ದೊಡ್ಡರಂಗೇಗೌಡರಿಗೆ ಪದ್ಮಶ್ರೀ: ಜಿಲ್ಲೆಯ ಜನರ ಸಂತಸ

7

ದೊಡ್ಡರಂಗೇಗೌಡರಿಗೆ ಪದ್ಮಶ್ರೀ: ಜಿಲ್ಲೆಯ ಜನರ ಸಂತಸ

Published:
Updated:

ತುಮಕೂರು: ‘ಮನುಜ’ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಯವರೇ ಆದ ಪ್ರೊ.ದೊಡ್ಡರಂಗೇಗೌಡ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಸೂಲಗಿತ್ತಿ ನರಸಮ್ಮ ಮತ್ತು ದೊಡ್ಡರಂಗೇಗೌಡರು ಜಿಲ್ಲೆಯ ಗರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಕೆ. ರಂಗೇಗೌಡರು, ಅಕ್ಕಮ್ಮ ದಂಪತಿಯ ಪುತ್ರರಾಗಿ ಮಧುಗಿರಿ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ 1946 ಫೆಬ್ರುವರಿ 7ರಂದು ದೊಡ್ಡರಂಗೇಗೌಡರು ಜನಿಸಿದರು.  ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.

‘ಮಾವು–ಬೇವು’ ಕೃತಿಯಿಂದ ಅವರ ಸಾಹಿತ್ಯ ಆರಂಭವಾಯಿತು. 'ಕುವೆಂಪು ಮತ್ತು ಬೇಂದ್ರೆ ಹಾಗೂ ಕನ್ನಡದಲ್ಲಿ ರಮ್ಯವಾದ', 'ಪ್ರೀತಿ ಪ್ರಗಾಥ', 'ಕಣ್ಣು ನಾಲಗೆ ಕಡಲು', 'ಕುದಿಯುವ ಕುಲುಮೆ' ಹಾಗೂ 'ಪ್ರವಾಸಿ ಪದ್ಯಗಳು' ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ. ಚಿತ್ರಸಾಹಿತ್ಯ ಕ್ಷೇತ್ರದಲ್ಲಿಯೂ ಗೌಡರು ಪ್ರಸಿದ್ಧರಾದವರು ‘ಆಲೆಮನೆ’, ‘ಅರುಣರಾಗ’, ‘ಪರಸಂಗದ ಗೆಂಡೆ ತಿಮ್ಮ’, ‘ಪಡುವಾರಳ್ಳಿ ಪಾಂಡವರು’ ಹೀಗೆ ಹಲವು ಚಿತ್ರಗಳಿಗೆ ಸಾಹಿತ್ಯವನ್ನು ನೀಡಿದ್ದಾರೆ. ಅವರ ಚಿತ್ರ ಸಾಹಿತ್ಯದಲ್ಲಿ ನೆಲದ ಸೊಗಡು ಎದ್ದು ಕಾಣುತ್ತದೆ.

ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೆ…ಎನ್ನುವ ‘ಪರಸಂಗದ ಗೆಂಡೆ ತಿಮ್ಮ’ ಚಿತ್ರದ ಹಾಡು ಈಗಲೂ ಪ್ರಸಿದ್ಧವಾದ ಗೀತೆ. ಗೌಡರಿಗೆ ಈ ಚಿತ್ರ ಹೆಚ್ಚಿನ ಹೆಸರನ್ನು ತಂದುಕೊಟ್ಟಿತು. ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.

ಗೌಡರ ‘ಹಳ್ಳಿ ಸೊಗಡು’

ದೊಡ್ಡರಂಗೇಗೌಡರ ಕುರಿತು ನಿರ್ದೇಶಕ ಎಂ.ಆರ್.ಕಪಿಲ್ 'ಹಳ್ಳಿ ಸೊಗಡು' ಶೀರ್ಷಿಕೆಯ ಚಿತ್ರ ನಿರ್ದೇಶಿಸಿದ್ದಾರೆ. ಇದು ಸಂಗೀತಮಯ ಚಿತ್ರ. ಕುರುಬರಹಳ್ಳಿಯಲ್ಲಿ ಚಿತ್ರೀಕರಣ ಸಹ ಆಗಿದೆ.

‘ದೊಡ್ಡರಂಗೇಗೌಡ ಅವರ 70 ನೇ ಹುಟ್ಟುಹಬ್ಬಕ್ಕೆ ಉಡುಗೊರೆ. ಈ ಚಿತ್ರ’ ಎನ್ನುವರು ನಿರ್ದೇಶಕರು. ದೊಡ್ಡರಂಗೇಗೌಡ ಕೂಡ ಅತಿಥಿ ನಟರಾಗಿದ್ದಾರೆ. ಈ ಹಿಂದೆ ‘ಆದಿಚುಂಚನಗಿರಿ ಮಹಾತ್ಮೆ’ ಚಿತ್ರದಲ್ಲಿ ಗೌಡರು ನಟಿಸಿದ್ದರು. ಗೌಡರ ಪುತ್ರ ಭರತ್ ಸಹ ಚಿತ್ರ ಸಾಹಿತಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry