ಸಿಐಡಿ ಪೊಲೀಸರಿಂದ ದೋಷಾರೋಪ ಪಟ್ಟಿ ಸಲ್ಲಿಕೆ

7

ಸಿಐಡಿ ಪೊಲೀಸರಿಂದ ದೋಷಾರೋಪ ಪಟ್ಟಿ ಸಲ್ಲಿಕೆ

Published:
Updated:

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು 101 ಪುಟಗಳ ದೋಷಾರೋಪ ಪಟ್ಟಿಯನ್ನು ಗುರುವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದರು.

ಈ ಹಿಂದೆ 816 ಪುಟದ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು, ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಉಲ್ಲೇಖಿಸಿದಂತೆ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ಅವರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಅವರಿಗೆ ಸಲ್ಲಿಸಿದರು.

ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ ಶೆಟ್ಟಿ ಮತ್ತು ನಂದಳಿಕೆ ನಿರಂಜನ ಭಟ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ನ್ಯಾಯಾಧೀಶರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಗಳ ವಿಚಾರಣೆ ನಡೆಸಿದರು.

ಆರೋಪಿಗಳ ಪರ ವಕೀಲ ಅರುಣ್‌ ಬಂಗೇರ ಬೆಳುವಾಯಿ ಪ್ರಕರಣ ವಿಚಾರಣೆಗೆ ದಿನ ನಿಗದಿ ಮಾಡಲು ಸಮಯಾವಕಾಶ ಕೊಡಬೇಕು ಎಂದು ಮನವಿ ಮಾಡಿದರು. ಮುಂದಿನ ವಿಚಾರಣಾ ಪ್ರಕ್ರಿಯೆಗೆ ನ್ಯಾಯಾಧೀಶರು ಫೆ.9ನ್ನು ನಿಗದಿಪಡಿಸಿದ್ದಾರೆ.

ಇದೇ ಪ್ರಕರಣದದಲ್ಲಿ ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಅರ್ಚಕ ಶ್ರೀನಿವಾಸ ಭಟ್‌ ಹಾಗೂ ಕಾರು ಚಾಲಕ ರಾಘವೇಂದ್ರ ಕೋರ್ಟ್‌ನಲ್ಲಿ ಹಾಜರಿದ್ದರು.

ಭಾಸ್ಕರ್ ಶೆಟ್ಟಿ ಮನೆಯಲ್ಲಿ ದೊರೆತ ರಕ್ತದ ಕಲೆ ಹಾಗೂ ಮೊಳೆಗಳ ಮಾದರಿಗಳ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಆರೋಪ ಪಟ್ಟಿಯಲ್ಲಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry