ಕುತೂಹಲ ಕೆರಳಿಸಿದೆ ವಿಶೇಷ ಚಂದ್ರಗ್ರಹಣ!

7

ಕುತೂಹಲ ಕೆರಳಿಸಿದೆ ವಿಶೇಷ ಚಂದ್ರಗ್ರಹಣ!

Published:
Updated:
ಕುತೂಹಲ ಕೆರಳಿಸಿದೆ ವಿಶೇಷ ಚಂದ್ರಗ್ರಹಣ!

ಬೆಂಗಳೂರು: ಇದೇ 31ರಂದು ಘಟಿಸುವ ಚಂದ್ರಗ್ರಹಣ ಹಲವು ವಿಶೇಷಗಳಿಂದ ಕೂಡಿದ್ದು, ಖಗೋಳ ವಿಜ್ಞಾನ ಆಸಕ್ತರ ಕುತೂಹಲ ಕೆರಳಿಸಿದೆ.

ಚಂದ್ರಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲು ನಗರದ ಜವಾಹರಲಾಲ್‌ ನೆಹರೂ ತಾರಾಲಯ ಸಿದ್ಧತೆ ನಡೆಸಿದೆ.

ಗ್ರಹಣಗ್ರಸ್ತ ಚಂದ್ರೋದಯ: ‘ಗ್ರಹಣದ ದಿನ ಚಂದ್ರನ ಮೇಲೆ ಭೂಮಿಯ ಅರೆಛಾಯೆ, ಪಾರ್ಶ್ವಛಾಯೆ ಹಾಗೂ ಪೂರ್ಣಛಾಯೆ ಬೀಳುತ್ತದೆ. ಬೆಂಗಳೂರಿನಲ್ಲಿ ಜ.31ರಂದು ಸಂಜೆ 6.16ಕ್ಕೆ ಚಂದ್ರೋದಯ ಆಗುತ್ತದೆ. ಅಷ್ಟರಲ್ಲಿ ಗ್ರಹಣ ಆರಂಭವಾಗಿರುತ್ತದೆ. ಹಾಗಾಗಿ ಇಲ್ಲಿ ಗ್ರಹಣಗ್ರಸ್ತ ಚಂದ್ರ ಉದಯಿಸುತ್ತಾನೆ. ಸಂಜೆ 6.21ಕ್ಕೆ ಪೂರ್ಣ ಗ್ರಹಣ ಗೋಚರಿಸುತ್ತದೆ. ರಾತ್ರಿ 8.30ಕ್ಕೆ ಇದು ಪೂರ್ಣಗೊಳ್ಳುತ್ತದೆ. ತಾರಾಲಯದಲ್ಲಿ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದೇವೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬಹುದು’ ಎಂದು ತಾರಾಲಯದ ನಿರ್ದೇಶಕ ಪ್ರಮೋದ್‌ ಗಲಗಲಿ ತಿಳಿಸಿದರು.

ಸೂರ್ಯ ಗ್ರಹಣಕ್ಕಿಂತ ಚಂದ್ರ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸುವುದು ಸುಲಭ. ಗ್ರಹಣಗ್ರಸ್ತ ಸೂರ್ಯನನ್ನು ನೋಡುವಾಗ ಕಣ್ಣು ಅಥವಾ ಅಕ್ಷಿಪಟಲಕ್ಕೆ ತೊಂದರೆ ಆಗುವ ಅಪಾಯ ಹೆಚ್ಚಿರುತ್ತದೆ. ಬೈನಾಕ್ಯುಲರ್‌, ಟೆಲಿಸ್ಕೋಪ್‌ ಹಾಗೂ ಬರಿಗಣ್ಣಿನಿಂದಲೂ ಚಂದ್ರನನ್ನು ಯಾವುದೇ ಆತಂಕವಿಲ್ಲದೆ ವೀಕ್ಷಿಸಬಹುದು. ಉತ್ತಮ ಗುಣಮಟ್ಟದ ದೂರದರ್ಶಕವಿದ್ದರೆ ಅನೇಕ ಮಾಹಿತಿ ತಿಳಿಯಬಹುದು ಎಂದು ಹೇಳಿದರು.

ಬೆಳಕಿಲ್ಲದ ಸ್ಥಳ ಸೂಕ್ತ: ಚಂದ್ರಗ್ರಹಣ ನೋಡಲು ಬಯಸುವವರು ಬೆಳಕಿಲ್ಲದ ಹಾಗೂ ಎತ್ತರದ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಲಾಲ್‌ಬಾಗ್‌ನ ಕೆಂಪೇಗೌಡ ಗೋಪುರ ಇದಕ್ಕೆ ಸೂಕ್ತ ತಾಣ. ಚಂದ್ರ ಉದಯಿಸುವ ಭಾಗದಲ್ಲಿ ಗ್ರಹಣ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ ಎಂದು ಅವರು ಸಲಹೆ ನೀಡಿದರು.

ಗ್ರಹಣದ ವಿಶೇಷಗಳೇನು?

ಈ ಬಾರಿಯದು ‘ಪ್ರಕಾಶಮಾನ ರಕ್ತಚಂದ್ರ ಸಂಪೂರ್ಣ ಖಂಡಗ್ರಾಸ ಚಂದ್ರಗ್ರಹಣ’. ಈ ಸಂದರ್ಭದಲ್ಲಿ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಬಹಳ ಹತ್ತಿರ ಬರುತ್ತಾನೆ. ಇದಕ್ಕೆ ‘ಸೂಪರ್‌ ಮೂನ್‌’ ಎನ್ನುತ್ತಾರೆ. ಈ ವೇಳೆ ಚಂದಮಾಮ ಎಂದಿಗಿಂತ ದೊಡ್ಡ ಗಾತ್ರದಲ್ಲಿ ಕಾಣಿಸುತ್ತಾನೆ.

‘ಬ್ಲೂ ಮೂನ್‌’: ಒಂದೇ ತಿಂಗಳಲ್ಲಿ ಎರಡು ಬಾರಿ ಹುಣ್ಣಿಮೆ ಬರುವುದೂ ಅಪರೂಪ. ಇದಕ್ಕೆ ಬ್ಲೂಮೂನ್‌ ಎನ್ನುತ್ತಾರೆ. ಈ ತಿಂಗಳ 2ರಂದು ಹುಣ್ಣಿಮೆ ಇತ್ತು. 31ಕ್ಕೆ ಮತ್ತೊಮ್ಮೆ ಹುಣ್ಣಿಮೆ ಬಂದಿದೆ.

‘ರಕ್ತಚಂದ್ರ’: ಭೂಮಿಯ ಮೇಲೆ ವಾತಾವರಣ ಇರುವುದರಿಂದ ಬೆಳಕಿನ ಚದುರುವಿಕೆಯಿಂದ, ಗ್ರಹಣ ಕಾಲದಲ್ಲಿ ಚಂದ್ರ ತಾಮ್ರ ವರ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಹಾಗಾಗಿಯೇ ಅಂದಿನ ಚಂದಿರನನ್ನು ‘ರಕ್ತಚಂದ್ರ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ ಎಂದು ಪ್ರಮೋದ್‌ ಗಲಗಲಿ ವಿವರಿಸಿದರು.

ಚಂದ್ರಗ್ರಹಣ‌

ಆರಂಭ: ಸಂಜೆ 5. 20ಕ್ಕೆ

ಬೆಂಗಳೂರಿನಲ್ಲಿ ಪೂರ್ಣಗ್ರಹಣ ಕಾಣಿಸುವುದು: ಸಂಜೆ 6.21ಕ್ಕೆ

ಸಂಪನ್ನಗೊಳ್ಳುವುದು: ರಾತ್ರಿ 8.30ಕ್ಕೆ

ಇಂತಹ ಚಂದ್ರಗ್ರಹಣ ಇನ್ನೆಂದು?

2028ರಲ್ಲಿ ಹಾಗೂ 2037ರಲ್ಲಿ ಇದೇ ತೆರನಾದ ಚಂದ್ರಗ್ರಹಣ ಘಟಿಸುತ್ತದೆ

ಅಂಕಿ ಅಂಶ

* 150– ವರ್ಷಗಳ ನಂತರ ಸಂಭವಿಸುತ್ತಿರುವ ಸಂಪೂರ್ಣ ಚಂದ್ರಗ್ರಹಣವಿದು.

* 3 ಗಂಟೆ 10 ನಿಮಿಷ ಗ್ರಹಣ ಇರುತ್ತದೆ.

* 2 ಗಂಟೆ 14 ನಿಮಿಷ ನಗರದಲ್ಲಿ ಗ್ರಹಣವನ್ನು ವೀಕ್ಷಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry