ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಂತ್ರ ವಿಧಾನಸಭೆ ನಿರ್ಮಾಣ ಮಾಡಿ

Last Updated 27 ಜನವರಿ 2018, 6:42 IST
ಅಕ್ಷರ ಗಾತ್ರ

ಮೈಸೂರು: ‘ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಮಾಡುವಲ್ಲಿ ಬಿಎಸ್‌ಪಿ ಕಾರ್ಯಕರ್ತರು ಮುಖ್ಯ ಪಾತ್ರ ವಹಿಸಬೇಕು. ಹಾಗಾದಾಗ ಮಾತ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ನಮ್ಮದೇ ಆಗುತ್ತದೆ‌’ ಎಂದು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್‌.ಮಹೇಶ್‌ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ‘ಪ್ರಜಾಪ್ರಭುತ್ವ ಉಳಿಸುವ ಕಡೆಗೆ... ಆನೆಯ ನಡಿಗೆ’ ಎಂಬ ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಎಲ್ಲ ಪಕ್ಷಗಳೂ 150 ಸ್ಥಾನಗಳನ್ನು ಗೆಲ್ಲುವ ಮಾತನಾಡುತ್ತಿವೆ. ಪ್ರತಿ ಕ್ಷೇತ್ರಕ್ಕೂ ₹ 10 ಕೋಟಿ ಬಿಸಾಕಲು ಮುಂದಾಗಿವೆ. ಆದರೆ, ಬಹುಜನ ಮತದಾರರು ಇದಕ್ಕೆ ತಡೆ ಒಡ್ಡಬೇಕು. 80 ಸ್ಥಾನಗಳಿಗೆ ಅವರನ್ನು ಕಟ್ಟಿ ನಿಲ್ಲಿಸಬೇಕು. ಬಿಎಸ್‌ಪಿಯ ಶೇ 10 ಅಭ್ಯರ್ಥಿಗಳನ್ನು ಗೆಲ್ಲಿಸಿದರೂ ಸಾಕು. ಉಳಿದವರು ಸರ್ಕಾರ ರಚನೆಗೆ ನಮ್ಮ ಬಳಿಯೇ ಬರಬೇಕಾಗುತ್ತದೆ’ ಎಂದರು.

‘ಕಾಂಗ್ರೆಸ್ಸಿನದು ಸಾಧನಾ ಸಮಾವೇಶ, ಬಿಜೆಪಿಯದು ಪರಿವರ್ತನಾ ಯಾತ್ರೆ. ಅವರಿಗೆ ಅವರೇ ಶಹಬ್ಬಾಷ್‌ಗಿರಿ ಕೊಟ್ಟುಕೊಳ್ಳುತ್ತಿದ್ದಾರೆ. ಇಂಥವರ ಮಧ್ಯೆ ಪ್ರಜಾಪ್ರಭುತ್ವ ಉಳಿಸಲು ಹೊರಟಿರುವುದು ಬಹುಜನ ಸಮಾಜ ಪಕ್ಷ ಮಾತ್ರ’ ಎಂದು ಹೇಳಿದರು.

‘ಮತದಾನದವರೆಗೆ ಮಾತ್ರ ನಾವು ಪ್ರಜಾಪ್ರಭುತ್ವದ ನಿಯಮಗಳನ್ನು ಪಾಲಿಸುತ್ತೇವೆ. ಬಳಿಕ ಸರ್ಕಾರ ರಚನೆ ಆಗುತ್ತಿದ್ದಂತೆಯೇ ಸಂವಿಧಾನದ ಆಶಯಗಳೆಲ್ಲ ಮಣ್ಣು ಪಾಲಾಗುತ್ತಿವೆ. ಹೀಗಾಗಿ ಸಮಬಾಳು– ಸಮಪಾಲು ಇಂದಿಗೂ ನನಸಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘1885ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಯಿತು. ನಂತರ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ಹೋರಾಟ ಕೇವಲ ಸ್ವಾತಂತ್ರ್ಯದ ಕೋರಿಕೆಯಾಗಿತ್ತು. ನಮ್ಮ ಅಧಿಕಾರ ನಮಗೆ ಕೊಟ್ಟುಬಿಡು ಎಂಬುದಷ್ಟೇ ಕಾಂಗ್ರೆಸ್‌ ನಾಯಕರ ಆಗ್ರಹವಾಗಿತ್ತು. ಆದರೆ, ಇದೆಲ್ಲಕ್ಕಿಂತ ಮುಂಚೆ ‘ಪ್ರಜಾರಾಜ್ಯ’ದ ಚಳವಳಿಯನ್ನು ಆರಂಭಿಸಿದ್ದು ಬಹುಜನರು’ ಎಂದು ಅವರು ವಿವರಿಸಿದರು.

‘1935ರ ವರೆಗೂ ಜನರ ಕೈಗೆ ಮತದಾನದ ಹಕ್ಕು ಕೊಡಬೇಕು ಎಂದು ಯಾರಿಗೂ ಅನಿಸಿರಲಿಲ್ಲ. ಡಾ.ಅಂಬೇಡ್ಕರ್‌ ಅವರು ಮೊದಲಬಾರಿಗೆ ವಯಸ್ಕರ ಮತದಾನ ಹಕ್ಕು ಪ್ರತಿಪಾದನೆ ಮಾಡಿದರು. ಆಗಿನ ಕಾಂಗ್ರೆಸ್ಸಿಗರು ಇದನ್ನೂ ವಿರೋಧಿಸಿದ್ದರು. ಇದನ್ನು ತಿಳಿಯದ ಯುವಕರು ಕಾಂಗ್ರೆಸ್ಸಿಗರಿಗೇ ಮತ ಹಾಕಲು ಮುಗಿಬೀಳುತ್ತಿದ್ದಾರೆ. ಇದು ವ್ಯವಸ್ಥೆಯ ದುರಂತ’ ಎಂದರು.

‘ಅಂಬೇಡ್ಕರ್‌ ಅವರು ಬಾಯ್ದೆರೆಯುವವರೆಗೂ ಈ ದೇಶದಲ್ಲಿ ಅಸಮಾನತೆ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆ, ಮತದಾನ ಹಕ್ಕುಗಳ ಬಗ್ಗೆ ಕಾಂಗ್ರೆಸ್ಸಿಗರಾರೂ ತಲೆಕೆಡಿಕೊಂಡಿರಲಿಲ್ಲ. ಇಂಥ ವಿಚಾರಗಳು ಬಂದಾಗ ಉಳಿದವರೆಲ್ಲ ಒಂದಾಗಿ ಅಂಬೇಡ್ಕರ್‌ ಅವರನ್ನೇ ಒಂಟಿ ಮಾಡಿದರು. 55 ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿಗರು ಸಂವಿಧಾನವನ್ನು ಮೂಲೆಗುಂಪು ಮಾಡಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಮಾಜವಾದಿ ತಳಹದಿ ಹೊಂದಿದ ಸಿದ್ದರಾಮಯ್ಯ ಕೂಡ ಬಹುಜನರಿಗೆ ನಂಬಿಕೆದ್ರೋಹ ಮಾಡಿದರು. ರಾಜ್ಯದಲ್ಲಿ ಸಾವಿರಾರು ಎಕರೆ ಬಗರ್‌ ಹುಕುಂ ಜಮೀನು ಬಿದ್ದಿದೆ. ಅದನ್ನು ಇಲ್ಲದವರಿಗೆ ಹಂಚಿದರೆ ದುಡಿದು ಉಣ್ಣುತ್ತಾರೆ. ಅದನ್ನು ಬಿಟ್ಟು; ಅನ್ನಭಾಗ್ಯದಂಥ ಯೋಜನೆ ಮೂಲಕ ನಮ್ಮನ್ನು ಕೇವಲ ಒಂದು ಹೊತ್ತಿನ ಊಟಕ್ಕೇ ಸೀಮಿತ ಮಾಡಿದ್ದಾರೆ’ ಎಂದು ಅವರು ಕಿಡಿಕಾರಿದರು.

ಪಕ್ಷದ ಕರ್ನಾಟಕ ಉಸ್ತುವಾರಿ ಡಾ.ಅಶೋಕ್‌ ಸಿದ್ಧಾರ್ಥ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದಯ್ಯ, ವೇಲಾಯುಧನ್‌, ಅರಕಲವಾಡಿ ನಾಗೇಂದ್ರ, ಎಂ.ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಶಿವಮ್ಮ, ಆರ್‌.ಪಿ.ನಂಜುಂಡಸ್ವಾಮಿ, ಪಂಚಾಕ್ಷರಿ, ಜಿಲ್ಲಾ ಘಟಕದ ಅಧ್ಯಕ್ಷ ಭೀಮನಹಳ್ಳಿ ಸೋಮೇಶ್‌ ಸೇರಿದಂತೆ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು, ವಿವಿಧ ಸಮಾಜದ ಮುಖಂಡರೂ ವೇದಿಕೆ ಮೇಲಿದ್ದರು.

* * 

ಕಳೆದ ವರ್ಷ ಶೇ 58ರಷ್ಟು ಆಸ್ತಿ ಶೇ 1ರಷ್ಟು ಜನರ ಕೈಲಿತ್ತು. ಈ ವರ್ಷ ಶೇ 73ರಷ್ಟು ಆಸ್ತಿ ಶೇ 1ರಷ್ಟು ಜನರ ಕೈಸೇರಿದೆ. ಸುಮಾರು 67 ಕೋಟಿ ಸಾಮಾನ್ಯರ ಬಳಿ ಇರುವುದು ಕೇವಲ ಶೇ 1ರಷ್ಟು ಆಸ್ತಿ
ಎನ್‌.ಮಹೇಶ್‌
ರಾಜ್ಯ ಘಟಕದ ಅಧ್ಯಕ್ಷ, ಬಿಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT