ಉಡುಪಿಯಲ್ಲಿ ಯುವ ಚೈತನ್ಯಕ್ಕೆ ಚಾಲನೆ

6

ಉಡುಪಿಯಲ್ಲಿ ಯುವ ಚೈತನ್ಯಕ್ಕೆ ಚಾಲನೆ

Published:
Updated:

ಉಡುಪಿ: ಆರೋಗ್ಯಯುತ ಸಮಾಜದ ನಿರ್ಮಾಣ ಹಾಗೂ ಸಾಮಾಜಿಕ ಬಾಂಧವ್ಯವನ್ನು ಉತ್ತಮ ಪಡಿಸುವ ಉದ್ದೇಶದಿಂದ ಸರ್ಕಾರ ‘ಯುವ ಚೈತನ್ಯ’ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಕ್ರೀಡೆ ಮತ್ತು ಯುವಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸುವ ಉದ್ದೇಶದಿಂದ ಜಾರಿಗೆ ತಂದ ನೂತನ ಯೋಜನೆಗೆ ಉಡುಪಿಯ ಬೀಡಿನಗುಡ್ಡೆ ಬಯಲುರಂಗ ಮಂದಿರದಲ್ಲಿ ಅವರು ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವ ಚೈತನ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಗೆ ಪ್ರತಿ ವರ್ಷ ₹20 ಕೋಟಿ ಅನುದಾನ ಮಂಜೂರಾಗಲಿದೆ. ಒಟ್ಟು ಮೂರು ಹಂತದಲ್ಲಿ 15 ಸಾವಿರ ಯುವ ಸಂಘಗಳಿಗೆ ಕಿಟ್‌ ವಿತರಿಸಲಾಗುತ್ತದೆ. ಪ್ರಥಮ ಹಂತದಲ್ಲಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5 ಸಾವಿರ ಸಂಘಗಳಿಗೆ ಕ್ರೀಡಾ ಕಿಟ್‌ ವಿತರಿಸಲಾಗುತ್ತದೆ ಎಂದರು.

ಕ್ರೀಡಾ ಕಿಟ್‌ನಲ್ಲಿ ಮೂರು ವಾಲಿಬಾಲ್, ನೆಟ್, ಎರಡು ಕಂಬಗಳು, ಎರಡು ತ್ರೋಬಾಲ್, ಮೂರು ಫುಟ್‌ಬಾಲ್, ಎರಡು ಶಟಲ್‌ ರಾಕೆಟ್, ಮೂರು ಕ್ರಿಕೆಟ್ ಬ್ಯಾಟ್, ಎರಡು ಸೆಟ್ ಸ್ಟಂಪ್, ಆರು ಟೆನಿಸ್ ಬಾಲ್, ಆರು ಟೆನಿಕಾಯಿಟ್ ರಿಂಗ್ ಮತ್ತು ಪರಿಕರಗಳನ್ನು ತುಂಬಿಸಿಕೊಳ್ಳಲು ದೊಡ್ಡ ಬ್ಯಾಗ್‌ನ್ನು ನೀಡಲಾಗಿದೆ. ಅಲ್ಲದೆ ಸಾಗಾಟ ವೆಚ್ಚ ₹500 ಕೂಡ ಸಂಘಗಳಿಗೆ ನೀಡಲಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ ನಿಂಬರಗಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry