ಲಿಫ್ಟ್‌ಗೆ ಅನುಮತಿ ನಿರಾಕರಿಸಿದ ಪುರಾತತ್ವ ಇಲಾಖೆ: ಪರ್ಯಾಯ ಸ್ಥಳಕ್ಕೆ ಸೂಚನೆ

7

ಲಿಫ್ಟ್‌ಗೆ ಅನುಮತಿ ನಿರಾಕರಿಸಿದ ಪುರಾತತ್ವ ಇಲಾಖೆ: ಪರ್ಯಾಯ ಸ್ಥಳಕ್ಕೆ ಸೂಚನೆ

Published:
Updated:
ಲಿಫ್ಟ್‌ಗೆ ಅನುಮತಿ ನಿರಾಕರಿಸಿದ ಪುರಾತತ್ವ ಇಲಾಖೆ: ಪರ್ಯಾಯ ಸ್ಥಳಕ್ಕೆ ಸೂಚನೆ

ಹಾಸನ: ಬಾಹುಬಲಿ ಮೂರ್ತಿಗೆ ಧಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಅಟ್ಟಣಿಗೆಗೆ ಲಿಫ್ಟ್‌ ಅಳವಡಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಅನುಮತಿ ನಿರಾಕರಿಸಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್‌ ತಿಳಿಸಿದರು.

‘ಲಿಫ್ಟ್‌ ಅಳವಡಿಕೆಯಿಂದ ಮೂರ್ತಿಗೆ ಯಾವುದೇ ಧಕ್ಕೆ ಆಗುವುದಿಲ್ಲ’ ಎಂದು ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ರಾಕ್‌ ಮೆಕಾನಿಕ್ಸ್‌’ ಪ್ರಮಾಣ ಪತ್ರ ನೀಡಿದ್ದರೂ ಪುರಾತತ್ವ ಇಲಾಖೆ ಒಪ್ಪಿಗೆ ನೀಡಿಲ್ಲ. ಇದಕ್ಕೆ ಪರ್ಯಾಯವಾಗಿ ಮೂರು ಸ್ಥಳಗಳನ್ನು ಸೂಚಿಸಿದೆ. ಇದು 50 ಮೀಟರ್‌ ದೂರ ಇರುವುದರಿಂದ ಮಠದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ಮಹಾಮಸ್ತಕಾಭಿಷೇಕ ಮಹೋತ್ಸದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು.

ಪುರಾತತ್ವ ಇಲಾಖೆ ಅಧಿಕಾರಿಗಳ ಮನವೊಲಿಸಲು ಪ್ರಯತ್ನಿಸಲಾಗುವುದು. ಅದಕ್ಕೂ ಒಪ್ಪದಿದ್ದರೆ ಅನಿವಾರ್ಯವಾಗಿ ಪರ್ಯಾಯ ವ್ಯವಸ್ಥೆಗೆ ಚಿಂತನೆ ಮಾಡಬೇಕು ಎಂದು ಮಹೋತ್ಸವ ವಿಶೇಷಾಧಿಕಾರಿ ರಾಕೇಶ್‌ ಸಿಂಗ್ ಪ್ರತಿಕ್ರಿಯಿಸಿದರು.

ಶ್ರವಣಬೆಳಗೊಳ ಬಸ್‌ ನಿಲ್ದಾಣದ ಮೊದಲ ಮಹಡಿಯಲ್ಲಿ ಸಿಬ್ಬಂದಿ ವಿಶ್ರಾಂತಿ ಕೊಠಡಿ ನಿರ್ಮಿಸಿರುವುದಕ್ಕೆ ಪುರಾತತ್ವ ಇಲಾಖೆ ನೋಟಿಸ್ ನೀಡಿರುವುದನ್ನು ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿ ಯಶವಂತ್‌ ಸಭೆಯ ಗಮನಕ್ಕೆ ತಂದರು. ಜನರ ಅನುಕೂಲಕ್ಕೆ 175 ಬಸ್‌ ಹಾಗೂ 60 ಮಿನಿ ಬಸ್‌ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಪಟ್ಟಣದ 5 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಉಚಿತವಾಗಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು. ಈ ಸಂಬಂಧ ಸಾರಿಗೆ ಸಚಿವರ ಜತೆ ಚರ್ಚಿಸಲಾಗುವುದು ಎಂದು ಸಚಿವ ಎ.ಮಂಜು ತಿಳಿಸಿದರು.

12 ಉಪನಗರಗಳ ಪೈಕಿ 10 ನಗರಗಳು ಪೂರ್ಣಗೊಂಡಿದ್ದು, ಗಣ್ಯರ ನಗರ ಮತ್ತು ಮಾಧ್ಯಮ ನಗರ ಇದೇ ತಿಂಗಳ 30ಕ್ಕೆ ಪೂರ್ಣಗೊಳ್ಳಲಿದೆ. ನೀರು, ವಿದ್ಯುತ್‌, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಮನೋಜ್‌ ಕುಮಾರ್‌ ಮೀನಾ, ಕಳೆದ ಬಾರಿ 13 ಸಾವಿರ ಜನರು ಹೊರರೋಗಿಗಳಾಗಿ, 6 ಸಾವಿರ ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಹೃದಯ ಸಂಬಂಧಿ ಕಾಯಿಲೆ ಇದ್ದವರೇ ಹೆಚ್ಚು. ಈ ಬಾರಿ 200 ಹಾಸಿಗೆಗಳ ಆಸ್ಪತ್ರೆ ಸಿದ್ದಗೊಂಡಿದ್ದು, 130 ತಜ್ಞ ವೈದ್ಯರು, 10 ಆ್ಯಂಬುಲೆನ್ಸ್‌, 13 ಕ್ಲಿನಿಕ್‌ ಸ್ಥಾಪನೆ ಹಾಗೂ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಮಠದ ಪ್ರತಿನಿಧಿ, ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯದರ್ಶಿ ವಿನೋದ್‌ ದೊಡ್ಡಣವರ, ಬೆಳಿಗ್ಗೆ 6ರಿಂದ 2ರ ವರೆಗೆ ಮೂರ್ತಿಗೆ ಅಭಿಷೇಕ ನಡೆಯುವ ಕಾರಣ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದರು.

ಕಾಮಗಾರಿ ಪೂರ್ಣಕ್ಕೆ ಜ. 30ರ ಗಡುವು

ಕಳೆದ ಬಾರಿ ಎರಡು ಲಿಫ್ಟ್‌ ಅಳವಡಿಸಲಾಗಿತ್ತು. ಈ ಬಾರಿ ಬೇರೆ ಜಾಗದಲ್ಲಿ ಅಳವಡಿಸುವಂತೆ ಪುರಾತತ್ವ ಇಲಾಖೆ ಸಲಹೆ ನೀಡಿದೆ. ತಾಂತ್ರಿಕ ಸಮಸ್ಯೆ ಕುರಿತು ಇಲಾಖೆ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಲಿಫ್ಟ್‌ ಸಾಮಗ್ರಿಗಳನ್ನು ತರಿಸಲಾಗಿದೆ. ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ಜ. 30 ಗಡುವು ನೀಡಲಾಗಿದ್ದು, 31ರಂದು ಮತ್ತೊಮ್ಮೆ ಸಭೆ ನಡೆಸಿ ಮಠಕ್ಕೆ ಹಸ್ತಾಂತರ ಮಾಡಲಾಗುವುದು ಎಂದು ಸಭೆ ಬಳಿಕ ಸಚಿವ ಮಂಜು ಸುದ್ದಿಗಾರರಿಗೆ ತಿಳಿಸಿದರು.

ಮುಖ್ಯಾಂಶಗಳು

* ಕೆಎಸ್‌ಆರ್‌ಟಿಸಿಗೂ ನೋಟಿಸ್‌

* 130 ತಜ್ಞ ವೈದ್ಯರ ನಿಯೋಜನೆ

* ಅಭಿಷೇಕ ವೇಳೆ ಸಾರ್ವಜನಿಕರಿಗೆ ದರ್ಶನ ಇಲ್ಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry