ಉಗ್ರರ ಹೊಡೆದುರುಳಿಸಿದ ಕಮಾಂಡೊ!

7

ಉಗ್ರರ ಹೊಡೆದುರುಳಿಸಿದ ಕಮಾಂಡೊ!

Published:
Updated:
ಉಗ್ರರ ಹೊಡೆದುರುಳಿಸಿದ ಕಮಾಂಡೊ!

ಮೈಸೂರು: ಗಣ್ಯರ ಮೇಲೆ ನಡೆದ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಮಾಂಡೊ ಪಡೆ, ಕೊನೆಗೂ ಉಗ್ರರನ್ನು ಹೊಡೆದುರುಳಿಸಿತು. ಇಂಥದೊಂದು ರೋಮಾಂಚಕ ದೃಶ್ಯ ನಗರದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಶುಕ್ರವಾರ ನಡೆಯಿತು. ಆದರೆ, ಅದು ಅಣುಕು ಪ್ರದರ್ಶನ. ಗಣರಾಜ್ಯೋತ್ಸವ ಅಂಗವಾಗಿ ಕಮಾಂಡೊ ಪಡೆಯ ಮುಖ್ಯಸ್ಥ ಅಶೋಕಕುಮಾರ್‌ ನೇತೃತ್ವದಲ್ಲಿ ಅಣಕು ಕಾರ್ಯಾಚರಣೆ ಗಮನ ಸೆಳೆಯಿತು. ಈ ಮೂಲಕ 4 ತಿಂಗಳವರೆಗೆ ಪಡೆದ ತರಬೇತಿಯ ನಂತರ ಮೊದಲ ಬಾರಿಗೆ ಪಡೆಯ ಪೊಲೀಸರು ತಮ್ಮ ಕೌಶಲ ಮೆರೆದರು.

ಮೊದಲಿಗೆ ಆಯುಧ ಕೌಶಲ ಸ್ಪರ್ಧೆ ನಡೆಯಿತು. ಒಂದೇ ಕೈಯಿಂದ ಆಯುಧ ಬಿಚ್ಚಿದ ಪೊಲೀಸ್‌ ಪಡೆ ನಂತರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಚ್ಚಿದ ಆಯುಧಗಳನ್ನು ಜೋಡಿಸಿದರು. ಆಮೇಲೆ ಸುಸಜ್ಜಿತ ವಾಹನದಲ್ಲಿ ಬಂದ ಗಣ್ಯರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಉಗ್ರರು ದಾಳಿ ನಡೆಸುತ್ತಾರೆ. ಇದರೊಂದಿಗೆ ಗಣ್ಯರ ಮೇಲೆ ಬಾಂಬ್‌ ಎಸೆಯಲು ಯತ್ನಿಸುವ ಉಗ್ರರ ಪ್ರಯತ್ನವನ್ನು ಸಮರ್ಥವಾಗಿ ಎದುರಿಸಿದ ಪಡೆ ಗಣ್ಯರನ್ನು ಸುರಕ್ಷಿತವಾಗಿ ಅವರ ವಾಹನ ಹತ್ತಿಸುವ ಮೂಲಕ ಬೀಳ್ಕೊಟ್ಟಿತು. ಆಗ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಪ್ರೋತ್ಸಾಹಿಸಿದರು.

ಮನೆಯೊಳಗೆ ನುಗ್ಗಿದ ಉಗ್ರರ ಮೇಲೆ ಏಕಾಏಕಿ ದಾಳಿ ನಡೆಸದೆ ಮನೆಯನ್ನು ಮೊದಲು ಸುತ್ತುವರಿಯಿತು ಕಮಾಂಡೊ ಪಡೆ. ಇವರಿಗೆ ನೆರವಾಗಲು ಬಂದಿದ್ದು ‘ಮೊಬೈಲ್‌ ಕಮಾಂಡ್ ಸೆಂಟರ್‌’ ವಾಹನ. ಇದರಲ್ಲಿ ಡ್ರೋಣ್ ಕ್ಯಾಮೆರಾ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಮತ್ತೊಂದಿಷ್ಟು ಪಡೆ ಬಂದಿಳಿಯಿತು. ಹಂತ ಹಂತವಾಗಿ ಮನೆಯೊಳಗೆ ನುಗ್ಗಿದ ಪಡೆ ಉಗ್ರರನ್ನು ಸೆದೆಬಡಿಯಿತು. ಹತ್ಯೆಯಾದ ಉಗ್ರರಿಂದ ವಶಪಡಿಸಿಕೊಂಡ ಆಯುಧಗಳನ್ನು ತಮ್ಮ ನಾಯಕರಿಗೆ ಸಿಬ್ಬಂದಿ ಒಪ್ಪಿಸಿತು.

ಬಸ್ ಪ್ರಯಾಣಿಕರನ್ನು ಅಪಹರಿಸಿದ ಇಬ್ಬರು ಉಗ್ರರನ್ನು ಹತ್ಯೆ ಮಾಡಿ, ಒಬ್ಬನನ್ನು ಬಂಧಿಸಲಾಯಿತು. ನಂತರ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರೀಯ ದಳ ಬಂದು ಬಸ್‌ ಪರಿಶೀಲಿಸಿದವು. ಹೀಗೆ ನಗರ ಪೊಲೀಸ್‌ ಕಮಿಷನರ್‌ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದಲ್ಲಿ ತರಬೇತಿ ಪಡೆದ ಕಮಾಂಡೊ ಪಡೆಯ ಸಾಹಸವನ್ನು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಇದರ ಮುಂದುವರಿದ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿಎವಿ ಪಬ್ಲಿಕ್‌ ಶಾಲೆಯ 350 ವಿದ್ಯಾರ್ಥಿಗಳು ‘ಮೇರಾ ಭಾರತ್‌ ಮಹಾನ್‌’ ಹಾಡಿನ ಮೂಲಕ ನಮ್ಮ ಸೈನಿಕರ ಶ್ರಮವನ್ನು, ಉಗ್ರರ ದಾಳಿಯನ್ನು ಎದುರಿಸಿ ಹತ್ಯೆಗೈಯುವ ಸಾಹಸ... ಹೀಗೆ ಅವರ ಸಾಧನೆ, ಶೌರ್ಯ, ತ್ಯಾಗ, ಬಲಿದಾನಗಳನ್ನು ನೃತ್ಯರೂಪಕದ ಮೂಲಕ ಪ್ರದರ್ಶಿಸಿದರು.

ಜೆಎಲ್‌ಬಿ ರಸ್ತೆಯ ಐಡಿಯಲ್‌ ಜಾವಾ ರೋಟರಿ ಶಾಲೆಯ 350 ವಿದ್ಯಾರ್ಥಿಗಳು ‘ಜೈ ಹೋ’, ‘ಮೇರಾ ಭಾರತ್‌ ಮಹಾನ್‌’ ಹಾಗೂ ‘ವಂದೇ ಮಾತರಂ’ ಹಾಡಿಗೆ ನೃತ್ಯ ಪ್ರದರ್ಶಿಸಿ, ಬಾವುಟದ ಮೂರು ಬಣ್ಣದ ಕೊಡೆಗಳನ್ನು ಹಿಡಿದು ಗಣ್ಯರಾಜ್ಯೋತ್ಸವ, ವೆಲ್‌ಕಮ್, ಜೈ ಹಿಂದ್ ಹಾಗೂ ಥ್ಯಾಂಕ್ಯೂ ಪದಗಳ ಜೋಡಣೆ ಮಾಡಿದರು.

ಭಾರಿ ವಾಹನ ಚಾಲನೆ ಮಾಡುವ, 2ನೇ ತರಗತಿ ವಿದ್ಯಾರ್ಥಿನಿ ರಿಫಾ ತಸ್ಕಿನ್‌ ವಾಹನದಲ್ಲಿ ಬಂದು ಎಲ್ಲರತ್ತ ಕೈ ಬೀಸಿ ಗಮನ ಸೆಳೆದಳು. ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ರಿಫಾಳನ್ನು ಅಭಿನಂದಿಸಿದರು. ಕೂಡಲೇ ಸಂತ ಥಾಮಸ್ ಸಂಸ್ಥೆಗಳ 450 ವಿದ್ಯಾರ್ಥಿಗಳು ‘ಜಗ್ಗದು ಜಗ್ಗದು ಯಾರಿಗೂ ಜಗ್ಗದು ಇಂಡಿಯಾ’ ಹಾಡಿಗೆ ನೃತ್ಯ ಪ್ರದರ್ಶಿಸಿ ಆಕರ್ಷಿಸಿದರು.

ವಿಜಯನಗರ 4ನೇ ಹಂತದ ಎಸ್‌ವಿಇಐ ಪ್ರೌಢಶಾಲೆ 300 ವಿದ್ಯಾರ್ಥಿಗಳು ಸ್ವಚ್ಛ ಭಾರತ ಅಭಿಯಾನದ ಕುರಿತು ರೂಪಕದ ಜತೆಗೆ, ‘ವಂದೇ ಮಾತರಂ’ ಹಾಡಿಗೆ ನರ್ತಿಸಿದರು.

ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಧ್ವಜಾರೋಹಣ ನೆರವೇರಿಸಿದ ನಂತರ ತೆರೆದ ಜೀಪಿನಲ್ಲಿ ಪರೇಡ್‌ ವೀಕ್ಷಿಸಿದರು. ಆಮೇಲೆ ಎಸಿಪಿ ಮೌಂಟೆಡ್‌ ಕಂಪನಿಯ ಪರೇಡ್ ಕಮಾಂಡರ್ ಶಿವರಾಜು ನೇತೃತ್ವದಲ್ಲಿ 25 ಪ್ಲಟೂನ್‌ಗಳು ಪಥ ಸಂಚಲನ ನಡೆಸಿದವು

ಕೇಸರಿ ಪೊರೆ ಕಳಚಲು ಸಲಹೆ

ಮೈಸೂರು: ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆಯು ಸಮೀಕರಣವಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯವಾಗಲಿದೆ. ಆದರೆ,

ಕೇಸರಿ ಪೊರೆ ಕಣ್ಣಿಗೆ ಕಟ್ಟಿಕೊಂಡು ನೋಡುವುದನ್ನು ಬಿಟ್ಟು, ತಿಳಿಯಾದ ಕಣ್ಣಿನಿಂದಲೇ ನೋಡಬೇಕು ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಲಹೆ ನೀಡಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ಮೈಮನಸ್ಸಿನಲ್ಲಿ ಮಲಿನತೆ ತುಂಬಿಕೊಂಡಿರುವುದರಿಂದ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಮುಕ್ತ ಮನಸ್ಸಿನಿಂದ ನೋಡಲು ಸಾಧ್ಯವಾಗುತ್ತಿಲ್ಲ. ಹಾಗೆ ಸಾಧ್ಯವಾದರೆ ಭಾರತವನ್ನು ಒಂದು ಸಮೃದ್ಧ ಮತ್ತು ಬಲಿಷ್ಠ ರಾಷ್ಟ್ರವನ್ನಾಗಿ ಕಟ್ಟಬಹುದು. ವಿಶ್ವದ ಬಲಿಷ್ಠ ರಾಷ್ಟ್ರಗಳು ಒಡ್ಡುವ ಸವಾಲುಗಳಿಗೆ ಪ್ರತಿ ಸವಾಲನ್ನು ಒಡ್ಡಬಹುದು. ಜತೆಗೆ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry