಗೆ ಹೋಗಲಿ’

‌‘ಕರ್ನಾಟಕದಲ್ಲಿ ಹುಲಿ ಸಂರಕ್ಷಣೆ ಯೋಜನೆ ಜಾರಿಯಲ್ಲಿದೆ. ಬನ್ನೇರುಘಟ್ಟ, ನಾಗರಹೊಳೆ, ದಾಂಡೇಲಿಯಲ್ಲಿ ಸಾಕಷ್ಟು ‌ಕಾಡಿದೆ. ಬಿಜೆಪಿಯ ಹುಲಿ, ಸಿಂಹಗಳು ಎಲ್ಲಿಬೇಕಾದರೂ ಓಡಾಡಲಿ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು. ‘ಶಾ ಹುಲಿ, ಮೋದಿ ಸಿಂಹ’ ಎಂಬ ಈಶ್ವರಪ್ಪ ಹೇಳಿಕೆಗೆ ಅವರು ತಿರುಗೇಟು ಕೊಟ್ಟಿದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT