ಕುಕ್ಕರಹಳ್ಳಿ ಕೆರೆ ತೆರೆದಿಟ್ಟ ಚಿತ್ರಾವಳಿ

7

ಕುಕ್ಕರಹಳ್ಳಿ ಕೆರೆ ತೆರೆದಿಟ್ಟ ಚಿತ್ರಾವಳಿ

Published:
Updated:

ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಯಾರಿಗೆ ತಾನೇ ಗೊತ್ತಿಲ್ಲ? ಕುವೆಂಪು ಕವಿತೆಗಳಿಗೆ ಸ್ಫೂರ್ತಿ ನೀಡಿದ ಕೆರೆಯಿದು. ಇಲ್ಲಿನ ಪರಿಸರದ ಜೀವವೈವಿಧ್ಯ ಅವರ ಮನಸೂರೆಗೊಂಡಿತ್ತು. ನಾನಾ ಜಾತಿ ಪಕ್ಷಿ, ಪ್ರಾಣಿ, ಕೀಟಗಳ ಸುಂದರ ಪರಿಸರವಿದು. ಈ ಜೈವಿಕ ವಲಯದ ಜೀವ ಪ್ರಭೇದಗಳ ಚಿತ್ರಗಳ ಬಗ್ಗೆ ಪ್ರೀತಿ ಹುಟ್ಟಿಸುವ ವಿಶಿಷ್ಟ ಛಾಯಾಚಿತ್ರ ಪ್ರದರ್ಶನ ಇಲ್ಲಿ ಮನಸೂರೆಗೊಂಡಿತು

ಛಾಯಾಚಿತ್ರಗಳ ಪ್ರದರ್ಶನ ವಾಗಿದ್ದೂ ವಿಶೇಷ ಜಾಗದಲ್ಲಿ. ನಂದಿತಾ ನಾಗರಾಜ್ ಹಾಗೂ ದೀಪಾ ಅವರ ‘ಚಾಯ್‌ ಪತ್ತೇ’ ಕೆಫೆಟೇರಿಯಾದಲ್ಲಿ ಛಾಯಾಗ್ರಾಹಕರಾದ ಎಸ್.ಶೈಲಜೇಶ್‌, ಚಂದ್ರಶೇಖರ್, ಹರ್ಷ, ಶ್ವೇತಾ, ಯೋಗಿ, ಆಶ್ರತಿ, ಸಪ್ತಗಿರೀಶ್ ಕ್ಲಿಕ್ಕಿಸಿರುವ

80ಕ್ಕೂ ಹೆಚ್ಚು ಚಿತ್ರಗಳು ಇಲ್ಲಿ ಗಮನಸೆಳೆದವು.

ಕುಕ್ಕರಹಳ್ಳಿ ಕೆರೆ ಉಳಿಸಿ ಸಮಿತಿಯು ಹಮ್ಮಿಕೊಂಡಿರುವ ಮೂರು ದಿನಗಳ ಈ ಕಾರ್ಯಕ್ರಮವು ನಾಗರಿಕರಿಗೆ, ಪರಿಸರ ಪ್ರೇಮಿಗಳಿಗೆ ಹಾಗೂ ವಿದ್ಯಾರ್ಥಿಗಳ ಜ್ಞಾನದಾಹ ತೀರಿಸಲು ಯಶಸ್ವಿಯಾಯಿತು. ಕಾರ್ಯಕ್ರಮಕ್ಕೆ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ–ಸೇನಾನಿ ಚಾಲನೆ ನೀಡಿದರು.

‍ಅಪರೂಪದ ಸಂಗ್ರಹ: ಛಾಯಚಿತ್ರ ಪ್ರದರ್ಶನವು ಅಪರೂಪದ ಚಿತ್ರಗಳನ್ನು ಬಿಚ್ಚಿಟ್ಟಿತು. ಸಾಮಾನ್ಯ ಹಾಗೂ ಅಪರೂಪದ ನಾನಾ ಪ್ರಭೇದಗಳ ಹಕ್ಕಿಗಳು, ಆರು ಪಾದಗಳ ಹಸಿರು ಕಪ್ಪೆ, ಅತಿ ಅಪರೂಪದ ವೈಪರ್ ಹಾವು ವಲಸೆ ಹಕ್ಕಿಗಳಾದ ಬೂದು ತಲೆಯ ಟಿಟ್ಟಿಬ (ಗ್ರೇ ಹೆಡೆಡ್ ಲ್ಯಾಪ್‌ವಿಂಗ್) ಈ ಪ್ರದರ್ಶನದ ವಿಶೇಷ.

ಕುಕ್ಕರಹಳ್ಳಿ ಪರಿಸರದ ಪ್ರಾಣಿ ಹಾಗೂ ಸಸ್ಯ ಜೀವ ವೈವಿಧ್ಯವನ್ನು ದಾಖ ಲೀಕರಿಸುವುದು ಈ ಛಾಯಾಗ್ರಾಹಕರ ಉದ್ದೇಶ. 1980ರ ನಂತರ ಸೆರೆಹಿಡಿ ದಿರುವ ಚಿತ್ರಗಳು ಇಲ್ಲಿ. 184 ಬಗೆಯ ಹಕ್ಕಿಗಳ ಪೈಕಿ 45ಕ್ಕೂ ಹೆಚ್ಚಿನ ಜಾತಿಯ ವಲಸೆ ಹಕ್ಕಿಗಳನ್ನು ಇಲ್ಲಿ ಪ್ರದರ್ಶಿಸುವ ಪ್ರಯತ್ನ ಮಾಡಲಾಗಿದೆ. 14 ಬಗೆಯ ಸಸ್ತನಿಗಳ ‍ಪೈಕಿ 6 ಬಗೆಯ ಬಾವಲಿಗಳು, ಗುಳ್ಳೆ ನರಿ, 7 ಜಾತಿ ಮೊಸಳೆ, 20 ಜಾತಿಯ ಸರಿಸೃಪಗಳು, 85 ಬಗೆಯ ಚಿಟ್ಟೆಗಳು, 37 ಬಗೆಯ ಜೇಡಗಳು ಹಾಗೂ 400ಕ್ಕೂ ಹೆಚ್ಚಿನ ಬಗೆಯ ಸಸ್ಯ ಪರಿಸರವನ್ನು ಒಂದು ಚೌಕಟ್ಟಿನಲ್ಲಿ ಹಿಡಿದುಕೊಡುವ ಪ್ರಯತ್ನ ಇಲ್ಲಿ ನಡೆದಿದೆ.

ಕಾರ್ಯಕ್ರಮದ ಆಯೋಜಕಿ ಡಿ. ಎಚ್‌.ತನುಜಾ ‘ಪ್ರಜಾವಾಣಿ’ಗೆ ಪ್ರತಿ ಕ್ರಿಯಿಸಿ, ‘ಕುಕ್ಕರಹಳ್ಳಿ ಕೆರೆಯ ಪರಿಸರದ ಬಗ್ಗೆ ಜನಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿದೆ. ಬೇರೆ ಬೇರೆ ವರ್ಗಗಳ ಜನರನ್ನು ನಾವು ಕೇಂದ್ರೀ ಕರಿಸುತ್ತಿದ್ದೇವೆ. ಈಗ ಕೆಫೆಟೇರಿಯಾದಲ್ಲಿ ಕಾರ್ಯಕ್ರಮ ನಡೆಸಿದ್ದೇವೆ. ನಂತರದ ದಿನಗಳಲ್ಲಿ ಶಾಲಾ– ಕಾಲೇಜುಗಳಲ್ಲೂ ಕಾರ್ಯಕ್ರಮ ನಡೆಸುತ್ತೇವೆ’ ಎಂದು ಮಾಹಿತಿ ನೀಡಿದರು.

ಮಾನವರೂ ಪರಿಸರದ ಭಾಗವಲ್ಲವೇ?!

‘ಪರಿಸರ ಎಂದರೆ ಕೇವಲ ಪ್ರಾಣಿ, ಪಕ್ಷಿ ಎಂದು ತಿಳಿಯಬೇಕಿಲ್ಲ. ಮಾನವರೂ ಪರಿಸರದ ಭಾಗವೇ ಅಲ್ಲವೇ?’

ಹೀಗೆ ಪ್ರಶ್ನಿಸಿದವರು ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ– ಸೇನಾನಿ. ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಮಕ್ಕಳೊಂದಿಗೆ ಅವರು ಸಂವಾದ ನಡೆಸಿದರು.

ಪರಿಸರ ಎಂದರೆ ಪ್ರಾಣಿ– ಪಕ್ಷಿಗಳನ್ನು ರಕ್ಷಿಸುವುದು, ಅವುಗಳ ಸಂತಾನೋತ್ಪತ್ತಿ– ಈ ರೀತಿಯ ವಿಚಾರಗಳ ಬಗ್ಗೆ ಮಾನವ ಚರ್ಚಿಸುತ್ತಾನೆ. ಆದರೆ. ಮಾನವನೂ ಭೂಮಿಯ ಒಂದು ಭಾಗ ಎಂದು ತಿಳಿದುಕೊಂಡಾಗ ಮಾತ್ರ ಪರಿಸರ ಸಂರಕ್ಷಣೆಯ ಕಾರ್ಯ ಪರಿಣಾಮಕಾರಿಯಾಗಿ ಆಗಬಲ್ಲದು ಎಂದರು.

‘ನಮಗೆ ಕುವೆಂಪು ಅವರ ಜತೆ ಒಡನಾಟವಿತ್ತು. ಪಕ್ಷಿಗಳನ್ನು ಗುರುತಿಸಿ ಅವುಗಳ ಹೆಸರುಗಳನ್ನು ಹೇಳುವಷ್ಟು ಜ್ಞಾನ ಅವರಿಗಿತ್ತು’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry