ಕೊಕ್ಕರೆಬೆಳ್ಳೂರು: ಕೊಕ್ಕರೆ ಸಾವು 19ಕ್ಕೆ ಏರಿಕೆ

7

ಕೊಕ್ಕರೆಬೆಳ್ಳೂರು: ಕೊಕ್ಕರೆ ಸಾವು 19ಕ್ಕೆ ಏರಿಕೆ

Published:
Updated:

ಭಾರತೀನಗರ: ಸಮೀಪದ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆಬೆಳ್ಳೂರಿನಲ್ಲಿ ಹೆಜ್ಜಾರ್ಲೆಗಳ ಸಾವಿನ ಸರಣಿ ಮುಂದುವರಿದಿದೆ. ಬುಧವಾರ ಅಸ್ವಸ್ಥಗೊಂಡಿದ್ದ ಕೊಕ್ಕರೆ ಗುರುವಾರ ಮೃತಪಟ್ಟಿದೆ. ಕೊಕ್ಕರೆ ಬೆಳ್ಳೂರಿನಲ್ಲಿ ಇದುವರೆಗೂ ಸತ್ತ ಕೊಕ್ಕರೆಗಳ ಸಂಖ್ಯೆ 19ಕ್ಕೆ ದಾಟಿದೆ. ಗುರುವಾರ ಮತ್ತೆರಡು ಹೆಜ್ಜಾರ್ಲೆಗಳು ಮರದಿಂದ ಬಿದ್ದು 1 ಸ್ಥಳದಲ್ಲೇ ಸತ್ತು, 1 ಅಸ್ವಸ್ಥಗೊಂಡಿದೆ.

ಗುರುವಾರ ಸಾವಿಗೀಡಾದ ಹೆಜ್ಜಾರ್ಲೆ ಕಳೇಬರವನ್ನು ಅರಣ್ಯ ಇಲಾಖೆ ಸಿಬ್ಬಂದಿ ಪಕ್ಷಿ ಪಾಲನಾ ಕೇಂದ್ರದ ಬಳಿಯೇ ಸುಟ್ಟು ಹಾಕಿದ್ದಾರೆ. ಸಾವಿಗೀಡಾದ ಕೊಕ್ಕರೆಯ ಮೃತ ದೇಹಗಳನ್ನು ಪ್ರಯೋಗಾಲಯಕ್ಕೆ ಕಳುಹಿಸದೆ ಸುಟ್ಟು ಹಾಕಿರುವುದು ಗ್ರಾಮಸ್ಥರಲ್ಲಿ ಅನುಮಾನಕ್ಕೆಡೆ ಮಾಡಿದೆ.

ಅಸ್ವಸ್ಥಗೊಂಡ ಹೆಜ್ಜಾರ್ಲೆಗಳು ಯಾವುದೇ ರೀತಿಯ ಆಹಾರ ಸೇವಿಸದ ಸ್ಥಿತಿಗೆ ತಲುಪುತ್ತವೆ. ಅವುಗಳನ್ನು ಪಕ್ಷಿ ಪಾಲನಾ ಕೇಂದ್ರದಲ್ಲಿಟ್ಟು ನಿಗಾ ವಹಿಸಲಾಗಿದೆ. ಅಲ್ಲದೆ ಪಶು ವೈದ್ಯರೂ ಈಗಾಗಲೇ ಅಸ್ವಸ್ಥ ಹೆಜ್ಜಾರ್ಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹೆಜ್ಜಾರ್ಲೆಗಳ ಸಾವಿಗೆ ಕಾರಣವೇನೆಂಬುದನ್ನು ಕಂಡು ಹಿಡಿದು ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮತ್ತೊಮ್ಮೆ ಔಷಧಿ ಸಿಂಪಡಣೆ: ಡಿ. 28ರಂದು ಪಶು ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಪಕ್ಷಿಗಳ ವಾಸಸ್ಥಳಗಳಿಗೆ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್ ಔಷಧಿಯನ್ನು ಸಿಂಪಡಣೆ ಮಾಡಿದ್ದು, ಆನಂತರವೂ ಕೊಕ್ಕರೆಗಳು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಔಷಧಿಯನ್ನು ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗದ ಸಿಬ್ಬಂದಿ ಸಿಂಪಡಣೆ ಮಾಡಿದರು.

ಹೆಜ್ಜಾರ್ಲೆಗಳು ವಾಸಿಸುವ ಮರದ ತಳ ಭಾಗದಲ್ಲಿ ಔಷಧಿಯನ್ನು ಸಿಂಪಡಿಸಲಾಯಿತು. ಉಪ ವಲಯ ಅರಣ್ಯಾಧಿಕಾರಿ ಮುರಳಿ, ಅರಣ್ಯ ವೀಕ್ಷಕ ಲೋಕೇಶ್‌, ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ. ಲಿಂಗೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry