ಹೊಸ ಲೋಕ ಸೃಷ್ಟಿಸಿದ ಫಲಪುಷ್ಪ ಪ್ರದರ್ಶನ

7

ಹೊಸ ಲೋಕ ಸೃಷ್ಟಿಸಿದ ಫಲಪುಷ್ಪ ಪ್ರದರ್ಶನ

Published:
Updated:

ಶಿವಮೊಗ್ಗ: ಬಣ್ಣ ಬಣ್ಣದ ಹೂವು, ತರಕಾರಿಗಳಿಂದ ಅಲಂಕೃತವಾಗಿ ಜೀವತಳೆದಂತೆ ಕಾಣುವ ಪ್ರಾಣಿ, ಪಕ್ಷಿಗಳು. ಹೂವಿನ ರಾಶಿಯಿಂದ ನಿರ್ಮಾಣಗೊಂಡ ಕೆಳದಿ ರಾಣಿ ಚೆನ್ನಮ್ಮನ ಕೋಟೆ, ಯುದ್ಧ ವಿಮಾನ, ಕವಿಶೈಲ, ವಿವಿಧ ಜಾತಿಯ ಹಣ್ಣು, ತರಕಾರಿ, ಬಳ್ಳಿ, ಗಿಡಮೂಲಿಕೆ ಸಸ್ಯಗಳು, ಹೂವಿನ ಗಿಡಗಳು..

ಇಂತಹ ನಯನ ಮನೋಹರವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕಾದರೆ ತೋಟಗಾರಿಕೆ ಇಲಾಖೆಯ ಆವರಣಕ್ಕೆ ಹೆಜ್ಜೆಯಿಡಬೇಕು. ತೋಟಗಾರಿಕೆ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ, ಪಶುಪಾಲನಾ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವ ಪ್ರಯುಕ್ತ ತೋಟಗಾರಿಕೆ ಇಲಾಖೆ ಆವರಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ 3 ದಿನಗಳ ಕಾಲ ಆಯೋಜಿಸಿರುವ 58 ನೇ ಫಲಪುಷ್ಪ ಪ್ರದರ್ಶನ ನೋಡುಗರನ್ನು ಹೊಸ ಲೋಕಕ್ಕೆ ಕೊಂಡೊಯ್ಯಲು ಸಜ್ಜುಗೊಂಡಿದೆ.

ಶುಕ್ರವಾರ ಆರಂಭವಾದ ಪ್ರದರ್ಶನದಲ್ಲಿ ವೈವಿಧ್ಯಮಯ ತೋಟಗಾರಿಕೆ ಉತ್ಪನ್ನಗಳನ್ನು ವಿವಿಧ ಬಗೆಯ ಹೂ, ಹಣ್ಣು, ತರಕಾರಿ, ತೋಟದ ಬೆಳೆಗಳು, ಬೊನ್ಸಾಯ್ ಗಿಡಗಳ ಪ್ರದರ್ಶನಗಳು ಗಮನಸೆಳೆದವು. ಆಕರ್ಷಕ ಹೂವಿನಿಂದ ಅಲಂಕೃತಗೊಂಡ ಕೆಳದಿ ಹೂವಿನ ಕೋಟೆ, ಡೈನೋಸರ್‌ ಆಕೃತಿಗಳು ನೋಡುಗರ ಕಣ್ಮನ ಸೆಳೆದವು. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಕಲಾಕೃತಿಗಳ ಸಮೀಪ ನಿಂತು ಛಾಯಾಚಿತ್ರ ತೆಗೆಸಿ ಕೊಂಡು ಸಂಭ್ರಮಿಸಿದರು.

ಪ್ರದರ್ಶನದಲ್ಲಿ ಹೂವಿನ ಫೋಟೊ ಚೌಕಟ್ಟು ನಿರ್ಮಿಸಲಾಗಿದ್ದು, ಪ್ರದರ್ಶನ ವೀಕ್ಷಿಸಲು ಬಂದು ಅನೇಕರು ಅದರೊಳಗೆ ನಿಂತು ಫೋಟೊ ತೆಗೆಸಿಕೊಂಡರು.

ಕೈತೋಟ ಮತ್ತು ತಾರಸಿ ತೋಟಗಳ ಪ್ರಾತ್ಯಕ್ಷಿತೆ, ಅಣಬೆ ಬೇಸಾಯದ ಬಗ್ಗೆ ಸಂಪೂರ್ಣ ತಾಂತ್ರಿಕ ಮಾಹಿತಿ ಪ್ರಾತ್ಯಕ್ಷಿತೆಗಳ ಮೂಲಕ ಒದಗಿಸಲು ಪ್ರತ್ಯೇಕ ಆವರಣ ಮೀಸಲಿರಿಸಲಾಗಿದೆ.

ಜೇನುಹುಳ ಸಾಕಾಣೆ ಬಗ್ಗೆ ತಾಂತ್ರಿಕ ಮಾಹಿತಿ ಒದಗಿಸುವ ಮಳಿಗೆ ಇದೆ. ಇದರೊಂದಿಗೆ ವೈವಿಧ್ಯಮಯ ರೀತಿಯಲ್ಲಿ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿ ರಚಿಸಿರುವ ಆಕರ್ಷಕ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ವಿಶೇಷವಾಗಿ ಮಹಾತ್ಮರ ಕಲಾಕೃತಿಗಳು, ಅಣಬೆಗಳು, ಪ್ರಾಣಿಗಳ ಆವರಣ,

ಹೂಕುಂಡ, ಗಿಡ, ಕೃಷಿ ಹೀಗೆ ಹತ್ತು ಹಲವು ಬಗೆಯ ಹೂವುಗಳು ಕಲಾಕೃತಿಗಳಿಂದ ತೋಟಗಾರಿಕೆ ಇಲಾಖೆ ಅವರಣ

ನೋಡುಗರ ಮನಸೂರೆಗೊಂಡಿದೆ.

ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಲೋಕೇಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ, ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್, ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಹಾಪ್‌ಕಾಮ್ಸ್‌ ಅಧ್ಯಕ್ಷ ಆರ್.ವಿಜಯಕುಮಾರ್, ಕಾಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮೇಯರ್ ಏಳುಮಲೈ ಬಾಬು ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry