ಸಚಿವರ ಮನೆ ಮುತ್ತಿಗೆಗೆ ನಿರ್ಧಾರ

7
ದಲಿತರ ಹಿತಕ್ಕೆ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಒತ್ತಾಯ

ಸಚಿವರ ಮನೆ ಮುತ್ತಿಗೆಗೆ ನಿರ್ಧಾರ

Published:
Updated:

ಬೆಂಗಳೂರು: ‘ಎ.ಜೆ.ಸದಾಶಿವ ಆಯೋಗದ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ದಲಿತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿ ಸಚಿವರ ಮನೆಗಳಿಗೆ ಇದೇ 29ರಂದು ಮುತ್ತಿಗೆ ಹಾಕುತ್ತೇವೆ’ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯಕ್‌ ತಿಳಿಸಿದರು.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಈ ವರದಿಯ ಬಗ್ಗೆ ಸಾರ್ವಜನಿಕರ ಚರ್ಚೆಗೆ ಅವಕಾಶ ಕಲ್ಪಿಸದೆ, ಕೇಂದ್ರ ಸರ್ಕಾರಕ್ಕೆ ತರಾತುರಿಯಲ್ಲಿ ಶಿಫಾರಸು ಮಾಡಲು ಮುಂದಾಗಿದೆ. ಈ ಬಗ್ಗೆ ಎಲ್ಲ ಸಚಿವರು ಸಂಪುಟ ಸಭೆಯಲ್ಲಿ ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.

‘ಆಯೋಗವು ಪರಿಶಿಷ್ಟ ಜಾತಿಯಲ್ಲಿನ ಒಂದು ಉಪಜಾತಿಯ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಬಗ್ಗೆ ಸಾರ್ವಜನಿಕವಾಗಿ ಈವರೆಗೆ ಚರ್ಚೆ ನಡೆದಿಲ್ಲ. ರಾಜಕೀಯ ಹಿತಾಸಕ್ತಿಗಳ ಪ್ರಚೋದನೆಯಿಂದಾಗಿ ದಲಿತ ಸಮುದಾಯದ ಮಾದಿಗ, ಛಲವಾದಿ, ಲಂಬಾಣಿ, ಭೋವಿ, ಕೊರಚ, ಕೊರಮ, ದೊಂಬಿದಾಸ, ಬುಡಗ ಜಂಗಮ, ಸಿಳ್ಳೆಕ್ಯಾತ ಹಾಗೂ ಅಲೆಮಾರಿ ಸಮುದಾಯಗಳ ನಡುವೆ ವಿಷಬೀಜ ಬಿತ್ತಲಾಗುತ್ತಿದೆ’  ಎಂದು ದೂರಿದರು.

ಆಯೋಗವು ದಲಿತ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ವಸ್ತುನಿಷ್ಠ ಸಮೀಕ್ಷೆ ನಡೆಸಬೇಕಿತ್ತು. ಆದರೆ, ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಸಭೆಗಳನ್ನು ನಡೆಸಿ, ಪಟ್ಟಭದ್ರ ಹಿತಾಸಕ್ತಿಗಳ ಅಭಿಪ್ರಾಯ ಪಡೆಯಲಾಗಿದೆ. ಪರಿಶಿಷ್ಟ ಜಾತಿಯ 101 ಜಾತಿಗಳ ನಾಯಕರನ್ನು ಕಡೆಗಣಿಸಿ ನೀಡಿರುವ ಈ ವರದಿಯು ಅವೈಜ್ಞಾನಿಕ ಹಾಗೂ ಏಕರೂಪವಾಗಿದೆ ಎಂದರು.

‘ಈ ವರದಿಯ ಬಗ್ಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶನಿವಾರ (ಇದೇ 27) ಭೇಟಿಯಾಗಿ ಚರ್ಚಿಸುತ್ತೇವೆ. ಅವರು ನಮ್ಮ ಪರ ನಿಲುವು ಹೊಂದದಿದ್ದರೆ, ಫೆಬ್ರುವರಿ 1ರಂದು ಶಿಕಾರಿಪುರ ಚಲೋ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ವರದಿಯ ಬಗ್ಗೆ ಚರ್ಚೆ ನಡೆಯಲಿ’

‘ಸದಾಶಿವ ಆಯೋಗದ ವರದಿಯ ಬಗ್ಗೆ ಸಾರ್ವಜನಿಕರು ಹಾಗೂ ತಜ್ಞರ ಚರ್ಚೆಗೆ ಅವಕಾಶ ಕಲ್ಪಿಸಿ, ಅವರಿಂದ ಅಹವಾಲು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಬೇಕು. ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ ಬಳಿಕವಷ್ಟೇ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡುತ್ತಿರುವ ಮೀಸಲಾತಿಯ ಮಿತಿಯನ್ನು ಶೇ 50ರಿಂದ 75ಕ್ಕೆ ಏರಿಸಬೇಕು’ ಎಂದು ಒಕ್ಕೂಟದ ಉಪಾಧ್ಯಕ್ಷ ಜಿ.ಮಾದೇಶ್‌ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry