ಪಟಾಕಿ ಸಿಡಿದು 7 ಮಂದಿಗೆ ಗಾಯ

7

ಪಟಾಕಿ ಸಿಡಿದು 7 ಮಂದಿಗೆ ಗಾಯ

Published:
Updated:
ಪಟಾಕಿ ಸಿಡಿದು 7 ಮಂದಿಗೆ ಗಾಯ

ಹಂಪಾಪುರ (ಮೈಸೂರು ಜಿಲ್ಲೆ): ಸಮೀಪದ ಮಾದಾಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಪಟಾಕಿ ಸಿಡಿದು ಐವರು ಬಾಲಕರು ಸೇರಿದಂತೆ 7 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಟ್ಟಡ ಸಂಪೂರ್ಣವಾಗಿ ಕುಸಿದಿದೆ.

ಗ್ರಾಮದ ಮಲ್ಲನಾಯಕ (60), ದೇವರಾಜು (17), ಅಪ್ಪು (14), ದರ್ಶನ್ (14), ಕುಮಾರಸ್ವಾಮಿ (13), ಮಧು (13) ಹಾಗೂ ಪಟಾಕಿ ತಯಾರಿಸುತ್ತಿದ್ದ ಉದ್ಬೂರಿನ ಹರೀಶ್ (28) ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಚಂದ್ರಮೌಳೇಶ್ವರ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಸಲುವಾಗಿ ಹಳೆಯ ಕಟ್ಟದಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು. ಹರೀಶ್ 3–4 ದಿನಗಳಿಂದ ಈ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನು ನೋಡಲು ಗ್ರಾಮದ ಜನರು ಆಗಾಗ ಹೋಗುತ್ತಿದ್ದರು. ಆಕಸ್ಮಿಕವಾಗಿ ಬೆಂಕಿ ತಗುಲಿ ಪಟಾಕಿಗಳು ಸಿಡಿದಿವೆ.

ಹರೀಶ್ ಹೊರತುಪಡಿಸಿ ಉಳಿದ ಎಲ್ಲರನ್ನೂ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಯಿತು.ಆದರೆ, ತೀವ್ರವಾಗಿ ಗಾಯಗೊಂಡಿದ್ದ ಹರೀಶ್ ಅವರನ್ನು ನೇರವಾಗಿ ಮೈಸೂರಿಗೆ ಕರೆದೊಯ್ಯಲಾಯಿತು. ದೇವರಾಜು, ಹರೀಶ್, ಮಲ್ಲನಾಯಕ ಅವರ ಸ್ಥಿತಿ ಗಂಭೀರವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಫೆ. 5 ಮತ್ತು 6ರಂದು ಜಾತ್ರೆಗೆ ಗ್ರಾಮದಲ್ಲಿ ಸಿದ್ಧತೆ ನಡೆಸಲಾಗುತ್ತಿತ್ತು. ವಂತಿಕೆ ಸಂಗ್ರಹಿಸಿ ಜಾತ್ರೆ ಆಚರಿಸಲು ಮುಂದಾಗಿದ್ದರು. ಅದರಂತೆ ಗ್ರಾಮಸ್ಥರು ಮನೆಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಆದರೆ, ಮಕ್ಕಳು ಶಾಲೆ ಮತ್ತು ಕಾಲೇಜು ಮುಗಿಸಿಕೊಂಡು ಪಟಾಕಿ ತಯಾರಿಸುವ ಸ್ಥಳಕ್ಕೆ ಉತ್ಸಾಹದಿಂದ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry