ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸಮಗ್ರತೆಯೇ ಸಂವಿಧಾನದ ಹೆಗ್ಗಳಿಕೆ

Last Updated 27 ಜನವರಿ 2018, 7:16 IST
ಅಕ್ಷರ ಗಾತ್ರ

ತುಮಕೂರು: ಧರ್ಮ, ಬಣ್ಣ, ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ವೈವಿಧ್ಯತೆಯ ನಡುವೆಯು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ನಮ್ಮ ಸಂವಿಧಾನದ ಹೆಗ್ಗಳಿಕೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೇಳಿದರು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದ್ವಜಾರೋಹಣ ಮಾಡಿ ಅವರು ಮಾತನಾಡಿದರು.

‘ನಮ್ಮ ಸಂವಿಧಾನವು ಆಡಳಿತದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಜವಾಬ್ದಾರಿಗಳನ್ನು ನಿಖರವಾಗಿ ಗುರುತಿಸಿದೆ. ಭಾರತ ಸಂವಿಧಾನವು ಪ್ರಪಂಚದ ಇತರೇ ರಾಷ್ಟ್ರಗಳಿಗೆ ಮಾದರಿಯಾದ ಸಂವಿಧಾನವಾಗಿದೆ. ಪ್ರಪಂಚದ ಹಲವಾರು ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿ, ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿದ್ದು, 29 ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ ವ್ಯವಸ್ಥೆಯಾಗಿದೆ. ಇಲ್ಲಿ ಜನಸಾಮಾನ್ಯರಿಗೂ, ಶ್ರೀಮಂತರಿಗೂ ಸರಿಸಮಾನವಾದ ಹಕ್ಕುಗಳು ದೊರೆಯುವಂತೆ ಸಂವಿಧಾನ ರೂಪಿಸಲಾಗಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಇತರೆ ದೇಶಗಳಿಗೆ ಮಾದರಿಯಾಗಿದೆ’ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಹಾಗೂ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಮಾತು ಕೇವಲ ಘೋಷಣೆಯಾಗಿ ಉಳಿಯದಂತೆ ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸಮೃದ್ಧ ಸಮಾಜದ ವ್ಯವಸ್ಥೆಯನ್ನು ರೂಪಿಸುವಲ್ಲಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಏಳಿಗೆಗೆ ವಿಶೇಷ ಗಮನ ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರವು ಕೈಗೊಂಡಿರುವ ಹಲವಾರು ಅಭಿವೃದ್ಧಿ ಯೋಜನೆಗಳನ್ನು ವಿವರಿಸಿದರು.

ಆಕರ್ಷಕ ಪಥ ಸಂಚಲನ: ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಪೊಲೀಸ್‌ ತರಬೇತಿ ಶಾಲೆ, ಜಿಲ್ಲಾ ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಮತ್ತು ಹಲವು ಶಾಲಾ ಕಾಲೇಜು ಎನ್‌ಸಿಸಿ, ಸ್ಕೌಟ್ಸ್‌ ಗೈಡ್ಸ್‌ ಮತ್ತು ಸೇವಾದಳದ ತಂಡಗಳು ನಡೆಸಿದ ಕವಾಯತು ಆಕರ್ಪಕವಾಗಿತ್ತು.

ರೆಡ್‌ಕ್ರಾಸ್‌ ಸಂಸ್ಥೆಯ ಶ್ರವಣ ದೋಷವುಳ್ಳ ಮಕ್ಕಳ ಶಾಲೆಯ ತಂಡಗಳು, ನಿವೃತ್ತ ಯೋಧರ ತಂಡ ಮತ್ತು ವಾಸವಿ ವಿದ್ಯಾ ಪೀಟದ ಬ್ಯಾಂಡ್‌ ತಂಡಗಳು ವಿಶೇಷ ಗಮನ ಸೆಳೆದವು.

ಕವಾಯತು ತುಕಡಿಗಳ ಬಹುಮಾನ: ಉತ್ತಮ ಕವಾಯತು ಪ್ರದರ್ಶನಕ್ಕಾಗಿ ಪೊಲೀಸ್‌ ವಿಭಾಗದಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಜಿಲ್ಲಾ ಪೊಲೀಸ್‌ ತರಬೇತಿ ಶಾಲೆಯ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ತುರ್ತು ಸೇವೆಗಳು ಮತ್ತು ಗೃಹ ರಕ್ಷಕ ದಳದ ವಿಭಾಗದಿಂದ ಜಿಲ್ಲಾ ಅಗ್ನಿಶಾಮಕ ದಳದ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಜಿಲ್ಲಾ ಗೃಹ ರಕ್ಷಕ ದಳದ ತಂಡ ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಎನ್‌ಸಿಸಿ ವಿಭಾಗದಲ್ಲಿ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ತಂಡ ಪ್ರಥಮ, ಸಿದ್ಧಗಂಗಾ ಕಾಲೇಜು ಬಾಲಕಿಯರ ತಂಡ ದ್ವಿತೀಯ ಸ್ಥಾನ ಮತ್ತು ಎಂಪ್ರೆಸ್‌ ಬಾಲಕಿಯರ ಪದವಿ ಪೂರ್ವ ಕಾಲೇಜು ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡವು. ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಭಾಗದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸ್ಕೌಟ್ಸ್‌ ಟ್ರೂಪ್‌, ಆಕ್ಸಫರ್ಡ್‌ ಶಾಲೆಯ ಬಾಲಕರ ತಂಡ, ಆಚಾರ್ಯ ವಿದ್ಯಾಪೀಠದ ಬಾಲಕಿಯರ ತಂಡ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡವು.

ಕಲರ್‌ ಪಾರ್ಟಿ ವಿಭಾಗದಲ್ಲಿ ಸೆಂಟ್‌ ಮೇರಿಸ್‌ ಪ್ರೌಢಶಾಲೆ ಪ್ರಥಮ ಮತ್ತು ಕಿಡ್ಸ್‌ ಇಂಟರ್‌ನ್ಯಾಷನಲ್‌ ಶಾಲೆಯ ತಂಡ ದ್ವಿತೀಯ ಬಹುಮಾನ ಪಡೆದುಕೊಂಡರೆ, ಸೇವಾದಳದ ವಿಭಾಗದಲ್ಲಿ ಕನ್ನಿಕ ಆಂಗ್ಲ ಶಾಲೆ ಪ್ರಥಮ, ಬಾಪೂಜಿ ಪಿಯು ಕಾಲೇಜಿನ ಬಾಲಕರ ತಂಡ  ದ್ವಿತೀಯ ಮತ್ತು ವಾಸವಿ ವಿದ್ಯಾಪೀಠದ ಬಾಲಕರ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡವು.‌

ದೇಶಭಕ್ತಿ ಹೆಚ್ಚಿಸಿದ ಚಿಣ್ಣರು: ತಿರಂಗ ಧ್ವಜ ಹಿಡಿದ ಮಕ್ಕಳಲ್ಲಿ ಕ್ರೀಡಾಂಗಣದಲ್ಲಿ ಸೇರಿದ್ದ ಸಾರ್ವಜನಿಕರಲ್ಲಿ ದೇಶಪ್ರೇಮವನ್ನು ಬಡಿದೆಬ್ಬಿಸುವಂತೆ ದೇಶಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿದರು.

ಎಂಪ್ರೆಸ್‌ ಬಾಲಕಿಯರ ಪ್ರೌಢಶಾಲೆಯ ಸುಮಾರು 750 ವಿದ್ಯಾರ್ಥಿನಿಯರು ‘ನಮ್ಮ ತಾಯಿ ನಮ್ಮ ತಂದೆ ಎಲ್ಲ ನಮ್ಮ ದೇಶ’ ಎನ್ನುವ ಹಾಡಿಗೆ ಹೆಜ್ಜೆ ಹಾಕಿದಾಗ ಕ್ರೀಡಾಂಗಣದಲ್ಲಿ ಹರ್ಷೋದ್ಗಾರ ಮೂಡಿತು. ನಂತರ ರೇಣುಕಾ ವಿದ್ಯಾಪೀಠದ 350 ವಿದ್ಯಾರ್ಥಿಗಳು ‘ಹಿಂದೂಸ್ತಾನ ಮೇರಾ ಜಾನ್‌ ಹೇ’ ಗೀತೆಗೆ ನೃತ್ಯ ಮಾಡಿದರೆ, ಸರ್ವೋದಯ ಶಾಲೆ ಮತ್ತು ಸೋಮೇಶ್ವರ ಶಾಲೆಯ ಸುಮಾರು 650 ವಿದ್ಯಾರ್ಥಿಗಳು ‘ಜೈ ಹೋ’ ಗೀತೆಗೆ ಹೆಜ್ಜೆ ಹಾಕಿದರು. ಡಾನ್‌ ಬಾಸ್ಕೋ ಶಾಲೆಯ ವಿದ್ಯಾರ್ಥಿಗಳು ‘ಏ ಮೇರೆ ಭಾರತ್‌ ಮಹಾನ್‌ ಹೇ’ ಎನ್ನುವ ದೇಶಭಕ್ತಿ ಗೀತೆಯ ರೂಪಕವನ್ನು ಪ್ರದರ್ಶಿಸಿದರು.

ಮೈ ನವಿರೇಳಿಸಿದ ಅಣಕು ಯುದ್ಧ ಪ್ರದರ್ಶನ

ಮಿಲಿಟರಿ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು, ಕೈಯಲ್ಲಿ ಬಂದೂಕು, ಎದುರುಗಡೆ ಶತ್ರುಗಳ ಅಡಗು ತಾಣಗಳು, ಶತ್ರುಗಳಿಗೆ ಸ್ಪಷ್ಟಚಿತ್ರಣ ಸಿಗಬಾರದು ಎನ್ನುವ ಉದ್ದೇಶದಿಂದಲೇ ಹಾಕಲಾಗಿದ್ದ ಹೊಗೆ, ಹೀಗೆ ಒಂದು ಯುದ್ಧ ಭೂಮಿಯೇ ಜನರ ಕಣ್ಣ ಮುಂದೆ ಬಂದಿತ್ತು.

ಹೌದು, 69ನೇ ಗಣರಾಜ್ಯೋತ್ಸವದ ಆಚರಣೆಗೆಂದು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸೇರಿದ್ದ ಜನರು ಈ ಯುದ್ಧದ ಸನ್ನಿವೇಶದ ಅಣಕು ಪ್ರಾತ್ಯಕ್ಷಿಕೆಯನ್ನು ನೋಡಿ ಕಣ್ತುಂಬಿಕೊಂಡರು.

ಸಮವಸ್ತ್ರ ಧರಿಸಿದ ಎನ್‌ಸಿಸಿ ಕೆಡೆಟ್ಸ್‌ಗಳು ಕೈಯಲ್ಲಿ ಬಂದೂಕು ಹಿಡಿದು ಶತ್ರು ಪಾಳಯದ ಮೇಲೆ ಎರಗುತ್ತಿದ್ದಂತೆ, ನೆರೆದಿದ್ದ ಸಾರ್ವಜನಿಕರ ರೋಮ ರೋಮಗಳು ನೆಟ್ಟಗಾಗತೊಡಗಿದ್ದವು. ವಿದ್ಯಾರ್ಥಿಗಳಂತೂ, ಜನರು ‘ಬಾರ್ಡರ್‌’ ಸಿನಿಮಾವನ್ನು ಕುತೂಹಲದಂತೆ ವೀಕ್ಷಿಸಿದಂತೆ ಈ ಅಣಕು ಪ್ರದರ್ಶನವನ್ನು ವೀಕ್ಷಿಸಿದರು.

ಅಣಕು ಪ್ರದರ್ಶನದ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್‌ ರಾಮಲಿಂಗಾರೆಡ್ಡಿ ಅವರು ಸೇನೆಯ ವಿವಿಧ ನಮೂನೆಗಳನ್ನು ಜನರಿಗೆ ಪರಿಚಯಿಸಿಕೊಟ್ಟರು. ಯುದ್ಧದ ಸಂದರ್ಭದಲ್ಲಿ ಯಾವ ರೀತಿಯಾಗಿ ‘ಸಪೋರ್ಟ್‌ ಗ್ರೂಪ್‌’ನ ಸೈನಿಕರು ‘ಹಜಾರ್ಡ್‌ ಗ್ರೂಪ್‌’ನ ಸೈನಿಕರಿಗೆ ಪೂರಕವಾಗಿ ಕೆಲಸ ಮಾಡುತ್ತಾರೆ ಎನ್ನುವುದನ್ನು ತಿಳಿಸಿಕೊಟ್ಟರು.

ಕಡಿದಾದ ಮತ್ತು ದಟ್ಟ ಅರಣ್ಯ ಪ್ರದೇಶಗಳಲ್ಲಿ, ಬಯಲು ಪ್ರದೇಶಗಳಲ್ಲಿ ಸೈನಿಕರು ಯಾವ ರೀತಿಯಾಗಿ ರಕ್ಷಣಾತ್ಮಕ ತಂತ್ರಗಳನ್ನು ಬಳಸಿಕೊಂಡು ಯುದ್ಧದಲ್ಲಿ ತೊಡಗುತ್ತಾರೆ ಎನ್ನುವುದನ್ನು ತೋರಿಸಲಾಯಿತು. ಅಂತೂ ಯುದ್ಧದ ಅಣಕು ಪ್ರದರ್ಶನದ ಅಂತ್ಯದ ವೇಳೆಗೆ ನಮ್ಮ ದೇಶದ ಗಡಿಯಲ್ಲಿ ಯಾವ ರೀತಿಯಾಗಿ ಯುದ್ಧ ನಡೆಯುತ್ತದೆ ಎನ್ನುವ ಬಗ್ಗೆ ಜನರಿಗೆ ಒಂದು ಸ್ಪಷ್ಟ ಚಿತ್ರಣ ಮೂಡಿತು. ಪ್ರದರ್ಶನದ ನಂತರ ಎನ್‌ಸಿಸಿ ಕೆಡೆಟ್‌ಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ವಿದ್ಯಾರ್ಥಿಗಳು ಮುಗಿಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT