ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿಗೆ ವಿದ್ಯುತ್‌ ತಂತಿ ಅಡ್ಡಿ

Last Updated 26 ಜನವರಿ 2018, 20:23 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ– 7ಕ್ಕೆ (ಬಳ್ಳಾರಿ ರಸ್ತೆ) ಪರ್ಯಾಯವಾಗಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಗೆ 120 ಕೆ.ವಿ ಸಾಮರ್ಥ್ಯದ ವಿದ್ಯುತ್‌ ತಂತಿ ಅಡ್ಡಿಯಾಗಿದೆ.

ಹೆಣ್ಣೂರು ವೃತ್ತದಿಂದ ಬಾಗಲೂರು, ಬೇಗೂರು, ಮೈಲನಹಳ್ಳಿ ಮಾರ್ಗವಾಗಿ (20.63 ಕಿ.ಮೀ) ನಿಲ್ದಾಣದ ಆಗ್ನೇಯ ದ್ವಾರಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಮೈಲನಹಳ್ಳಿವರೆಗೆ ಉತ್ತಮ ರಸ್ತೆ ಇದ್ದು, ನಿಲ್ದಾಣದ ಆವರಣದವರೆಗೆ 2 ಕಿ.ಮೀ ಡಾಂಬರು ರಸ್ತೆ ನಿರ್ಮಿಸುವ ಕೆಲಸ ನಡೆಯುತ್ತಿದೆ. ಅದರಲ್ಲಿ 400 ಮೀಟರ್‌ ಮಣ್ಣಿನ ರಸ್ತೆಯನ್ನು ಡಾಂಬರು ರಸ್ತೆಯನ್ನಾಗಿ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ.

ನಿಲ್ದಾಣದ ಆವರಣದ ನೆಲದಾಳದಲ್ಲೇ ವಿದ್ಯುತ್‌ ತಂತಿ ಇದೆ. ನಿಲ್ದಾಣಕ್ಕೆ ಅದರಿಂದಲೇ ವಿದ್ಯುತ್‌ ಪೂರೈಕೆ ಆಗುತ್ತಿದೆ. ಈ ತಂತಿಯ ಮೇಲೆಯೇ ರಸ್ತೆ ನಿರ್ಮಿಸಬೇಕಿದ್ದು, ಅದನ್ನು ಇದುವರೆಗೂ ಸ್ಥಳಾಂತರಿಸದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರು (ಕೆಪಿಟಿಸಿಎಲ್‌) ಈ ತಂತಿಯನ್ನು ಸ್ಥಳಾಂತರಿಸಬೇಕು. ಆ ಬಗ್ಗೆ ಅಲ್ಲಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಈ ತಂತಿ ಸ್ಥಳಾಂತರಿಸಿದರೆ, ನಮ್ಮ ಕಾಮಗಾರಿ ಪೂರ್ಣಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ ತಿಳಿಸಿದರು.

ಕೆಪಿಟಿಸಿಎಲ್‌ ಮುಖ್ಯ ಎಂಜಿನಿಯರ್‌ ಬಿ.ಆರ್‌.ಚಂದ್ರಶೇಖರ್‌, ‘ತಂತಿ ಸ್ಥಳಾಂತರಿಸಲು ರಸ್ತೆಯ ಪಕ್ಕದಲ್ಲಿ ಪರ್ಯಾಯ ಜಾಗ ಬೇಕಿದೆ. ಅಲ್ಲಿ ಜಮೀನುಗಳಿದ್ದು, ಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

‘ಭೂಸ್ವಾಧೀನ ಪ್ರಕ್ರಿಯೆಗೆ ಒಪ್ಪಿಗೆ ಸಿಕ್ಕಿದೆ. ಪ್ರಕ್ರಿಯೆ ಆರಂಭಿಸಿ ಫಲಾನುಭವಿಗಳಿಗೆ ಪರಿಹಾರ ನೀಡಿದ ಬಳಿಕವೇ ತಂತಿ ಸ್ಥಳಾಂತರಿಸುವ ಕೆಲಸ ಆರಂಭಿಸಲಿದ್ದೇವೆ’ ಎಂದರು.

ವಿಮಾನ ನಿಲ್ದಾಣದ ಕಾರ್ಯಾಚರಣೆ ಅಧ್ಯಕ್ಷ ಹರಿ ಮರಾರ್, ‘ಮೊದಲು ಕಾಮಗಾರಿ ಪೂರ್ಣಗೊಳಿಸಲಿ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಯಾವಾಗ ಸೂಚನೆ ನೀಡುತ್ತಾರೋ ಆಗ ನಿಲ್ದಾಣದ ಆಗ್ನೇಯ ದ್ವಾರ ಬಾಗಿಲು ತೆರೆಯಲು ನಾವು ಸಿದ್ಧ’ ಎಂದರು.

ಮುಖ್ಯಮಂತ್ರಿ ಗಡುವು ನೀಡಿ ಒಂದು ವರ್ಷ: ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ 2017ರ ಫೆಬ್ರುವರಿಯಲ್ಲೇ ಗಡುವು ನೀಡಿದ್ದರು. ಅದಾಗಿ ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ವಿಧಾನಸಭೆ ಚುನಾವಣೆ ದಿನಾಂಕವು ಕೆಲವೇ ತಿಂಗಳುಗಳಲ್ಲಿ ಘೋಷಣೆಯಾಗಲಿದೆ. ನೀತಿಸಂಹಿತೆ ಜಾರಿಯಾಗುವ ಮುನ್ನವೇ ರಸ್ತೆಯನ್ನು ವಾಹನಗಳ ಓಡಾಟಕ್ಕೆ ಮುಕ್ತಗೊಳಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಆಸಕ್ತಿ ತೋರಿಸಿದ್ದಾರೆ. ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT