ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಿಯಲ್ಲಿ ಅನಾವರಣಗೊಂಡ ‘ಫಲಪುಷ್ಪ ಪ್ರದರ್ಶನ’

Last Updated 27 ಜನವರಿ 2018, 6:29 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಪಂಚಾಯಿತಿ ಹಾಗೂ ಸಿರಿ ತೋಟಗಾರಿಕೆ ಇಲಾಖೆ ವತಿಯಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಶುಕ್ರವಾರ ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು, ಸಿರಿ ತೋಟಗಾರಿಕೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಅತ್ಯಂತ ಉತ್ತಮವಾಗಿ ಮೂಡಿಬಂದಿದೆ. ಸಾರ್ವಜನಿಕರು ಮೆಚ್ಚುವಂತೆ ವಿಭಿನ್ನ ಹೂಗಳಿಂದ ಕ್ಲಾಕ್‌ಟವರ್‌ ಸೇರಿ ವಿವಿಧ ಆಕೃತಿಗಳನ್ನು ಹೂವುಗಳಿಂದ ಸಿಂಗರಿಸಿದ್ದಾರೆ. ಈ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಸ್ವಚ್ಛ ಭಾರತ ಅಭಿಯಾನದ ‘ಪ್ಲಾಸ್ಟಿಕ್‌ಗೆ ಗೇಟ್‌ ಪಾಸ್‌’ ಎಂಬ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದರು. ಜೇನಿನ ವಿವಿಧ ತಳಿಗಳು, ಆಹಾರ ಮೇಳ, ಜೇನು ಔಷಧಿಯ ಗುಣಗಳ ಬಗ್ಗೆ ಮಾಹಿತಿ, ಆಕರ್ಷಕ ತರಕಾರಿ ಕೆತ್ತನೆಗಳು, ನರ್ಸರಿ, ವಿವಿಧ ಔಷಧೀಯ ಗಿಡಗಳ ಪ್ರದರ್ಶನ ಹಾಗೂ ಮಳಿಗೆಗಳು ಪ್ರದರ್ಶನದಲ್ಲಿದ್ದವು.

ಕಾರ್ಯಕ್ರಮದಲ್ಲಿ ಸಚಿವ ಯು.ಟಿ ಖಾದರ್‌, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿಸೋಜ, ಶಾಸಕ ಜೆ.ಆರ್‌ ಲೋಬೊ, ಮೇಯರ್‌ ಕವಿತಾ ಸನಿಲ್‌, ಕಸ್ತೂರಿ ಪಂಜ, ಡಾ. ಎಂ ಆರ್‌ ರವಿ ಉಪಸ್ಥಿತರಿದ್ದರು.

ಗಮನ ಸೆಳೆದ 150 ಕೆ.ಜಿ ಹೂವಿನ ಕ್ಲಾಕ್‌ ಟವರ್‌

1968ರಲ್ಲಿ ಗಡಿಯಾರ ತಯಾರಕರಾದ ವಾಮನ ನಾಯಕ್‌ ಆಂಡ್‌ ಸನ್ಸ್‌ ಸ್ಥಾಪಕರಾದ ಎಂ.ವಾಮನ್‌ ನಾಯಕ್‌ ಅವರು ಈಗಿನ ಪುರಭವನದ ಮುಂದೆ ಜಂಬಿಟ್ಟಿಗೆಯಿಂದ ನಿರ್ಮಿಸಲಾದ ಸುಮಾರು 42 ಅಡಿ ಉದ್ದದ ಕ್ಲಾಕ್‌ ಟವರನ್ನು ನಿರ್ಮಿಸಿದರು. 1994ರ ವೇಳೆಗೆ ರಸ್ತೆ ಅಗಲೀಕರಣದ ವೇಳೆ ಈ ಕ್ಲಾಕ್‌ ಟವರನ್ನು ಕೆಡವಲಾಯಿತು. ಇದರ ಸವಿ ನೆನಪಿಗಾಗಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಪುಷ್ಪಗಳಿಂದಲೇ ಇದನ್ನು ನಿರ್ಮಿಸಲಾಗಿದೆ.

14 ಅಡಿ ಎತ್ತರ ಹಾಗೂ 5 ಅಡಿ ಅಗಲವಿರುವ ಸುಮಾರು 150 ಕೆ.ಜಿಯ ಕಾರ್ನೇಶನ್‌ ಹಾಗೂ ಗುಲಾಬಿ ಹೂವುಗಳಿಂದ ಅಲಂಕಾರಗೊಳಿಸಲಾಗಿದೆ. ಇದರ ಜೊತೆಗೆ ಸಾಲ್ವಿಯಾ, ಪೆಟುನಿಯಸ್‌, ಮ್ಯಾನ್‌ ಗೋಲ್ಡ್‌, ಸೇವಂತಿಗೆ, ಸೂರ್ಯಕಾಂತಿ, ಪಿಂಕ್ಸ್‌ ಸೇರಿದಂತೆ ವಿವಿಧ ತೆರನಾದ ಹೂವುಗಳು ಎಲ್ಲರ ಗಮನ ಸೆಳೆಯಿತು.

ಸೆಲ್ಫಿ ಕ್ರೇಜ್‌
ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ನಿರ್ಮಿತವಾದ ವಿವಿಧ ಆಕೃತಿಗಳ ಎದುರು ಮಹಿಳೆಯರ ಜೊತೆಗೆ ಯುವಕ–ಯುವತಿಯರು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಹೂವು, ಹಣ್ಣು ಹಾಗೂ ತರಕಾರಿಗಳಿಂದ ಆನೆ, ಬಾತುಕೋಳಿ, ಜಿಂಕೆ ಹಾಗೂ ಕೋಳಿಯ ಆಕೃತಿಗಳು ಹೆಂಗೆಳೆಯರ ಗಮನ ಸೆಳೆಯಿತು. ಈ ಆಕೃತಿಗಳ ಮುಂದೆ ಶಾಲಾ–ಕಾಲೇಜುಗಳ ಯುವಕ ಯುವತಿಯರು ಸೆಲ್ಫಿ ತೆಗೆಯುವ ಮೂಲಕ ಫಲಪುಷ್ಪ ಪ್ರದರ್ಶನವನ್ನು ಆನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT