ಸಂವಿಧಾನದ ವಿರುದ್ಧ ಅಪಸ್ವರಕ್ಕೆ ಆಕ್ಷೇಪ

7

ಸಂವಿಧಾನದ ವಿರುದ್ಧ ಅಪಸ್ವರಕ್ಕೆ ಆಕ್ಷೇಪ

Published:
Updated:
ಸಂವಿಧಾನದ ವಿರುದ್ಧ ಅಪಸ್ವರಕ್ಕೆ ಆಕ್ಷೇಪ

ಶಿವಮೊಗ್ಗ: ದೇಶದ ಏಕತೆಯ ಮೂಲವಾದ ಸಂವಿಧಾನದ ಆಶಯಗಳ ವಿರುದ್ಧ ಅಪಸ್ವರ ಎತ್ತಲು ಪ್ರಜ್ಞಾವಂತ ನಾಗರಿಕರು ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿರುವ ಸಂವಿಧಾನವು ಸರ್ವರಿಗೂ ಸಮಬಾಳು, ಸಮಪಾಲು ತತ್ವ ಒಳಗೊಂಡಿದೆ. ಸಂವಿಧಾನದ ಆಶಯದಂತೆ ದೇಶದ ಬಹುಸಂಸ್ಕೃತಿ ಗೌರವಿಸುವ ಪರಸ್ಪರ ಧಾರ್ಮಿಕ ಆಚರಣೆಗಳಿಗೆ ಮನ್ನಣೆ ನೀಡುವ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಆದರೆ, ಕೆಲವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಎಲ್ಲರೂ ಜಾಗರೂಕರಾಗಿರಬೇಕು ಎಂದು ಎಚ್ಚರಿಸಿದರು.

ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಿದೆ. ಎಲ್ಲರಿಗೂ ಆಹಾರ ಭದ್ರತೆ, ಶಿಕ್ಷಣ, ಆರೋಗ್ಯ ಸೇವೆಗಳನ್ನು ಪ್ರಾಮಾಣಿಕವಾಗಿ ಒದಗಿಸಿದೆ. ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿಕೊಂಡ ನಗರ, ಗ್ರಾಮೀಣ ಪ್ರದೇಶದ ಜನರಿಗೆ ಹಕ್ಕು ಪತ್ರ ನೀಡಿರುವುದಕ್ಕೆ ಧನ್ಯತಾ ಭಾವ ಮೂಡಿದೆ ಎಂದರು.

‘ಕಳೆದ ಸುಮಾರು 7 ದಶಕಗಳ ಅವಧಿಯಲ್ಲಿ ದೇಶ ಹಲವಾರು ಬದಲಾವಣೆ ಕಂಡಿದೆ. ಎದುರಾದ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ, ದಕ್ಷತೆಯಿಂದ ಎದುರಿಸಿದ್ದೇವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಗಳಿಸಲು ಸಾಧ್ಯವಾಗಿದೆ. ಭವ್ಯ ಭಾರತ ರೂಪಿಸುವಲ್ಲಿ ದೃಢ ಹೆಜ್ಜೆ ಇಟ್ಟಿದ್ದೇವೆ. ದೇಶದ ಪ್ರತಿಯೊಬ್ಬರೂ ಸ್ವಾಭಿಮಾನದ ಬದುಕು ನಡೆಸುವ ವಾತಾವರಣ ನಿರ್ಮಾಣವಾಗಿದೆ’ ಎಂದು ಶ್ಲಾಘಿಸಿದರು.

ಹಲವು ಭಾಷೆ, ಧರ್ಮ, ಪ್ರಾಂತ್ಯ, ಬಹು ಸಂಸ್ಕೃತಿಯ ದೇಶದ ವಿವಿಧತೆಯಲ್ಲೂ ಏಕತೆ ಹೊಂದಿದೆ. ಬಹುಸಂಸ್ಕೃತಿಯೇ ದೇಶದ ಶಕ್ತಿ. ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಸದೃಢ ರಾಷ್ಟ್ರವಾಗಿ ಬೆಳೆದಿದೆ. ನೆಲ, ಜಲ, ಗಡಿ, ಭಾಷೆಯ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸೌಹಾರ್ದದಿಂದ ಬಗೆಹರಿಸಿಕೊಂಡು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿದೆ ಎಂದು ವಿಶ್ಲೇಷಿಸಿದರು.

‘ಪ್ರತಿಯೊಬ್ಬರಿಗೂ ಆಹಾರ, ಆರೋಗ್ಯ, ಶಿಕ್ಷಣದಂತಹ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಮೂಲಕ ಸ್ವಾವಲಂಬನೆಗೆ ನೆರವಾಗಿದ್ದೇವೆ. ಸ್ವಾತಂತ್ರ್ಯೋತ್ತರ ದಿನಗಳಲ್ಲಿ ದೇಶವನ್ನು ಕಾಡುತ್ತಿದ್ದ ಬಡತನ, ಅನಕ್ಷರತೆ ಈಗಿಲ್ಲ. ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ತರ ಸಾಧನೆ ಮಾಡಲಾಗಿದೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಸಾಧನೆ ಕಂಡು ವಿಶ್ವ ಬೆರಗಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ, ಜಿಲ್ಲಾಧಿಕಾರಿ ಎಂ. ಲೋಕೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಸಿಇಒ ಡಾ.ಕೆ. ರಾಕೇಶ್ ಕುಮಾರ್, ಪಾಲಿಕೆ ಆಯುಕ್ತ ಮುಲೈ ಮುಹಿಲನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಉಪಸ್ಥಿತರಿದ್ದರು.

ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ವಿವಿಧ ಶಾಲೆಗಳ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡಿತು.

ಸಂತ್ರಸ್ತರಿಗೆ ಭೂಮಿ: ಸಾರ್ಥಕ ಕೆಲಸ

ಶರಾವತಿ ಮುಳುಗಡೆ ಸಂತ್ರಸ್ತರಿಗೆ 5 ದಶಕಗಳ ನಂತರ ಭೂ ಹಕ್ಕು ನೀಡುತ್ತಿರುವುದು ಅತ್ಯಂತ ಸಾರ್ಥಕ ಕೆಲಸ ಎಂದು ಸಚಿವ ಕಾಗೋಡು ತಿಮ್ಮಪ್ಪ ಭಾವುಕರಾದರು.

ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನ್ಯಾಯ ದೊರಕಿಸಿದೆ. ಅರಣ್ಯ ಇಲಾಖೆ 8 ಸಾವಿರ ಎಕರೆ ಭೂಮಿ ಬಿಡುಗಡೆ ಮಾಡಿದೆ. 4 ಸಾವಿರ ಎಕರೆಯ ಸಾಗುವಳಿ ಪತ್ರ ಈಗಾಗಲೇ ನೀಡಲಾಗಿದೆ. ಉಳಿದ ಭೂಮಿಯನ್ನೂ ಶೀಘ್ರ ಸ್ವಾಧೀನಕ್ಕೆ ನೀಡಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಭರವಸೆ ನೀಡಿದರು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್, ಶಿವಮೊಗ್ಗ ಜಿಲ್ಲಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ನೌಕರರು ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಯಾರೂ ಒತ್ತಡ ಹಾಕಿಲ್ಲ. ಅದು ಆಡಳಿತದ ವಿಷಯ. ಚುನಾವಣಾ ಆಯೋಗ ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲ ಎಂದರು.

ಸರ್ವೋತ್ತಮ ಪ್ರಶಸ್ತಿ

ಉತ್ತಮ ಸೇವೆ ಸಲ್ಲಿಸಿದ ಜಿಲ್ಲೆಯ ಅಧಿಕಾರಿ, ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಸಾಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ. ಅಚ್ಯುತ್, ಜಿಲ್ಲಾ ಪಂಚಾಯ್ತಿ ಸೂಪರಿಂಟೆಂಡೆಂಟ್‌ ಲಕ್ಷ್ಮಣ, ಸೊರಬ ತಾಲ್ಲೂಕು ತಲ್ಲೂರು ಗ್ರಾಮ ಪಂಚಾಯ್ತಿ ಪಿಡಿಒ ನೀಲಪ್ಪ ಬುಟ್ಟಣ್ಣನವರ್, ಜಿಲ್ಲಾಧಿಕಾರಿ ಕಚೇರಿಯ ಶೋಭಾ ಲಕ್ಷ್ಮಿ, ರಾಜ್ಯ ಲೆಕ್ಕ ಪತ್ರ ಇಲಾಖೆಯ ರಾಮಚಂದ್ರ ಅವರು ಪ್ರಶಸ್ತಿ ಪುರಸ್ಕೃತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry