ಕೆಟ್ಟ ಮೇಷ್ಟ್ರಾಗಿದ್ದ ಲಂಕೇಶ ಕನ್ನಡಕ್ಕೇ ಆಸ್ತಿಯಾದ

6
ಗೆಳೆಯನ ಜೊತೆಗಿನ ಒಡನಾಟ ಮೆಲುಕು ಹಾಕಿದ ಕವಿ ನಿಸಾರ್‌

ಕೆಟ್ಟ ಮೇಷ್ಟ್ರಾಗಿದ್ದ ಲಂಕೇಶ ಕನ್ನಡಕ್ಕೇ ಆಸ್ತಿಯಾದ

Published:
Updated:
ಕೆಟ್ಟ ಮೇಷ್ಟ್ರಾಗಿದ್ದ ಲಂಕೇಶ ಕನ್ನಡಕ್ಕೇ ಆಸ್ತಿಯಾದ

ಬೆಂಗಳೂರು: ‘ನಾನು ಕನ್ನಡದ ಬರ್ನಾಡ್‌ ಷಾ ಎಂದು ಲಂಕೇಶ ಹೇಳಿಕೊಳ್ಳುತ್ತಿದ್ದ. ಬೇರೆಯವರು ಪ್ರಸಿದ್ಧಿ ಪಡೆಯುತ್ತಿದ್ದಾರೆ ಎಂದು ತಿಳಿದರೆ ಕರುಬುತ್ತಿದ್ದ. ಆದರೆ, ಎಲ್ಲ ವೈರುಧ್ಯಗಳನ್ನು ಮೀರಿ ಕನ್ನಡ ಸಾಹಿತ್ಯಕ್ಕೆ ಆಸ್ತಿಯಾದ’ ಎಂದು ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಅನಿಸಿಕೆ ವ್ಯಕ್ತಪಡಿಸಿದರು. 

ಸಪ್ನ ಬುಕ್‌ ಹೌಸ್‌ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಓದುಗರೊಡನೆ ಒಂದಷ್ಟು ಸಮಯ’ ಸಂವಾದದಲ್ಲಿ ಮಾತನಾಡಿದರು.

ಒಡನಾಟ, ವಿಚಾರ, ಘಟನೆಗಳ ಕುರಿತು ನಡೆದ ಈ ಸ್ವಾರಸ್ಯಕರ ಸಂವಾದದಲ್ಲಿ ಸಿನಿಮಾ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್‌, ಕವಿ ಡಾ. ಸಿದ್ಧಲಿಂಗಯ್ಯ, ಪತ್ರಕರ್ತ ವಿಶ್ವೇಶ್ವರ ಭಟ್‌, ಲೇಖಕ ಜೋಗಿ ಅವರು ನಿಸಾರ್‌ಗೆ ಜತೆಯಾದರು. ಓದುಗರು ಪ್ರೀತಿಯಿಂದ ಅನೇಕ ಪ್ರಶ್ನೆಗಳನ್ನು ಕೇಳಿದರು.

‘ಲಂಕೇಶ ಒಬ್ಬ ಕೆಟ್ಟ ಮೇಷ್ಟ್ರು. ವೇದಿಕೆಯಲ್ಲಿ ಮಾತನಾಡುವಾಗ ತೊದಲುತ್ತಿದ್ದ. ನಾನು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದ. ಆದರೆ, ಅಷ್ಟೇ ಹೃದಯವಂತ. ಉಡಾಳನಾಗಿದ್ದ ಅಣ್ಣ ಆಸ್ತಿಯನ್ನೆಲ್ಲ ಮಾರಿಕೊಂಡು ಕೈ ಬರಿದು ಮಾಡಿಕೊಂಡಾಗ ಎರಡು ಮನೆಗಳನ್ನು ಅವರಿಗೆ ಬಿಟ್ಟುಕೊಟ್ಟಿದ್ದ’ ಎಂದು ನಿಸಾರ್‌, ಗೆಳೆಯನ ಕೆಟ್ಟ ಹಾಗೂ ಒಳ್ಳೆಯ ಗುಣಗಳೆರಡನ್ನೂ ವಿಶ್ಲೇಷಿಸಿದರು.

ವಯಸ್ಸಾಗುತ್ತಿದ್ದಂತೆಯೇ ಕವಿಗಳಿಗೆ ಶಕ್ತಿ ಕುಂದುತ್ತದೆಯೇ ಎಂಬ ಪ್ರಶ್ನೆಗೆ, ‘ಇಲ್ಲ, ಈಗಲೂ ಹುಮ್ಮಸ್ಸು, ಬರೆಯುವ ಸಂಕಲ್ಪ ಇದೆ. ಮೊದಲೆಲ್ಲ ಚಂದದ ಹುಡುಗಿಯರನ್ನು ಕಂಡರೆ ಕವಿತೆ ಬರೆಯಬೇಕು ಅನಿಸುತ್ತಿತ್ತು. ಇಳಿವಯಸ್ಸಿನಲ್ಲಿ ಹಾಗೆ ಮಾಡಲು‍ ಪಾಪಪ್ರಜ್ಞೆ ಕಾಡುತ್ತದೆ’ ಎಂದು ಉತ್ತರಿಸಿದರು.

ನಾಗತಿಹಳ್ಳಿ ಚಂದ್ರಶೇಖರ, ‘ಸಿನಿಮಾ ನಿರ್ದೇಶಕನಾಗಿ ನನ್ನ 35 ವರ್ಷಗಳ ಪಯಣವನ್ನು ದಾಖಲಿಸುವ ಯೋಚನೆ ಇದೆ. ಚಿತ್ರಗಳು, ಸಹೋದ್ಯೋಗಿಗಳು, ಸಾಮಾಜಿಕ ಸಂದರ್ಭ, ಪ್ರೇಕ್ಷಕರ ಬಗ್ಗೆ ಬರೆಯಬೇಕು ಅಂದುಕೊಂಡಿದ್ದೇನೆ’ ಎಂದು ತಿಳಿಸಿದರು.

‘ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ... ತರಹದ ಕವಿತೆಯನ್ನು ಮತ್ತೆ ಯಾವಾಗ ಬರೆಯುತ್ತೀರಿ’ ಎಂಬ ನಾಗತಿಹಳ್ಳಿ ಅವರ ಪ್ರಶ್ನೆಗೆ ಸಿದ್ಧಲಿಂಗಯ್ಯ ತಮಾಷೆಯಾಗಿಯೇ ಉತ್ತರಿಸಿದರು. ‘ಬರೆಯುವ ಆಸೆಯಂತೂ ಈಗಲೂ ಇದೆ. ಆದರೆ, ಮನೆಗೆ ಹೋಗುವ ಧೈರ್ಯ ಇಲ್ಲ’ ಎಂದು ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

*

ವರನಟ ರಾಜ್‌ಕುಮಾರ್‌ ಅವರಿಗೆ ನಾನೆಂದರೆ ಬಲು ಪ್ರೀತಿ. ಊಟ ಮಾಡಲು ಮನೆಗೆ ಬಂದರೆ, ಬಾಡೂಟ ತಾನೇ ಎನ್ನುತ್ತಿದ್ದರು. ಸಾಬರ ಮನೆಯಲ್ಲಿ ಇನ್ನೇನು ಇರುತ್ತದೆ ಎನ್ನುತ್ತಿದ್ದೆ.

–ಕೆ.ಎಸ್‌. ನಿಸಾರ್‌ ಅಹಮದ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry