ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಬಾರಿ ತಪ್ಪಿದ ಮುಖ್ಯಮಂತ್ರಿ ಪದವಿ: ಸ್ವಪಕ್ಷದವರ ವಿರುದ್ಧ ಬೇಸರ ಹೊರಹಾಕಿದ ಪೂಜಾರಿ

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಕುತೂಹಲ ಕೆರಳಿಸಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ದನ್‌ ಪೂಜಾರಿ ಅವರ ಆತ್ಮಕಥೆ ‘ಸಾಲ ಮೇಳದ ಸಂಗ್ರಾಮ’ ಶುಕ್ರವಾರ ನಗರದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಬಿಡುಗಡೆ ಆಯಿತು.

ಪೂಜಾರಿ ಅವರು ಬೆಳೆದು ಬಂದ ದಾರಿ, ಮುಖ್ಯಮಂತ್ರಿ ಆಗುವ ಅವಕಾಶ ತಪ್ಪಿದ ಬಗೆ ಹೀಗೆ ಹತ್ತು ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.

ಪ್ರಮುಖವಾಗಿ ನಾಲ್ಕು ಬಾರಿ ಒಲಿದು ಬಂದ ಮುಖ್ಯಮಂತ್ರಿ ಪದವಿ ಕೈತಪ್ಪಿದ ಬಗೆಯನ್ನು ಎಳೆಎಳೆಯಾಗಿ ಪೂಜಾರಿ ಬಿಡಿಸಿಟ್ಟಿದ್ದಾರೆ.
‘1984 ರಲ್ಲಿ ಅವಧಿಗೂ ಮುನ್ನವೇ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು, ವಿಧಾನಸಭೆ ವಿಸರ್ಜಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ರಾಜ್ಯದಲ್ಲಿ ಬಹುಮತ ಪಡೆಯಲಿದ್ದು, ನೀವೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ರಾಜೀವ್‌ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಎಲ್‌. ಪೋತೆದಾರ್‌ ನನಗೆ ಹೇಳಿದ್ದರು. ನಾನು ಬೇಡ ಎಂದರೂ, ನೀವು ಮುಖ್ಯಮಂತ್ರಿ ಆಗಲೇಬೇಕು ಎಂದು ಒತ್ತಾಯಿಸಿದ್ದರು. ಆದರೆ, ರಾಮಕೃಷ್ಣ ಹೆಗಡೆ ಮತ್ತೆ ಗೆದ್ದು ಬಿಟ್ಟರು’ ಎಂದು ವಿವರಿಸಿದ್ದಾರೆ.

‘1989 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಹುಮತ ಪಡೆಯಿತು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆದರು. ಆದರೆ, ಅದಕ್ಕಿಂತ ಮೊದಲು ನಡೆದಿದ್ದು ಬೇಸರ ತರಿಸಿತ್ತು. ಆ ಸಂದರ್ಭದಲ್ಲಿ ಪೂಜಾರಿ ಪಕ್ಷದಲ್ಲಿ ಇರಬಾರದು ಎಂದು ಒಳಗಿನವರೇ ಸಂಚು ರೂಪಿಸಿದ್ದರು. ಚೆನ್ನೈನಲ್ಲಿ ನಡೆದ ಎಐಸಿಸಿ ಅಧಿವೇಶನದ ಸಂದರ್ಭದಲ್ಲಿ ನಾನು ವೇದಿಕೆಯಲ್ಲಿದ್ದೆ. ಮಾಧ್ಯಮದವರು ನನ್ನನ್ನು ಕರೆದು, ನೀವು ರಾಜೀನಾಮೆ ನೀಡಿದ್ದೀರಾ? ನಮ್ಮ ಕಚೇರಿಗೆ ರಾಜೀನಾಮೆ ಪತ್ರ ಬಂದಿದೆ ಎಂದು ತೋರಿಸಿದರು. ಅದರಲ್ಲಿ ನನ್ನ ಸಹಿ ಕೂಡ ಇತ್ತು. ನನ್ನ ಸಹಿಯನ್ನು ಫೋರ್ಜರಿ ಮಾಡಲಾಗಿತ್ತು. ಇದರಿಂದ ನನಗೆ ತೀವ್ರ ಬೇಸರವಾಯಿತು’ ಎಂಬುದನ್ನು ಆತ್ಮಕತೆಯಲ್ಲಿ ವಿವರಿಸಿದ್ದಾರೆ.

‘ವೀರೇಂದ್ರ ಪಾಟೀಲರು ಅನಾರೋಗ್ಯಕ್ಕೆ ತುತ್ತಾದಾಗ, ಮತ್ತೆ ನನಗೆ ಮುಖ್ಯಮಂತ್ರಿ ಆಗುವಂತೆ ವರಿಷ್ಠರು ಹೇಳಿದರು. ಆದರೆ, ನಾನು ಬೇಡವೇ ಬೇಡ ಎಂದೆ. ಇತ್ತ ದೆಹಲಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂಗಾರಪ್ಪ ಲಾಬಿ ಪ್ರಬಲವಾಯಿತು. ಅವರೇ ಮುಖ್ಯಮಂತ್ರಿಯಾದರು‘ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

‘ಭ್ರಷ್ಟಾಚಾರದಿಂದಾಗಿ ಬಂಗಾರಪ್ಪ ಅವರ ತಲೆದಂಡ ಆದಾಗಲೂ ಮತ್ತೆ ಸಿಎಂ ಪದವಿ ಒಲಿದು ಬಂದಿತ್ತು. ಆದರೆ, ಎಸ್.ಎಂ. ಕೃಷ್ಣ ಮತ್ತು ವೀರಪ್ಪ ಮೊಯಿಲಿ ಲಾಬಿ ನಡೆಸಿದ್ದರು. ಆಗ ಪ್ರಧಾನಿ ನರಸಿಂಹರಾವ್‌ ಅವರಿಗೆ ಬೆಂಬಲ ನೀಡಿದ್ದ ಕೇರಳದ ಮುಖ್ಯಮಂತ್ರಿ ಕರುಣಾಕರನ್‌ ಅವರು ಮೊಯಿಲಿ ಪರ ನಿಂತರು. ನಿಜವಾಗಿಯೂ ಆಗ ಎಸ್‌.ಎಂ. ಕೃಷ್ಣ ಅವರಿಗೇ ಶಾಸಕರ ಬೆಂಬಲವಿತ್ತು. ಆದರೆ, ರಾಜಕೀಯ ತಂತ್ರಗಾರಿಕೆಯಿಂದ ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದರು’ ಎಂಬುದನ್ನು ತಿಳಿಸಿದ್ದಾರೆ.

‘ರಾಜಕೀಯ ಎಂಬುದು ಭಯಂಕರ ರಹಸ್ಯಗಳುಳ್ಳ ಚಕ್ರವ್ಯೂಹ. ನಾನು ಇಷ್ಟರವರೆಗೆ ಇದರಲ್ಲಿ ಬದುಕಿದ್ದೇ ದೊಡ್ಡದು. ಈ ದೆಹಲಿ ರಾಜಕೀಯ ಕರ್ನಾಟಕಕ್ಕಿಂತ ಬಹಳ ದೊಡ್ಡ ಚಕ್ರವ್ಯೂಹ. ಅಲ್ಲೂ ಬದುಕಿದೆನಲ್ಲ. ಅದೇ ನನ್ನ ಸಾಧನೆ’ ಎಂದು ಹೇಳಿಕೊಂಡಿದ್ದಾರೆ.

ರೈ–ಪೂಜಾರಿ ಮುಖಾಮುಖಿ: ಕಳೆದ ಕೆಲ ದಿನಗಳ ಹಿಂದಷ್ಟೇ ತಮ್ಮನ್ನು ಸಚಿವ ರಮಾನಾಥ ರೈ ನಿಂದಿಸಿದ್ದಾರೆ ಎಂದು ಕಣ್ಣೀರು ಹಾಕಿದ್ದ ಜನಾರ್ದನ್‌ ಪೂಜಾರಿ ಹಾಗೂ ಸಚಿವ ಬಿ. ರಮಾನಾಥ ರೈ, ಶುಕ್ರವಾರ ನಡೆದ ಸಮಾರಂಭದಲ್ಲಿ ಮುಖಾಮುಖಿಯಾದರು.

ರೈ ಅವರನ್ನು ವೇದಿಕೆಗೆ ಸ್ವಾಗತಿಸಿದ ಪೂಜಾರಿ, ಇವರು ಬಂಟ್ವಾಳ ಕ್ಷೇತ್ರದ ಪ್ರಗತಿಗೆ ಶ್ರಮಿಸಿದ್ದಾರೆ. ಇವರಿಗೆ ದೇವರು ಇನ್ನಷ್ಟು ಆಯುರಾರೋಗ್ಯ ಕೊಡಲಿ ಎಂದು ಆಶಿಸಿದರು.

ಅದೇ ರೀತಿ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ ಹಾಗೂ ಸಚಿವ ಬಿ. ರಮಾನಾಥ ರೈ ಕೂಡ ವೇದಿಕೆಯನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT