‘ಆರೋಗ್ಯ ವಿ.ವಿ: ಬಿಕ್ಕಟ್ಟು ಶಮನಕ್ಕೆ ಯತ್ನ’

7

‘ಆರೋಗ್ಯ ವಿ.ವಿ: ಬಿಕ್ಕಟ್ಟು ಶಮನಕ್ಕೆ ಯತ್ನ’

Published:
Updated:

ರಾಮನಗರ: ಜಿಲ್ಲೆಯಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಕುರಿತು ಕೆಲವರು ರಾಜ್ಯಪಾಲರಿಗೆ ತಪ್ಪು ಮಾಹಿತಿ ನೀಡಿದ್ದರು. ಆ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 69ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಆರೋಗ್ಯ ವಿ.ವಿ. ಕ್ಯಾಂಪಸ್‌ ಅನ್ನು ಮುಂದಿನ ತಿಂಗಳು ಸಂಪೂರ್ಣ ಸ್ಥಳಾಂತರ ಮಾಡುವಂತೆ ಸರ್ಕಾರವು ವಿಶ್ವವಿದ್ಯಾಲಯಕ್ಕೆ ಈಗಾಗಲೇ ಸೂಚಿಸಿದೆ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಎಲ್ಲ ತೊಡಕುಗಳನ್ನೂ ಹಂತಹಂತವಾಗಿ ಬಗೆಹರಿಸಲಾಗುತ್ತಿದೆ ಎಂದರು.

ದತ್ತು ಸ್ವೀಕಾರ: ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮವನ್ನು ಸರ್ಕಾರವು ದತ್ತು ಸ್ವೀಕರಿಸಿ ಅಭಿವೃದ್ಧಿ ಮಾಡಲು ನಿರ್ಧರಿಸಿದೆ. ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ದೇಶದಲ್ಲಿಯೇ ಮೊದಲು ಎನ್ನಬಹುದಾದ ‘ಸೂರ್ಯ ರೈತ’ ಯೋಜನೆಯು ಕನಕಪುರ ತಾಲ್ಲೂಕಿನ ಹಾರೋಬೆಲೆಯಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಂಡಿದೆ. ಇಂಧನ ಇಲಾಖೆಯ ವತಿಯಿಂದ ರಾಜ್ಯದ 100 ತಾಲ್ಲೂಕುಗಳಲ್ಲಿ ಸೌರಶಕ್ತಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ 60 ತಾಲ್ಲೂಕುಗಳಲ್ಲಿ ಈಗಾಗಲೇ ಕಾಮಗಾರಿ ಮುಗಿದಿದೆ. ಪಾವಗಡದ ಬೃಹತ್‌ ಸೌರ ವಿದ್ಯುತ್‌ ಯೋಜನೆಯು ಶೀಘ್ರ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್, ಉಪಾಧ್ಯಕ್ಷೆ ತಹಸೀನ್‌ ತಾಜ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನಿಗಮದ ಅಧ್ಯಕ್ಷ ಕೆ. ಶೇಷಾದ್ರಿ, ರಾಮನಗರ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಎನ್. ವೆಂಕಟೇಶ್, ಜಿಲ್ಲಾಧಿಕಾರಿ ಡಾ. ಬಿ.ಆರ್. ಮಮತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಲತಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್‌.ಕೆ. ಭೈರಲಿಂಗಯ್ಯ ಇದ್ದರು. ವೆಂಕಟಾಚಲ ಹಾಗೂ ಸಂಗಡಿಗರು ನಾಡಗೀತೆ, ರೈತಗೀತೆ ಹಾಡಿದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

ಬಿಚ್ಚಿಕೊಳ್ಳದ ಬಾವುಟ

ಧ್ವಜಾರೋಹಣದ ಸಂದರ್ಭ ರಾಷ್ಟ್ರಧ್ವಜವು ಬಿಚ್ಚಿಕೊಳ್ಳದೇ ಸಚಿವರು ಕಸಿವಿಸಿ ಅನುಭವಿಸಿದರು. ಧ್ವಜಕ್ಕೆ ಕಟ್ಟಿದ ಹಗ್ಗವು ಬಿಗಿಯಾಗಿದ್ದರಿಂದ ಸಚಿವರು ಮೂರ್ನಾಲ್ಕು ಬಾರಿ ಎಳೆದರೂ ರಾಷ್ಟ್ರಧ್ವಜ ಹಾರಲಿಲ್ಲ. ಬಳಿಕ ಅದನ್ನು ಕಟ್ಟಿದವರೇ ನಾಲ್ಕಾರು ಬಾರಿ ಪ್ರಯತ್ನಿಸಿದ ಬಳಿಕ ತಿರಂಗ ಹಾರಿತು. ಧ್ವಜಾರೋಹಣದ ನಂತರ ಹಾರಿಬಿಡಲಾದ ಬಲೂನುಗಳೂ ಧ್ವಜಕಂಬಕ್ಕೆ ಸಿಲುಕಿ ನಿಮಿಷದ ಬಳಿಕ ಮೇಲಕ್ಕೆ ಹಾರಿದವು.

ಪಥ ಸಂಚಲನ–ಸಾಂಸ್ಕೃತಿಕ ಕಾರ್ಯಕ್ರಮ

ಪೊಲೀಸ್‌ ತರಬೇತಿ ಶಾಲೆಯ ಇನ್‌ಸ್ಪೆಕ್ಟರ್ ಮಹೇಶ್‌ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್ ಸಿಬ್ಬಂದಿ, ಸೇವಾ ದಳ, ವಿವಿಧ ಶಾಲೆ–ಕಾಲೇಜುಗಳ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ತಂಡದವರು ಪಥ ಸಂಚಲನದಲ್ಲಿ ಪಾಲ್ಗೊಂಡರು, ಇವರಲ್ಲಿ ನೇತಾಜಿ ಪಾಲ್ಯುಲರ್ ಶಾಲೆ ಪ್ರಥಮ, ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆ ವಿಭಾಗದ ದ್ವಿತೀಯ ಹಾಗೂ ಶಾಂತಿ ನಿಕೇತನ ತಂಡವು ತೃತೀಯ ಬಹುಮಾನ ಗಳಿಸಿತು. ಅರ್ಚಕರಹಳ್ಳಿಯ ಅಂಧರ ಶಾಲೆಯ ಮಕ್ಕಳೂ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ಒಂದು ಗಂಟೆ ತಡವಾಗಿ ಆರಂಭಗೊಂಡಿದ್ದು, ಬಿಸಿಲಿನ ಝಳದ ನಡುವೆಯೇ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಜಿಸಿದರು. ದೇಶಭಕ್ತಿಯನ್ನು ಉದ್ದೀಪನಗೊಳಿಸುವ ಗೀತೆಗಳಿಗೆ ವಿವಿಧ ಸರ್ಕಾರಿ ಶಾಲೆಗಳು, ಜ್ಞಾನವಿಕಾಸ ಶಾಲೆ ಹಾಗೂ ಸೇಂಟ್‌ ಮೈಕಲ್ಸ್‌ ಶಾಲೆಯ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳ ಮಲ್ಲಕಂಬ ಪ್ರದರ್ಶನವು ಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry