ಭಾರತವು ಪ್ರಜಾಪ್ರಭುತ್ವದಲ್ಲಿ ವಿಶ್ವದಲ್ಲಿಯೇ ಮಾದರಿ

7

ಭಾರತವು ಪ್ರಜಾಪ್ರಭುತ್ವದಲ್ಲಿ ವಿಶ್ವದಲ್ಲಿಯೇ ಮಾದರಿ

Published:
Updated:

ರಾಯಚೂರು: ಅಮೆರಿಕ ಸೇರಿದಂತೆ ಕೆಲ ದೇಶಗಳಲ್ಲಿ ಇಂದಿಗೂ ಬ್ಯಾಲೆಟ್ ಪೇಪರ್‌ನ್ನು ಚುನಾವಣೆಗಾಗಿ ಉಪಯೋಗಿಸುತ್ತಿದ್ದಾರೆ. ಆದರೆ ಭಾರತ ದೇಶದ ಜನಸಂಖ್ಯೆ ಅಮೆರಿಕಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದ್ದರೂ ವಿದ್ಯುನ್ಮಾನ ಮತಪೆಟ್ಟಿಗೆ ಉಪಯೋಗಿಸಿ ಚುನಾವಣೆಯಲ್ಲಿ ಪಾರದರ್ಶಕತೆ ತರಲಾಗಿದೆ. ಭಾರತದ ಚುನಾವಣಾ ಆಯೋಗವು ವಿಶ್ವದಲ್ಲಿಯೇ ಮಾದರಿ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

‘ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಿಂದ ಗುರುವಾರ ಏರ್ಪಡಿಸಿದ್ದ 'ಯುವ ಮತ್ತು ಭಾವಿ ಮತದಾರರ ಸಬಲೀಕರಣ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಮತದಾರರ ದಿನವನ್ನು ಎಂಟು ವರ್ಷಗಳಿಂದ ಆಚರಿಸಲಾಗುತ್ತಿದೆ. 1950ರ ಜ.25 ರಂದು ಸ್ಥಾಪನೆಯಾದ ಚುನಾವಣಾ ಆಯೋಗದ ಸ್ಥಾಪನ ದಿನವಾಗಿದೆ. ಈ ವರ್ಷ ವಿಧಾನಸಭೆ ಚುನಾವಣೆಗೆ ನಡೆಯುವ ಹಿನ್ನಲೆಯಲ್ಲಿ ಇದರ ಮಹತ್ವವಿದೆ ಎಂದರು.

ಜಗತ್ತಿನ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಚೀನಾ ಕಮ್ಯೂನಿಸ್ಟ್ ರಾಷ್ಟ್ರವಾದರೆ, ಉತ್ತರ ಕೊರಿಯಾ ಸರ್ವಾಧಿಕಾರಿಯನ್ನು ಹೊಂದಿದೆ. ಆಫ್ರಿಕಾ ಖಂಡದ ಬಹಳಷ್ಟು ರಾಷ್ಟ್ರಗಳು ಸರ್ವಾಧಿಕಾರವನ್ನು ಹೊಂದಿರುವ ರಾಷ್ಟ್ರಗಳಾಗಿವೆ. ಅಮೆರಿಕಾದ ಕರಿಯರಿಗೆ ಹಲವಾರು ವರ್ಷ ಮತದಾನಕ್ಕೆ ಅವಕಾಶವನ್ನೆ ನೀಡಿರಲಿಲ್ಲ. ಇಂಗ್ಲೆಂಡ್‌ನಂತಹ ಮುಂದುವರೆದ ದೇಶದಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ಪಡೆಯಲು ಹಲವಾರು ವರ್ಷಗಳ ಹೋರಾಟ ಮಾಡಿದ ನಂತರ ಪಡೆದರು. ಆದರೆ ಭಾರತ ಹಾಗಲ್ಲ. ಸ್ವಾತಂತ್ರ್ಯ ಪಡೆದ ನಂತರ ನಾವೆಲ್ಲರೂ ಮತದಾನದ ಹಕ್ಕನ್ನು ಪಡೆದಿದ್ದೇವೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಸುಭದ್ರ ಅಡಿಗಲ್ಲು ಮತದಾನ. 18 ವರ್ಷ ದಾಟಿದ ಯುವಕ, ಯುವತಿಯರು ಹಾಗೂ ಇತರರು ಅದನ್ನು ವಿವೇಚನೆಯಿಂದ ಬಳಸಬೇಕು. ಮತ ಚಲಾಯಿಸುವ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಸುಭದ್ರ ಪ್ರಜಾಪ್ರಭುತ್ವಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಅಭಿರಾಮ ಜಿ. ಶಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಲವು ಜನ ವಲಸೆ ಹೋಗಿರುತ್ತಾರೆ. ಮಹಿಳೆಯರಿಗೆ ಮತ ಚಲಾಯಿಸುವ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು ಅವರು ಚುನಾವಣಾ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಆನಂತರ ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ಕುರಿತು ನಡೆದ ಕ್ರೀಡೆ, ಪ್ರಬಂಧ ಸ್ಪರ್ಧೆ, ಗೋಡೆ ಬರಹ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಚುನಾವಣೆ ಮತಗಟ್ಟೆಗಳಲ್ಲಿ ಈ ಹಿಂದೆ ಉತ್ತಮ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರು, ರಾಯಚೂರು ಸಹಾಯಕ ಆಯುಕ್ತ ಪೂಜಾರ ವೀರಮಲ್ಲಪ್ಪ, ಚುನಾವಣಾ ತಹಶೀಲ್ದಾರ್‌ ಯಲ್ಲಪ್ಪ ಸುಭೇದಾರ, ರಾಯಚೂರು ತಾಲ್ಲೂಕು ತಹಶೀಲ್ದಾರ ಶಿವಾನಂದ ಸಾಗರ, ಪ್ರೊಬೇಷನರಿ ತಹಶೀಲ್ದಾರ್‌ ಸಂತೋಷಿ ರಾಣಿ ಇದ್ದರು. ದಂಡಪ್ಪ ಬಿರಾದಾರ ನಿರೂಪಿಸಿದರು. ಯೋಜನಾ ಅಧಿಕಾರಿ ಈರಣ್ಣ ಬಿರಾದಾರ ವಂದಿಸಿದರು.

* * 

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ದೇಶದ ಭಾವಿ ಮತದಾರರಾಗಿದ್ದು ಮತದಾನದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

ಅಭಿರಾಮ ಜಿ.ಶಂಕರ

ಜಿಲ್ಲಾ ಪಂಚಾಯಿತಿ ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry