ವಾಣಿಜ್ಯ ಸಂಕೀರ್ಣ: 2 ಕಂಪನಿಗಳಿಂದ ಅರ್ಜಿ

7
ಖಾಸಗಿ ಸಹಭಾಗಿತ್ವದಡಿ ಇಂದಿರಾ ನಗರದಲ್ಲಿ ನಿರ್ಮಿಸಲು ಬಿಡಿಎ ಯೋಜನೆ

ವಾಣಿಜ್ಯ ಸಂಕೀರ್ಣ: 2 ಕಂಪನಿಗಳಿಂದ ಅರ್ಜಿ

Published:
Updated:

ಬೆಂಗಳೂರು: ಇಂದಿರಾ ನಗರದಲ್ಲಿ ವಾಣಿಜ್ಯ ಸಂಕೀರ್ಣವನ್ನು ಅಂದಾಜು ₹657 ಕೋಟಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಡಿ (ಪಿಪಿಪಿ ಮಾದರಿ) ನಿರ್ಮಿಸುವ ಬಿಡಿಎ ಯೋಜನೆಗೆ ಎರಡು ಕಂಪನಿಗಳು ಟೆಂಡರ್‌ ಸಲ್ಲಿಸಿವೆ.

ಮೇವರಿಕ್‌ ಹೋಲ್ಡಿಂಗ್ಸ್‌ ಮತ್ತು ಇನ್ವೆಸ್ಟ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಎಂಬೆಸಿ ಗ್ರೂಪ್‌ಗಳ ಜಂಟಿ ಹೂಡಿಕೆಗಳು, ಎಂಎಫ್‌ಎಆರ್‌ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಬಿಡ್‌ ಸ್ವೀಕೃತವಾಗಿವೆ. ಈ ಕಂಪನಿಗಳ ಹಣಕಾಸು ಬಿಡ್‌ಗಳನ್ನು ತೆರೆಯಲಾಗಿದ್ದು, ಬಿಡ್‌ಗಳ ಮೌಲ್ಯಮಾಪನ ನಡೆಸಲಾಗುತ್ತಿದೆ ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಉದ್ದೇಶಿತ ಕಾಮಗಾರಿಗೆ 2015ರ ಮಾರ್ಚ್‌ 24ರಂದು ಮೊದಲ ಬಾರಿಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಬಿಲ್ಡರ್‌ಗಳು ಪ್ರದೇಶದ ಹಂಚಿಕೆ ಹೇಳಿಕೆ ಸಲ್ಲಿಸದ ಕಾರಣಕ್ಕೆ ಟೆಂಡರ್‌ ರದ್ದಾಗಿತ್ತು. 2016ರ ಜನವರಿ 1ರಂದು ಎರಡನೇ ಬಾರಿಗೆ ಟೆಂಡರ್‌ ಆಹ್ವಾನಿಸಿದಾಗ ಒಂದೇ ಕಂಪನಿ ಭಾಗವಹಿಸಿತ್ತು. ಹಾಗಾಗಿ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

1980ರಲ್ಲಿ ಬಿಡಿಎ ಇಂದಿರಾ ನಗರದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿತ್ತು. 6 ಎಕರೆ 3 ಗುಂಟೆಯಲ್ಲಿ 3 ಬ್ಲಾಕ್‌ಗಳ ಸಂಕೀರ್ಣವಿದ್ದು, 1.34 ಲಕ್ಷ ಚದರ ಮೀಟರ್‌ ನಿರ್ಮಿತ ಪ್ರದೇಶ ಹೊಂದಿದೆ. ಇದರಲ್ಲಿ 165 ಬಾಡಿಗೆದಾರರು ಇದ್ದಾರೆ. ವಾರ್ಷಿಕ ₹ 2 ಕೋಟಿ ವರಮಾನ ಬರುತ್ತಿದೆ. ಇದು ಸಂಕೀರ್ಣದ ನಿರ್ವಹಣಾ ವೆಚ್ಚ ಭರಿಸುವುದಕ್ಕೂ ಸಾಕಾಗುತ್ತಿರಲಿಲ್ಲ. ವರಮಾನ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಿಡಿಎ ಹಳೆಯ ಕಟ್ಟಡವನ್ನು ಕೆಡವಿ, ದೊಡ್ಡ ಸಂಕೀರ್ಣ ನಿರ್ಮಿಸಲು ಮುಂದಾಗಿದೆ.

ಅಂಕಿ–ಅಂಶ

* 14.95 ಲಕ್ಷ ಚದರ ಅಡಿ ಇಂದಿರಾ ನಗರ ವಾಣಿಜ್ಯ ಸಂಕೀರ್ಣದ ನಿರ್ಮಾಣ ಪ್ರದೇಶದ ವಿಸ್ತೀರ್ಣ

* ₹657 ಕೋಟಿ ವಾಣಿಜ್ಯ ಸಂಕೀರ್ಣದ ಅಂದಾಜು ವೆಚ್ಚ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry