ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಉದ್ಯಾನ ಹಸ್ತಾಂತರಕ್ಕೆ ವಿರೋಧ

Last Updated 26 ಜನವರಿ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಬಾರದು ಎಂದು ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿಯು ಒತ್ತಾಯಿಸಿದೆ.

ನಗರದಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ‘ಉದ್ಯಾನವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಬಿಬಿಎಂಪಿ ಅಧೀನದಲ್ಲಿರುವ ಉದ್ಯಾನದ 22 ಎಕರೆ ಪ್ರದೇಶವನ್ನು ತನ್ನ ಅಧೀನಕ್ಕೆ ಬಿಟ್ಟುಕೊಡುವಂತೆಯೂ ಅದು ಕೋರಿದೆ. ಅದಕ್ಕೆ ಅವಕಾಶ ಮಾಡಿಕೊಟ್ಟರೆ ಪ್ರತಿಭಟನೆ ನಡೆಸಲು ಜಾಗವೇ ಇಲ್ಲದಂತಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಮಿತಿಯ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ‘ಪ್ರವಾಸಿ ತಾಣದ ನೆಪದಲ್ಲಿ ಉದ್ಯಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಹುನ್ನಾರವಿದೆ. ಅದೇ ಕಾರಣಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಆರೋಪಿಸಿದರು.

ಪ್ರತಿಭಟನೆಗಾಗಿ ಉದ್ಯಾನದ ಐದು ಎಕರೆ ಭೂಮಿ ಮೀಸಲಿಡಲಾಗಿತ್ತು. ಈ ಪೈಕಿ ಮೂರು ಎಕರೆ ಜಾಗದಲ್ಲಿ ವಾಹನಗಳ ನಿಲುಗಡೆಗೆ ಕಟ್ಟಡ ನಿರ್ಮಿಸಲಾಗುತ್ತಿದೆ. ಉಳಿದಿರುವ ಎರಡು ಎಕರೆಯನ್ನು ಕಬಳಿಸುವ ಯತ್ನ ನಡೆಯುತ್ತಿದೆ ಎಂದರು.

ವಸ್ತುಪ್ರದರ್ಶನ, ಸಭಾ ಭವನ ಸೇರಿದಂತೆ ಅನೇಕ ಚಟುವಟಿಕೆಗಳು ಉದ್ಯಾನದಲ್ಲಿ ನಡೆಯುವುದರಿಂದ ಬಿಬಿಎಂಪಿಗೆ ವಾರ್ಷಿಕವಾಗಿ ₹1 ಕೋಟಿಗೂ ಅಧಿಕ ಆದಾಯವಿದೆ. ಹೀಗಾಗಿ, ಉದ್ಯಾನ ಹಸ್ತಾಂತರ ಮಾಡಬಾರದು ಎಂದು ಒತ್ತಾಯಿಸಿದರು.

‘ಇದೇ 27ರಂದು ನಡೆಯಲಿರುವ ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಉದ್ಯಾನ ಹಸ್ತಾಂತರ ಸಂಬಂಧ ಚರ್ಚೆಯಾಗಲಿದೆ. ಹಸ್ತಾಂತರ ಮಾಡುವುದಕ್ಕೆ ಸಭೆಯಲ್ಲಿ ಒಪ್ಪಿಗೆ ಸಿಕ್ಕರೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT