ಶಾಂತಿ, ಸಹನೆ ನಮ್ಮ ಉಸಿರಾಗಲಿ: ಸಚಿವ ರೈ

7

ಶಾಂತಿ, ಸಹನೆ ನಮ್ಮ ಉಸಿರಾಗಲಿ: ಸಚಿವ ರೈ

Published:
Updated:
ಶಾಂತಿ, ಸಹನೆ ನಮ್ಮ ಉಸಿರಾಗಲಿ: ಸಚಿವ ರೈ

ಮಂಗಳೂರು: ಸಹಬಾಳ್ವೆಯ ಬದುಕನ್ನು ನಮ್ಮದಾಗಿಸಿಕೊಂಡು, ಶಾಂತಿ, ಸಹನೆ, ಸಂಯಮಗಳನ್ನು ಉಸಿರಾಗಿಸಿಕೊಳ್ಳೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿದ ಅವರು ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಎಲ್ಲ ಸಮಾಜದ ಬಡವರ್ಗಕ್ಕೆ ಸಮಾನ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾನತೆಯ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಎಲ್ಲ ವರ್ಗಗಳಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್‌ ಸೇರಿದಂತೆ ರಾಷ್ಟ್ರೀಯ ನಾಯಕರು ಸಂವಿಧಾನ ರಚಿಸುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ. ಅದನ್ನು ಎಲ್ಲರೂ ಸ್ಮರಿಸಬೇಕು ಎಂದ ಅವರು, ಪ್ರತಿಯೊಬ್ಬರಿಗೂ ಸುರಕ್ಷಿತ ವಾತಾವರಣ, ಮೂಲಸೌಕರ್ಯಗಳಾದ ಆಹಾರ, ಶಿಕ್ಷಣ, ಉದ್ಯೋಗ, ಸೂರು ಒದಗಿಸುವಲ್ಲಿ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ ಎಂದು ತಿಳಿಸಿದರು.

ಕೃಷಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಕರಾವಳಿ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಇದರಿಂದ ಜಿಲ್ಲೆಯ ಭತ್ತ ಬೆಳೆಯುವ ಕೃಷಿಕರಿಗೆ ಅನುಕೂಲವಾಗಿದೆ. ಬರಗಾಲದಿಂದ ತತ್ತರಿಸಿದ ರೈತರಿಗೆ ಪುನಶ್ಚೇತನ ನೀಡಲು ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸಿದೆ. ಸಹಕಾರ ಸಂಘಗಳಲ್ಲಿ ಜಿಲ್ಲೆಯ 65,518 ರೈತರ ₹296.65 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರಲ್ಲಿ ₹3 ಲಕ್ಷದವರೆಗೆ ಅಲ್ಪಾವಧಿ ಸಾಲ ಹಾಗೂ ₹10 ಲಕ್ಷದವರೆಗೆ ದೀರ್ಘಾವಧಿ ಸಾಲ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 3,23,127 ರೈತರು ಈ ಯೋಜನೆ ಫಲಾನುಭವಿಗಳಾಗಿದ್ದು, ₹315.30 ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರೋತ್ಸಾಹ ಧನ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 30.03 ಕೋಟಿ ಲೀಟರ್‌ ಹಾಲು ಖರೀದಿ ಮಾಡಲಾಗಿದೆ. ಇದಕ್ಕಾಗಿ 1,52,334 ಹೈನುಗಾರರ ಖಾತೆಗೆ ಒಟ್ಟು ₹126.42 ಕೋಟಿ ಪ್ರೋತ್ಸಾಹಧನ ಜಮಾ ಮಾಡಲಾಗಿದೆ ಎಂದರು.

ಪಶುಭಾಗ್ಯ ಯೋಜನೆಯಡಿ ಜಿಲ್ಲೆಯ 1,253 ರೈತ ಫಲಾನುಭವಿಗಳಿಗೆ ₹2.80 ಕೋಟಿ ಮೊತ್ತದ ಸಹಾಯಧನ ನೀಡಲಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ ಹಾಗೂ ವಿದ್ಯಾಸಿರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಜಿಲ್ಲೆಗೆ 10 ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿದ್ದು, ಶೀಘ್ರ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ 132.36 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳು, 312.53 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ 372 ಕಿ.ಮೀ. ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜಿಲ್ಲೆಯ ವಿವಿಧೆಡೆ 33 ಸೇತುವೆಗಳ ನಿರ್ಮಾಣ ಮಾಡಲಾಗಿದ್ದು, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ₹442.97 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಬಡವರ ಭೂಮಿಯ ಹಕ್ಕಿನ ಕನಸನ್ನು ಸಾಕಾರಗೊಳಿಸಲು ಅಕ್ರಮ–ಸಕ್ರಮ ಯೋಜನೆಯಡಿ ನಗರ ಪ್ರದೇಶದಲ್ಲಿ 94 ಸಿಸಿ ಪ್ರಕಾರ 10,309 ಹಾಗೂ ಗ್ರಾಮೀಣ ಪ್ರದೇಶದಲ್ಲಿ 94 ಸಿ ಪ್ರಕಾರ 37,883 ಅರ್ಜಿಗಳನ್ನು ಪರಿಶೀಲಿಸಿ, ಹಕ್ಕುಪತ್ರ ವಿತರಿಸಲಾಗಿದೆ ಎಂದರು.

ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಿದ ಅವರು, ವಿವಿಧ ದಳಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು, ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 6 ಜನರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಸಕರಾದ ಮೊಯಿದ್ದೀನ್‌ ಬಾವ, ಜೆ.ಆರ್. ಲೋಬೊ, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿಸೋಜ, ಮೇಯರ್‌ ಕವಿತಾ ಸನಿಲ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಮುಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ. ಮೊಹ್ಮದ್‌ ಮೋನು, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ ವೇದಿಕೆಯಲ್ಲಿದ್ದರು.

ಅತ್ಯಧಿಕ ಬಹುಗ್ರಾಮ ನೀರಿನ ಯೋಜನೆ

ಜಿಲ್ಲೆಯ ಇತಿಹಾಸದಲ್ಲಿಯೇ ಅತ್ಯಧಿಕ ಸಂಖ್ಯೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಒಟ್ಟು 7 ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವ ಬಿ.ರಮಾನಾಥ ರೈ ತಿಳಿಸಿದರು.

368 ಕೊಳವೆಬಾವಿಗಳ ನಿರ್ಮಾಣ, 61 ಕಿರು ನೀರು ಯೋಜನೆಗಳ ಅನುಷ್ಠಾನ, 70 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ 195.14 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟೆಗೆ ₹75.50 ಕೋಟಿ, ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಬಂಟ್ವಾಳ ಪಟ್ಟಣಕ್ಕೆ ₹52.79 ಕೋಟಿ, ಬೆಳ್ತಂಗಡಿ ಪಟ್ಟಣಕ್ಕೆ ₹13 ಕೋಟಿ ಅನುದಾನ ನೀಡಲಾಗಿದೆ.

* * 

ಸಾಮಾಜಿಕ ನ್ಯಾಯ, ಸುರಕ್ಷತೆ, ಆರ್ಥಿಕ ನೆರವು ಒದಗಿಸುವ ಮೂಲಕ ರಾಜ್ಯ ಸರ್ಕಾರ ಸಂವಿಧಾನದ ಆಶಯಗಳನ್ನು ಈಡೇರಿಸುತ್ತಿದೆ.

ಬಿ.ರಮಾನಾಥ ರೈ

ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry