ಮೈಮನ ಪುಳಕಗೊಳಿಸಿದ ಶಿಸ್ತಿನ ಹೆಜ್ಜೆಗಳು

7

ಮೈಮನ ಪುಳಕಗೊಳಿಸಿದ ಶಿಸ್ತಿನ ಹೆಜ್ಜೆಗಳು

Published:
Updated:
ಮೈಮನ ಪುಳಕಗೊಳಿಸಿದ ಶಿಸ್ತಿನ ಹೆಜ್ಜೆಗಳು

ಬೆಂಗಳೂರು: ಶಿಸ್ತಿನ ಹೆಜ್ಜೆಗಳ ಆ ಪಥಸಂಚಲನ ಸಾಗುತ್ತಿರುವಷ್ಟು ಸಮಯವೂ ಕರತಾಡನಗಳ ಸದ್ದು ಮೊಳಗುತ್ತಲೇ ಇತ್ತು. ರೆಪ್ಪೆ ಮಿಟುಕಿಸದೆ ನೋಡುತ್ತಿದ್ದವರ ಮನದೊಳಗೆ ರಾಷ್ಟ್ರಭಕ್ತಿಯ ಪುಳಕ ಆವರಿಸಿತ್ತು.

ನಗರದ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಶುಕ್ರವಾರ ನಡೆದ 69ನೇ ಗಣರಾಜ್ಯೋತ್ಸವ ಸಮಾರಂಭ ಶಿಸ್ತು, ಶೌರ್ಯ, ಸಾಹಸ, ಚಿತ್ತಾಕರ್ಷಕ ನೃತ್ಯರೂಪಕಗಳಿಂದ ಮನಸೂರೆಗೊಂಡಿತು.

ರಾಜ್ಯಪಾಲ ವಜುಭಾಯಿ ವಾಲಾ ಅವರು ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ, ವಾಯುಪಡೆಯ ಹೆಲಿಕಾಪ್ಟರ್‌ ಮೈದಾನದ ಮೇಲೆ ಪುಷ್ಪವೃಷ್ಟಿ ಮಾಡಿ, ಸಂಭ್ರಮಕ್ಕೆ ಚಾಲನೆ ನೀಡಿತು.

ಪರೇಡ್‌ ಕಮಾಂಡರ್‌ ಮೇಜರ್‌ ಕೆ.ಅರವಿಂದ್‌ ಸಾರಥ್ಯದಲ್ಲಿ ಸಾಗಿದ 56 ತುಕಡಿಗಳ ಕವಾಯತು ಇಡೀ ಮೈದಾನಕ್ಕೆ ಹೊಸ ರಂಗು ತುಂಬಿತು.

ಸೇನಾ ಪಡೆಗಳು, ಗಡಿ ಭದ್ರತಾ ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಪೊಲೀಸ್, ಪೊಲೀಸ್‌ ಬ್ಯಾಂಡ್‌, ಶ್ವಾನದಳ, ಸಂಚಾರ ವಾರ್ಡನ್‌, ಎನ್‌ಸಿಸಿ, ಎನ್‌ಎಸ್‌ಎಸ್‌ ಜತೆಗೆ, ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತುಕಡಿಗಳು ಪಥಸಂಚಲನದಲ್ಲಿ ಹೆಜ್ಜೆ ಹಾಕಿದವು.

ಕಣ್ಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ: ನಂತರ ವಿವಿಧ ಶಾಲೆಗಳ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರಲ್ಲಿ ದೇಶಭಕ್ತಿಯನ್ನು ಉದ್ದೀಪಿಸಿತು. ಚಿಕ್ಕಬಿದರಕಲ್ಲು ಸರ್ಕಾರಿ ಪ್ರೌಢಶಾಲೆಯ 650 ಮಕ್ಕಳಿಂದ ಮೂಡಿಬಂದ ‘ಪುಣ್ಯಭೂಮಿ ಭಾರತ’ ನೃತ್ಯದಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.

ಹೂಡಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಫ್ಲಾರೆನ್ಸ್‌ ಪಬ್ಲಿಕ್‌ ಶಾಲೆಯ ಒಟ್ಟು 682 ಮಕ್ಕಳು ಪ್ರಸ್ತುತಪಡಿಸಿದ ‘ನಾವು ಪ್ರಚಂಡ ಭಾರತೀಯರು, ವಿಶಾಲ ಹೃದಯದವರು’ ನೃತ್ಯರೂಪಕ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಗೆ, ಸಂವಿಧಾನ ರೂಪುಗೊಂಡ ಇತಿಹಾಸವನ್ನು ಅನಾವರಣಗೊಳಿಸಿತು. ಮದ್ರಾಸ್‌ ರೆಜಿಮೆಂಟಲ್‌ ಸೆಂಟರ್‌ನ 12 ಮಕ್ಕಳು ಕಲರಿಪಯಟ್ಟು ಸಮರ ಕಲೆಯನ್ನು ಪ್ರದರ್ಶಿಸಿದರು.

ಮೈನವಿರೇಳಿಸಿದ ‘ಶ್ವೇತ ಅಶ್ವ’: ಕೊನೆಯದಾಗಿ ಮೈದಾನಕ್ಕೆ ಇಳಿದ ಆರ್ಮಿ ಸರ್ವಿಸ್‌ ಕೋರ್ (ಎಎಸ್‌ಸಿ) ಸೆಂಟರ್‌ ಮತ್ತು ಸೈನಿಕರ ಕಾಲೇಜಿನ ‘ಶ್ವೇತ ಅಶ್ವ’ ಬೈಕ್‌ ತಂಡ ಪ್ರದರ್ಶಿಸಿದ ವಿವಿಧ ಸಾಹಸಗಳು ನೋಡುಗರ ಮೈನವಿರೇಳಿಸಿದವು.

ಬುಲೆಟ್ ಬೈಕ್‌ಗಳ ಮೇಲೆ ಯೋಧರು ಕ್ಷಣ ಕ್ಷಣಕ್ಕೊಮ್ಮೆ ತೋರುತ್ತಿದ್ದ ವಿವಿಧ ರೀತಿಯ ಕಸರತ್ತುಗಳು ಪ್ರೇಕ್ಷಕರ ಮೈ ಜುಮ್ಮೆನಿಸಿದವು.

ಬೈಕ್‌ಗಳ ಮೇಲೆ ರಚನೆಯಾದ ಮಾನವ ಪಿರಮಿಡ್, ಹೆಲಿಕಾಪ್ಟರ್‌ ಹಾಗೂ ಏಣಿಯ ಮಾದರಿಗಳು ನೆರೆದವರನ್ನು ಚಕಿತಗೊಳಿಸಿದವು. ಟ್ಯೂಬ್‌ಲೈಟ್ ಜಂಪ್, ಕುದುರೆ ಜಿಗಿತ ಹಾಗೂ ಬೆಂಕಿ ಚಕ್ರದ ಜಿಗಿತದ ಕಸರತ್ತುಗಳು ನೋಡುಗರನ್ನು ನಿಬ್ಬೆರಗಾಗಿಸಿದವು.

ವಿವಿಧ ಇಲಾಖೆಗಳಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿಗಳಿಗೆ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದರು. ಪೊಲೀಸ್‌ ಬ್ಯಾಂಡ್‌ ತಂಡ ನುಡಿಸಿದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿತ್ತು.

ಮಕ್ಕಳ ಪಥಸಂಚಲನ‌ ‘ವಿಶೇಷ’

ಅಂಗವಿಕಲ ಮಕ್ಕಳ ಪಥಸಂಚಲನದಲ್ಲಿ ರಮಣ ಮಹರ್ಷಿ ಅಂಧರ ಶಾಲೆ ಪ್ರಥಮ ಬಹುಮಾನ ಪಡೆಯಿತು. ದ್ವಿತೀಯ ಬಹುಮಾನವನ್ನು ಸಮರ್ಥನಂ ಟ್ರಸ್ಟ್‌ನ ಅಂಗವಿಕಲ ಮಕ್ಕಳ ತಂಡ, ತೃತೀಯ ಬಹುಮಾನವನ್ನು ಹಂಸಧ್ವನಿ ಕಿವುಡ ಮತ್ತು ಮೂಗ ಮಕ್ಕಳ ಶಾಲಾ ತಂಡವು ಪಡೆಯಿತು.

ಪ್ರಶಸ್ತಿ ಪಡೆದ ತಂಡಗಳು

ಪರೇಡ್‌ನ ಪ್ರಥಮ ಪ್ರಶಸ್ತಿ ಮೇಜರ್‌ ಕೆ. ಅರವಿಂದ್‌ ನೇತೃತ್ವದ ಭಾರತೀಯ ಸೇನೆಗೆ ಲಭಿಸಿತು. ವಿಶೇಷ ಬಹುಮಾನ ಮೇಜರ್‌ ಪದ್ಮಾಕರ್‌ ನಾಗೇರೆಡ್ಡಿ ಅವರಿಗೆ ದೊರೆಯಿತು.

ಮೊದಲ ವಿಭಾಗದಲ್ಲಿ ಕ್ಯಾಪ್ಟನ್‌ ಎ.ಕಿರಣ್‌ ನೇತೃತ್ವದ ಸೇನಾ ಪಡೆಗೆ ಪ್ರಥಮ, ಸಬ್‌ಇನ್‌ಸ್ಪೆಕ್ಟರ್‌ ಆಶಿಶ್‌ ಕುಮಾರ್‌ ನೇತೃತ್ವದ ಬಿಎಸ್‌ಎಫ್‌ ತಂಡಕ್ಕೆ ದ್ವಿತೀಯ ಸ್ಥಾನ, ಎರಡನೇ ವಿಭಾಗದಲ್ಲಿ ಸಬ್‌ಇನ್‌ಸ್ಪೆಕ್ಟರ್‌ ರಾಘವೇಂದ್ರ ನೇತೃತ್ವದ ಅಬಕಾರಿ ತಂಡಕ್ಕೆ ಮೊದಲ ಹಾಗೂ ಮೇಜರ್‌ ಸಾಹು ನೇತೃತ್ವದ ಕೆಎಸ್‌ಎಸ್ಎ ತಂಡಕ್ಕೆ ಎರಡನೇ ಬಹುಮಾನ ದೊರಕಿತು.

ಮೂರನೇ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕೆ. ನೇಹಾ ನೇತೃತ್ವದ ಮಿತ್ರ ಅಕಾಡೆಮಿ ಗಳಿಸಿತು. ಫ್ಲಾರೆನ್ಸ್‌ ಪಬ್ಲಿಕ್‌ ಶಾಲೆಗೆ ಎರಡನೇ ಬಹುಮಾನ ಲಭಿಸಿತು. ನಾಲ್ಕನೇ ವಿಭಾಗದಲ್ಲಿ ಸಂಜನಾ ನೇತೃತ್ವದ ಬೆಂಗಳೂರು ಇಂಟರ್‌ನ್ಯಾಷನಲ್‌ ಅಕಾಡೆಮಿಗೆ ಪ್ರಥಮ ಹಾಗೂ ಲಿಲ್ಲಿ ರೋಸ್ ಬಾಯ್ಸ್‌ಗೆ ಎರಡನೇ ಬಹುಮಾನ ಲಭಿಸಿತು.

ವಾದ್ಯ ವಿಭಾಗದಲ್ಲಿ ಎಸ್‌ಎಆರ್‌ಎಸ್ ಲಿಟ್ಲ್‌ ಫ್ಲವರ್ ಶಾಲಾ ತಂಡಕ್ಕೆ ಪ್ರಥಮ ಹಾಗೂ ಹೋಲಿ ಪಬ್ಲಿಕ್‌ ಶಾಲೆ ಎರಡನೇ ಬಹುಮಾನ ಗಳಿಸಿತು. ‘ಪುಣ್ಯಭೂಮಿ ಭಾರತ’ ನೃತ್ಯರೂಪಕವನ್ನು ಪ್ರದರ್ಶಿಸಿದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪ್ರಥಮ ಬಹುಮಾನ ಪಡೆದರು.

ಲೋಕಾಯುಕ್ತ ಕಚೇರಿಯಲ್ಲಿ ಗಣರಾಜ್ಯೋತ್ಸವ

ಲೋಕಾಯುಕ್ತ ಕಚೇರಿ ಎದುರು ಗಣರಾಜ್ಯೋತ್ಸವ ಆಚರಿಸಲಾಯಿತು. ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಧ್ವಜಾರೋಹಣ ನೆರವೇರಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮಾತನಾಡಿ, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಅಗತ್ಯ ಇದೆ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದಕ್ಕೆ ಪ್ರತಿ ಪ್ರಜೆಯೂ ಕೈಜೋಡಿಸಬೇಕು ಎಂದರು. ಉಪಲೋಕಾಯುಕ್ತ ನ್ಯಾಯಮೂರ್ತಿ ಎನ್‌. ಆನಂದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry