ಬಂಡವಾಳ ಆಕರ್ಷಣೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ರಾಜ್ಯಪಾಲ ವಜುಭಾಯಿ ವಾಲಾ

7

ಬಂಡವಾಳ ಆಕರ್ಷಣೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ರಾಜ್ಯಪಾಲ ವಜುಭಾಯಿ ವಾಲಾ

Published:
Updated:
ಬಂಡವಾಳ ಆಕರ್ಷಣೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನ: ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು: ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಪ್ರಗತಿ ಹೊಂದಿದ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಎರಡನೆ ಬಾರಿಯೂ ಮೊದಲ ಸ್ಥಾನದಲ್ಲಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹರ್ಷ ವ್ಯಕ್ತಪಡಿಸಿದರು.

ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ಷಾ ಪರೇಡ್‌ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಐಟಿ ಮತ್ತು ಬಿಟಿ ವಲಯಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಸರ್ಕಾರದ ವಿಶೇಷ ಪ್ರಯತ್ನದ ಮೂಲಕ 2017ರಲ್ಲಿ ರಾಜ್ಯದಿಂದ ₹3 ಲಕ್ಷ ಕೋಟಿ ಮೌಲ್ಯದ ಸಾಫ್ಟ್‌ವೇರ್‌ ರಫ್ತು ಮಾಡಲಾಗಿದೆ ಎಂದರು.

ದೇಶದ ಜೈವಿಕ ತಂತ್ರಜ್ಞಾನ ಉದ್ದಿಮೆ ಕ್ಷೇತ್ರದ ಆದಾಯದಲ್ಲಿ ಕರ್ನಾಟಕದ ಕೊಡುಗೆ ಶೇ 35.  ದತ್ತಾಂಶ (ಡೇಟಾ) ಕೇಂದ್ರವನ್ನು ಸ್ಥಾಪಿಸಿದ್ದು, ಅದು ಸರ್ಕಾರದ ದಾಖಲೆಗಳನ್ನು ರಕ್ಷಿಸಿಡುವ ಖಜಾನೆಯಾಗಿದೆ. 24 X 7 ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ವಿವಿಧ ಕಾರ್ಯಕ್ರಮಗಳ ಅಡಿ 2,147 ಕಿ.ಮೀ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 4,014 ಕಿ.ಮೀ ಪ್ರಮುಖ ಜಿಲ್ಲಾ ರಸ್ತೆಗಳನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಡಿಜಿಟಲ್‌ ಆಡಳಿತ ಮತ್ತು ಸಂಪರ್ಕವನ್ನು ವಿಸ್ತರಿಸಲು ಒತ್ತು ನೀಡಲಾಗಿದ್ದು, ಈಗಾಗಲೇ 5,353 ಗ್ರಾಮ ಪಂಚಾಯ್ತಿಗಳಿಗೆ ವೈ–ಫೈ ಸೇವೆಗಳೊಂದಿಗೆ ಕರ್ನಾಟಕ ರಾಜ್ಯ ವೈಡ್‌ ಏರಿಯಾ ನೆಟ್‌ವರ್ಕ್‌ಗೆ ಸಂಪರ್ಕ ನೀಡಲಾಗಿದೆ ಎಂದರು.

22.35 ಲಕ್ಷ ಕೃಷಿಕರ ₹ 8,165 ಕೋಟಿ ಮೊತ್ತದ ಕೃಷಿ ಸಾಲ ಮತ್ತು 19,410 ನೇಕಾರರ ₹ 53.64 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಇದ್ದರು.

ಇಂದಿರಾ ಕ್ಯಾಂಟೀನ್‌ ರಾಜ್ಯದಾದ್ಯಂತ ವಿಸ್ತರಣೆ

ಬೆಂಗಳೂರು ನಗರದಲ್ಲಿ ಆರಂಭಿಸಿದ ಇಂದಿರಾ ಕ್ಯಾಂಟೀನ್‌ ಅನ್ನು ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗುವುದು. ಹಸಿವು ಮುಕ್ತ ಕರ್ನಾಟಕ ಗುರಿ ಸಾಧಿಸಲು ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಅನ್ನ ಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ಆಹಾರ ಧಾನ್ಯಗಳ ಪ್ರಮಾಣವನ್ನು 5 ಕೆ.ಜಿ.ಯಿಂದ 7 ಕೆ.ಜಿ.ಗೆ ಹೆಚ್ಚಿಸಲಾಗಿದೆ. ಶೇ 50 ರಿಯಾಯ್ತಿ ದರದಲ್ಲಿ ತೊಗರಿ ಬೇಳೆಯನ್ನೂ ಪೂರೈಕೆ ಮಾಡಲಾಗುತ್ತಿದೆ. ಮಾತೃಪೂರ್ಣ ಯೋಜನೆಯಡಿ ಪೌಷ್ಠಿಕಾಂಶಯುಕ್ತ ಬಿಸಿಯೂಟವನ್ನು 8.70 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಒದಗಿಸಲಾಗುತ್ತಿದೆ ಎಂದರು.

ಭಾಷಣದ ಮುಖ್ಯಾಂಶಗಳು

* ವನ್ಯಜೀವಿ ಸಂರಕ್ಷಣೆಯಲ್ಲಿ ಮಹತ್ವದ ಸಾಧನೆ, ಆನೆ ಮತ್ತು ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳ

* ಮೆಟ್ರೋ ಹಂತ–2ರ 72 ಕಿ.ಮೀ ಕಾಮಗಾರಿ ಸಂಪೂರ್ಣವಾಗಿ ಪ್ರಗತಿಯಲ್ಲಿದೆ.

* ಮಹಿಳೆಯ ಸಬಲೀಕರಣ ಮತ್ತು ಘನತೆ ರಕ್ಷಿಸಲು ಸರ್ಕಾರದಿಂದ ಹಲವು ಕ್ರಮಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry