ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಪೂರ್ವಾಪರ ನೋಡಿ ಮತ ಹಾಕಿ

Last Updated 27 ಜನವರಿ 2018, 7:19 IST
ಅಕ್ಷರ ಗಾತ್ರ

ಹೆಬ್ರಿ: ಪ್ರಣಾಳಿಕೆ ನೋಡಿ ಮತದಾನ ಮಾಡಬಾರದು. ಪಕ್ಷದವರು ಹೇಳಿದ ಕೆಲಸ ಮಾಡಿದ್ದಾರೆಯೇ, ಮಾಡುವವರೇ ಎಂದು ಆಲೋಚಿಸಬೇಕು. ಅಭ್ಯರ್ಥಿಗಳ ಪೂರ್ವಾಪರ ತಿಳಿದು ಮತದಾನ ಮಾಡಬೇಕು. ಯುವ ಸಮುದಾಯ ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು...

ಇದು ಘೋಷಿತ ಹೆಬ್ರಿ ತಾಲ್ಲೂಕಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ‘ಪ್ರಜಾವಾಣಿ’ ಹಮ್ಮಿಕೊಂಡಿದ್ದ ‘ವೋಟ್ ಮಾಡೋಣ ಬನ್ನಿ...’ ಅಭಿಯಾನ ಕಾರ್ಯಕ್ರಮದಲ್ಲಿ ಯುವ ಮನಸ್ಸುಗಳಿಂದ ವ್ಯಕ್ತವಾದ ಒಟ್ಟು ಅಭಿಪ್ರಾಯ. ಈ ಪೈಕಿ ಕೆಲವರು ಹಿಂದಿನ ಚುನಾವಣೆಯಲ್ಲಿ ತಮ್ಮ ಮೊದಲ ಮತ ಚಲಾಯಿಸಿದ್ದರೆ, ಇನ್ನು ಹಲವರು ಮತದಾರರ ಗುರುತಿನ ಚೀಟಿ ಪಡೆದು ಮುಂದಿನ ಚುನಾವಣೆಯಲ್ಲಿ ತಮ್ಮ ಮೊದಲ ಮತ ಹಾಕುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಹೊಸ ಮತದಾರರು ಬದಲಾವ ಣೆಯ ವ್ಯವಸ್ಥೆಗೆ ಮನಸ್ಸು ಮಾಡಬೇಕು. ಆ ಮೂಲಕ ಭ್ರಷ್ಟಾಚಾರ ಕಡಿಮೆಯಾಗಿ ಅತ್ಯುತ್ತಮ ರಾಜಕೀಯ ವ್ಯವಸ್ಥೆ ನಿರ್ಮಾ ಣವಾಗಬೇಕು. ಯುವಕರು ಮತದಾನ ಮಾಡುವುದರ ಜತೆಗೆ ಇತರರೂ ಮತದಾನ ಮಾಡಲು ಪ್ರೇರೇಪಿಸಬೇಕು. ಟೀವಿ ಮಾಧ್ಯಮಗಳಲ್ಲಿ ಬರುವ ಚರ್ಚೆ ಯನ್ನು ನೋಡಿ ಮತ ಹಾಕಬಾ ರದು. ಮಾಧ್ಯಮಗಳಲ್ಲಿ ಎಲ್ಲವನ್ನೂ ವೈಭವಿಕರಿಸಿ ತೋರಿಸುತ್ತಾರೆ. ಪರಿಸ್ಥಿ ತಿಯನ್ನು ಅರ್ಥ ಮಾಡಿಕೊ ಳ್ಳಬೇಕು ಎಂಬ ಆಶಯ ಕೇಳಿಬಂತು.

ಮತದಾನ ಹಕ್ಕು ಅಲ್ಲ, ಅದು ನಮ್ಮ ನೈತಿಕ ಜವಾಬ್ದಾರಿ. ಅನೇಕರು ತಮ್ಮ ಬಲಿದಾನದ ಮೂಲಕ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು. ಈಗಿನ ಅನೇಕ ರಾಜಕಾರಣಿಗಳು ನಮ್ಮನ್ನು ಬಲಿಕೊಟ್ಟು ಅವರು ಬದುಕುತ್ತಿದ್ದಾರೆ. ರಾಜಕೀಯ ವ್ಯವಸ್ಥೆಯೇ ಸಂಪೂರ್ಣ ಹಾಳಾಗಿದೆ. ನಾವು ಒಳ್ಳೆಯವರನ್ನು ಯೋಚಿಸಿ ಆರಿಸಿ ಮತ ಹಾಕಬೇಕು. ಮತದಾನ ಅತ್ಯಂತ ಪ್ರಮುಖವಾಗಿದ್ದು ಕಡ್ಡಾಯ ಮತದಾನವಾಗಬೇಕು ಎಂಬ ಸದಾಶಯ ವ್ಯಕ್ತವಾಯಿತು.

ದೇಶದಲ್ಲಿ ಪರಿವರ್ತನೆ ತರಲು ಅಹಿಂಸಾತ್ಮಕವಾದ ಪ್ರಭಾವಶಾಲಿ ವ್ಯವಸ್ಥೆ ಮತದಾನ. ಆಮಿಷಗಳಿಗೆ ಬಲಿಯಾಗದೇ ನಮಗೆ ಬೇಕಾದ ಅರ್ಹ ವ್ಯಕ್ತಿಯನ್ನು ನೋಡಿ ಮತ ಹಾಕಬೇಕು. ಮಾತು ಕೇಳಿ ಕೇಳಿ ಸಾಕಾಗಿದೆ. ಎಲ್ಲರೂ ಮಾತಾಡುವವರೇ ಆಗಿ ದ್ದಾರೆ. ಎಲ್ಲರು ಮಾತಾಡಿದರೇ ಕೆಲಸ ಮಾಡುವವರು ಯಾರು? ನಮ್ಮ ದೇಶ ದಲ್ಲಿ ಯಾರು ಏನೂ ಬೇಕಾದರೂ ಮಾತ ನಾಡಬಹುದು ಎಂಬ ಸ್ಥಿತಿ ನಿರ್ಮಾ ಣವಾಗಿದೆ. ಮಾತುಗಳು ಮುಂದೆ ದೊಡ್ಡ ಸಮಸ್ಯೆಗಳಿಗೆ ದಾರಿ ಮಾಡಿಕೊಡ ಬಹುದು ಎಂಬ ಆತಂಕ ಯುವ ಮನಸ್ಸು ಗಳಿಂದ ವ್ಯಕ್ತವಾಯಿತು.

ಮತದಾನದಲ್ಲಿ ಗೊಂದಲ ವಿರಬಾರದು ನಮ್ಮ ತಿರ್ಮಾನವೇ ಅಂತಿಮವಾಗಬೇಕು. ಯುವಜನತೆ ಜಾತಿ, ಮತ, ಪಂಗಡ, ಧರ್ಮ ನೋಡಿ ಮತ ಹಾಕಬಾರದು. ಇದ್ದುದರಲ್ಲಿ ಅತ್ಯುತ್ತಮ ವ್ಯಕ್ತಿ ನೋಡಬೇಕು ಎಂಬ ಅಭಿಪ್ರಾಯ ಕೇಳಿಬಂತು.

ಯುವ ಮನಸ್ಸುಗಳ ಅಭಿಪ್ರಾಯಗಳಿಗೆ ಪೂರಕವಾಗಿ ಧ್ವನಿ ಸೇರಿಸಿದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲ ಪ್ರೊ. ಎಂ.ಆರ್.ಮಂಜುನಾಥ್ ಅವರು, ‘ಮತದಾನದ ವ್ಯವಸ್ಥೆಗೆ ಹೆಚ್ಚು ಬಲ ಬರಲು ಮತದಾರರ ದಿನಾಚರಣೆಯನ್ನು ಆರಂಭಿಸಲಾಯಿತು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹೆಚ್ಚು ಗಮನ ನೀಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಕೋಟಿ ಹೊಸ ಮತದಾರರ ಸೇರ್ಪಡೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಇನ್ನೂ ಹೆಚ್ಚಾಗಬಹುದು. ಕರ್ನಾಟಕದಲ್ಲಿ ಉಡುಪಿ, ಚಿಕ್ಕಮಗಳೂರು ಕ್ಷೇತ್ರ ಅತಿ ಕಡಿಮೆ ಮತದಾರರು ಇರುವ ಕ್ಷೇತ್ರ. ಇಲ್ಲಿ 6.78 ಲಕ್ಷ ಪುರುಷ ಮತದಾರರಿದ್ದರೆ, 7.77 ಲಕ್ಷ ಮಹಿಳಾ ಮತದಾರರಿದ್ದಾರೆ. ಮಹಿಳೆಯರು ಹೆಚ್ಚು ಇರುವುದು ಶ್ಲಾಘನೀಯ ವಿಚಾರ. ಇಲ್ಲಿ ಸಂಖ್ಯೆಗಿಂತ ಎಷ್ಟು ಸಕ್ರಿಯವಾಗಿ ನಾವು ಮತದಾನದಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ತಿಳಿಸಿದರು.

‘ಮುಂದುವರಿದ ರಾಷ್ಟ್ರವಾಗಿದ್ದ ಇಂಗ್ಲೆಂಡ್‌ನಲ್ಲಿ ಸ್ಥಿತಿವಂತರ ಸಹಿತ ಕೆಲವೇ ಸೀಮಿತ ವರ್ಗಕ್ಕೆ ಮಾತ್ರ ಮತದಾನದ ಹಕ್ಕು ಇತ್ತು. 1958ರಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಇಂಗ್ಲೆಂಡ್ ಜಾರಿ ಮಾಡಿತು. ಭಾರತ ಅದಕ್ಕೂ ಮೊದಲೇ ಸಾರ್ವತ್ರಿಕ ಚುನಾವಣೆಯನ್ನು ಅನುಷ್ಠಾನಕ್ಕೆ ತಂದಿತ್ತು. ಯುವ ಸಮುದಾಯ ನಿರ್ಲಕ್ಷಕ್ಕೆ ಒಳಗಾಗಬಾರದು ಎಂದು ಅಂದಿನ ಪ್ರಧಾನಿ ಯುವ ಸಮುದಾಯಕ್ಕೆ 18 ವರ್ಷಕ್ಕೆ ಮತದಾನ ಮಾಡುವ ಹಕ್ಕು ದೊರಕಿಸಿಕೊಟ್ಟರು’ ಎಂದ ಮಂಜುನಾಥ್ ಅವರು ಮತದಾನ ನೈತಿಕ ಕರ್ತವ್ಯ ಮತ್ತು ನೈತಿಕ ಪ್ರಜ್ಞೆಯಾಗಬೇಕು, ನಮ್ಮ ಉತ್ತಮ ನಿರ್ಧಾರದಿಂದ ಉತ್ತಮ ಸರ್ಕಾರ ಉತ್ತಮ ಆಡಳಿತ ಸಿಗಲು ಸಾಧ್ಯವಿದೆ ಎಂಬುದನ್ನು ನೆನಪಿಸಿದರು.

ಯುವಜನತೆಯಿಂದ ದೇಶದ ಚಿತ್ರಣವೇ ಬದಲು

‘ಯುವಜನತೆ ಮತದಾನದಲ್ಲಿ ಭಾಗವಹಿಸಿದರೆ ದೇಶದ ಚಿತ್ರಣವೇ ಬದಲಾಗುತ್ತದೆ. ಮತ ಹಾಕದಿದ್ದರೆ ಕರ್ತವ್ಯ ಲೋಪ ಮಾಡಿದಂತೆ. ಮತದಾನ ಮಾಡುವುದು ಖುಷಿಯ ವಿಚಾರ. ಸ್ಥಿತಿವಂತರಿಗೂ ಒಂದೇ ಮತ, ಬಡವರಿಗೂ ಒಂದೇ ಮತ. ಮತದಾನದ ವಿಷಯದಲ್ಲಿ ಪ್ರಧಾನಿಗೆ ಇರುವಷ್ಟೇ ಪ್ರಾಮುಖ್ಯತೆ ನಮಗೂ ಇದೆ. ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಯಾರಿಗೆ, ಯಾಕೆ ಮತದಾನ ಮಾಡಬೇಕು. ಯಾರಿಗೆ ಮತ ಹಾಕಿದರೆ ಹೆಚ್ಚು ಅನುಕೂಲ ಎಂದು ಯೋಚಿಸಿ ಮತಹಾಕಿ’ ಎಂದು ವಿದ್ಯಾರ್ಥಿ ಸಮೂಹಕ್ಕೆ ಹಿರಿಯ ಪ್ರಾಧ್ಯಾಪಕ ಡಾ.ಎಚ್.ಎ.ಗಣಪತಿ ಕಿವಿ ಮಾತು ಹೇಳಿದರು.

‘ಚುನಾವಣೆ ಮತ್ತು ರಾಜಕೀಯದ ಬಗ್ಗೆ ಜನತೆಗೆ ಆಕ್ರೋಶವಿದೆ. ಆದರೆ ಮತದಾನದ ಸಮಯದಲ್ಲಿ ಜನತೆಗೆ ಮತ ಹಾಕಬೇಕು ಎಂಬ ತಮ್ಮ ಕರ್ತವ್ಯ ನೆನಪಿಗೆ ಬರುವುದಿಲ್ಲ. ನಗರ ಪ್ರದೇಶದಲ್ಲಿ ಅತ್ಯಂತ ವಿರಳವಾಗಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮತದಾನವಾಗುವುದು ಇದರಿಂದ ಸ್ಪಷ್ಟವಾಗುತ್ತದೆ. ಮಾಧ್ಯಮಗಳು ಕೂಡ ಮತದಾನದ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದ ಡಾ. ಎಚ್.ಎ.ಗಣಪತಿ ಅವರು ‘ಪ್ರಜಾವಾಣಿ’ ದಿನಪತ್ರಿಕೆಯ ಸಾಮಾಜಿಕ ಹೊಣೆಗಾರಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

* * 

ಸಾಮಾಜಿಕ ಜಾಲತಾಣದಲ್ಲಿ ರಾಜಕೀಯದ ಚರ್ಚೆಗಳು ಹೆಚ್ಚಾಗುತ್ತಿವೆ. ಹೆಚ್ಚಿನ ಭದ್ರೆತೆಯೊಂದಿಗೆ ಆನ್‌ಲೈನ್‌ ಮೂಲಕ ಮತದಾನ ಮಾಡುವ ವ್ಯವಸ್ಥೆ ಜಾರಿಯಾಗಬೇಕು.
ನಂದಿಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT