ಪೆಟ್ರೋಲ್, ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ?

7

ಪೆಟ್ರೋಲ್, ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ?

Published:
Updated:

ಬೆಂಗಳೂರು: ಮಾಲೂರಿನ ದೇವನಗುಂದಿಯ ತೈಲ ಹಾಗೂ ಅಡುಗೆ ಅನಿಲ ದಾಸ್ತಾನು ಘಟಕದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಹದಗೆಟ್ಟಿದ್ದು, ದುರಸ್ತಿಗೆ ಒತ್ತಾಯಿಸಿ ತೈಲ ಪೂರೈಕೆ ಟ್ಯಾಂಕರ್‌ ಚಾಲಕರು ಹಾಗೂ ಸಹಾಯಕರು ಇಂದಿನಿಂದ (ಜ. 27) ಪ್ರತಿಭಟನೆ ಆರಂಭಿಸಲಿದ್ದಾರೆ. ಇದರಿಂದಾಗಿ ತೈಲ ಹಾಗೂ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (ಬಿಪಿಸಿ), ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ನ (ಎಚ್‌ಪಿಸಿ) ಹಾಗೂ ಅಡುಗೆ ಅನಿಲದ ದಾಸ್ತಾನು ಘಟಕಗಳು ದೇವನಗುಂದಿಯಲ್ಲಿವೆ. ಅಲ್ಲಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ 8 ಕಿ.ಮೀ ರಸ್ತೆಯಲ್ಲಿ ತಗ್ಗುಗಳೇ ಹೆಚ್ಚಿವೆ. ಇಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಚಾಲಕರು ಹಾಗೂ ಸಹಾಯಕರು ಜೀವಭಯದಲ್ಲಿ ಓಡಾಡುವ ಸ್ಥಿತಿ ಇದೆ.

‘ನಡೆದುಕೊಂಡು ಹೋಗದಷ್ಟು ರಸ್ತೆಯು ಹದಗೆಟ್ಟಿದೆ. ಇದರ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದ್ದೆವು. ಪ್ರತಿ ಬಾರಿಯೂ ಅಧಿಕಾರಿಗಳು ಭರವಸೆಯನ್ನಷ್ಟೇ ನೀಡಿದ್ದು, ಅದನ್ನು ಈಡೇರಿಸಿಲ್ಲ’ ಎಂದು ತೈಲ ಪೂರೈಕೆ ಟ್ಯಾಂಕರ್‌ಗಳ ಚಾಲಕರ ಸಂಘದ ಅಧ್ಯಕ್ಷ ಶ್ರೀರಾಮ್ ದೂರಿದರು.

‘ಘಟಕದಿಂದ ನಿತ್ಯವೂ 800 ಟ್ಯಾಂಕರ್‌ಗಳಲ್ಲಿ ತೈಲ ಹಾಗೂ ಅಡುಗೆ ಅನಿಲ ನಗರಕ್ಕೆ ಪೂರೈಕೆ ಆಗುತ್ತದೆ. ಟ್ಯಾಂಕರ್‌ಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟನೆ ನಡೆಸಲಿದ್ದೇವೆ. ಇದರಿಂದಾಗಿ ಜನರಿಗೆ ತೈಲ ಹಾಗೂ ಅಡುಗೆ ಅನಿಲ ಸಿಗದ ಸ್ಥಿತಿಯೂ ಬರಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry