7

ಅಭ್ಯರ್ಥಿ ನೋಡಿ ಬಿಜೆಪಿ ಮಣೆ ಹಾಕುವುದಿಲ್ಲ

Published:
Updated:
ಅಭ್ಯರ್ಥಿ ನೋಡಿ ಬಿಜೆಪಿ ಮಣೆ ಹಾಕುವುದಿಲ್ಲ

ಶಿವಮೊಗ್ಗ:  ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ. ಅಭ್ಯರ್ಥಿ ಗಳಿಗಿಂತಲೂ ಕಾರ್ಯಕರ್ತರನ್ನೇ ನಂಬಿ ಪಕ್ಷ ಚುನಾವಣೆ ಎದುರಿಸುತ್ತದೆ. ಹಾಗಾಗಿ, ಅಭ್ಯರ್ಥಿ ಆಯ್ಕೆ ಕುರಿತು ಅವಸರ ಇಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

ಅಭ್ಯರ್ಥಿ ಘೋಷಣೆಗೂ, ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. 224 ವಿಧಾನಸಭಾ ಕ್ಷೇತ್ರದಲ್ಲೂ ಸರ್ವೆ ಕಾರ್ಯ ನಡೆಯುತ್ತಿದೆ. ವರದಿ ಸಲ್ಲಿಕೆಯಾದ ನಂತರ ವರಿಷ್ಠರು ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲೂ ಹಲವರು ಆಕಾಂಕ್ಷಿಗಳು ಇದ್ದಾರೆ. ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಕುರಿತು ವರಿಷ್ಠರು ನಿರ್ಧರಿಸಲಿದ್ದಾರೆ ಎಂದರು.

ಖರ್ಗೆ, ಪರಮೇಶ್ವರ ಏಕೆ ಭಾಗಿಯಾಗಿಲ್ಲ?: ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿರುವ ಸಾಧನಾ ಸಮಾವೇಶದಲ್ಲಿ ಆ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸೇರಿದಂತೆ ಯಾವ ನಾಯಕರೂ ಭಾಗವಹಿಸುತ್ತಿಲ್ಲ. ಸರ್ಕಾರದ ಹಣ ಬಳಸಿಕೊಂಡು ಮುಖ್ಯಮಂತ್ರಿ ಸಮಾವೇಶ ನಡೆಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಪ್ರೇರಿತ ಬಂದ್: ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿ ನಡೆದ ಕರ್ನಾಟಕ ಬಂದ್ ಸಂಪೂರ್ಣ ವಿಫಲವಾಗಿದೆ. ಅದು ಕಾಂಗ್ರೆಸ್ ಪ್ರೇರಿತ ಬಂದ್ ಎಂದು ಲೇವಡಿ ಮಾಡಿದರು.

ಬಿಜೆಪಿ ಪರಿವರ್ತನಾ ಯಾತ್ರೆ ಯಶಸ್ವಿ ಸಹಿಸದೇ ಕಾಂಗ್ರೆಸ್‌ ಬಂದ್‌ ನಾಟಕವಾಡಿದೆ. ಜ.25ರಂದು ನಡೆಯುವ ಮೈಸೂರಿನಲ್ಲಿ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಭಾಗವಹಿಸುವುದು ಖಚಿತವಾದ ನಂತರವೇ ಬಂದ್ ದಿನಾಂಕ ಬದಲಾವಣೆ ಮಾಡಲಾಗಿದೆ. ಈ ಕೃತ್ಯದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆ ಎಂದು ದೂರಿದರು.

ಗೋವಾ ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿಲ್ಲ. ಗೋವಾ ಮುಖ್ಯಮಂತ್ರಿ ನೀರು ಕೊಡುವುದಾಗಿ ಹೇಳಿದರೂ, ಸಮಸ್ಯೆ ಸೃಷ್ಟಿಯಾಗುತ್ತದೆ. ಅಲ್ಲಿನ ಸರ್ಕಾರ ಕಳೆದುಕೊಳ್ಳುವುದಕ್ಕೆ ಪಕ್ಷವೂ ಇಷ್ಟಪಡುವುದಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿ, ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ, ಕಾಂಗ್ರೆಸ್ ನಾಯಕರಿಗೆ ಇದು ಬೇಕಿಲ್ಲ ಎಂದು ಕುಟುಕಿದರು.

‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ ನೀಡುವ ಮೊದಲು ಮಹದಾಯಿ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಫೆ.4 ರಂದು ಪ್ರಧಾನಿ ನರೇಂದ್ರ ಮೋದಿ ಬರುವಾಗ ಕಾಂಗ್ರೆಸ್ ಪ್ರತಿಭಟನೆ ನಡೆಸುವುದಕ್ಕೆ ಮುಂದಾದರೆ ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಫೆ. 4ಕ್ಕೆ ಪರಿವರ್ತನಾ ಸಮಾರೋಪ

ಪರಿವರ್ತನಾ ಯಾತ್ರೆ ಸಮಾರೋಪ ಫೆ. 4 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಾರೆ. ರಾಜ್ಯದ 55 ಸಾವಿರ ಬೂತ್‌ಗಳಿಂದ 5 ಲಕ್ಷ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುತ್ತಾರೆ. ಈ ಸಮಾವೇಶ ವಿಧಾನಸಭಾ ಚುನಾವಣೆಯ ಉದ್ಘಾಟನೆ ರೀತಿ ಇರುತ್ತದೆ ಎಂದು ವಿವರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry