ಕೇಂದ್ರ ಸರ್ಕಾರ ರಾಜ್ಯಕ್ಕೆ ₹3ಕ್ಕೆ ಕೆಜಿ ಅಕ್ಕಿ ಕೊಡುತ್ತಿರುವುದು ಯುಪಿಎ ಸರ್ಕಾರದ ಫಲ

7

ಕೇಂದ್ರ ಸರ್ಕಾರ ರಾಜ್ಯಕ್ಕೆ ₹3ಕ್ಕೆ ಕೆಜಿ ಅಕ್ಕಿ ಕೊಡುತ್ತಿರುವುದು ಯುಪಿಎ ಸರ್ಕಾರದ ಫಲ

Published:
Updated:

ಚಿಂಚೋಳಿ: ‘ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೆ. ಕೇಂದ್ರದಿಂದ ಅಕ್ಕಿ ನೀಡಲು ಬರುವ ಅನುದಾನಕ್ಕೆ ಯುಪಿಎ ಸರ್ಕಾರದ ಕ್ರಾಂತಿಕಾರಿ ನಿರ್ಧಾರವೇ ಕಾರಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು. ಅವರು ಗುರುವಾರ ತಾಲ್ಲೂಕಿನ ಕೋಡ್ಲಿಯಲ್ಲಿ ₹11 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ಕೇಂದ್ರದಲ್ಲಿ ಅಧಿಕಾರ ನಡೆಸಿದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದರ ಫಲವಾಗಿ ಕೇಂದ್ರ ಸರ್ಕಾರ ನಮಗೆ ಅಕ್ಕಿಗೆ ಹಣ ನೀಡುತ್ತಿದೆ. ಹೀಗಾಗಿ, ಇದು ನಮ್ಮ ಸರ್ಕಾರದ ಸಾಧನೆ’ ಎಂದು ಸಚಿವರು ಪ್ರತಿಪಾದಿಸಿದರು.

‘ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ನಾವು ಆಡಿ ಹೋಗುವವರಲ್ಲ, ಮಾಡಿ ತೋರಿಸುವ ಸರ್ಕಾರ ನಮ್ಮದು. ಇದಕ್ಕೆ ₹11 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಇಂದಿನ ಕಟ್ಟಡವೇ ಸಾಕ್ಷಿ’ ಎಂದರು.

ಮುಖ್ಯ ಅತಿಥಿಗಳಾಗಿದ್ದ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ನವ ಕರ್ನಾಟಕ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಕಲ್ಪದಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಅಡಿಗಲ್ಲು ಹಾಕಿ ನಾವೇ ಉದ್ಘಾಟಿಸುವುದು ನೀವೆ ನೋಡುತ್ತಿದ್ದೀರಿ’ ಎಂದು ಹೇಳಿದರು.

ಎಲ್ಲಾ ವರ್ಗಗಳ ಕಟ್ಟ ಕಡೆಯ ವ್ಯಕ್ತಿಗೆ ಬಲ ತುಂಬುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ರೈತರ ಬೆಳೆ ಸಾಲ ಮನ್ನಾಕ್ಕೆ ₹8,000 ಕೋಟಿ ಹೊರೆ ಹೊತ್ತುಕೊಳ್ಳಲಾಗಿದೆ. 2.70 ಲಕ್ಷ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆಯ ಲಾಭ ಪಡೆದರೆ, 47 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ, 63 ಲಕ್ಷ ಮಕ್ಕಳಿಗೆ ಪಠ್ಯಪುಸ್ತಕ, 6 ಲಕ್ಷ ಬೈಸಿಕಲ್ ವಿತರಿಸಿದ್ದೇವೆ. ಅಂಬೇಡ್ಕರ್ ಅವರ 125ನೇ ಜಯಂತ್ಯುತ್ಸವ ಪ್ರಯುಕ್ತ ವಸತಿನಿಲಯ ಮಂಜೂರು ಮಾಡಿದ್ದೇವೆ ಎಂದರು.

‘ಶಿಕ್ಷಣದಿಂದ ಮಾತ್ರ ಭವಿಷ್ಯ ನಿರ್ಮಾಣ ಸಾಧ್ಯವಿದೆ. ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಕುತೂಹಲದಿಂದ ಕಲಿಕೆಯಲ್ಲಿ ತೊಡಗಬೇಕು’ ಎಂದು ಅವರು ಕರೆ ನೀಡಿದರು.

‘ಹಿಂದೆ ಚಿಂಚೋಳಿ ಮತ್ತು ಚಿತ್ತಾಪುರ ತಾಲ್ಲೂಕುಗಳಿಗೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಆಗ ಇಲ್ಲಿ ಅರ್ಧಕ್ಕೆ ಶಾಲೆ ಬಿಡುವ ಮಕ್ಕಳ ಸಂಖ್ಯೆ 10ಸಾವಿರ ದಾಟಿತ್ತು. ಜನಪರ ಕಾಳಜಿಯ ಜನಪ್ರತಿನಿಧಿಗಳು ಬಂದ ಮೇಲೆ ಈ ಸಂಖ್ಯೆ 356ಕ್ಕೆ ಬಂದು ತಲುಪಿದೆ. ಇದನ್ನು ಜನಸಾಮಾನ್ಯರು ಗಮನಿಸಬೇಕು’ ಎಂದು ಪ್ರಿಯಾಂಕ್ ಮನವಿ ಮಾಡಿದರು.

ಸಂದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ ಮಾತನಾಡಿ, ‘ಬಾಡಿಗೆ ಕಟ್ಟಡದಲ್ಲಿ ಮೂಲಸೌಕರ್ಯಗಳ ಕೊರತೆಯ ಮಧ್ಯ ನಡೆಯುತ್ತಿರುವ ಕಿತ್ತೂರು ಚನ್ನಮ್ಮ ವಸತಿಶಾಲೆಗೆ ನಿರಂತರ ಭೇಟಿ ನೀಡಿ, ಅವರ ಸಮಸ್ಯೆಗೆ ಸ್ಪಂದಿಸಿ ಸರ್ಕಾರದಿಂದ ₹11 ಕೋಟಿ ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದೇವೆ. ಪೀಠೋಪಕರಣ ವ್ಯವಸ್ಥೆ ಹೈಕ ಅಭಿವೃದ್ಧಿ ಮಂಡಳಿಯಿಂದ ಮಾಡಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ್, ಸಾಮಾಜಿಕ ಕಾರ್ಯಕರ್ತೆ ಸಲ್ಮಾ ಶೇಖ್ ಮಾತನಾಡಿದರು. ರೇಣುಕಾ ಅಶೋಕ ಚವ್ಹಾಣ, ಗೌರಮ್ಮ ಸುಭಾಷ್ಚಂದ್ರ ಚೇಂಗಟಿ, ಜಗನ್ನಾಥ ಈದಲಾಯಿ, ರಾಜೇಶ ಗುತ್ತೇದಾರ, ಜಗದೇವ ಗುತ್ತೇದಾರ, ಭೀಮರಾವ್ ಟಿಟಿ, ಗೋಪಾಲರಾವ್ ಕಟ್ಟಿಮನಿ, ಖಾಜಾ ಪಟೇಲ್, ಚಂದ್ರಶೇಖರಯ್ಯ ಕಂಬದ, ರೇವಣಸಿದ್ದಪ್ಪ ಪೂಜಾರಿ ಗುಂಡಪ್ಪ ಮಾಳಗೆ, ನಿಂಬೇಣಪ್ಪ ಸಾಹು, ಶಬ್ಬೀರಮಿಯಾ ಸೌದಾಗರ, ರವಚಿರಾಜ ಕೊರವಿ ಲಕ್ಷ್ಮಣ ಆವುಂಟಿ, ಜಗದೀಶಸಿಂಗ ಠಾಕೂರು, ಅನಿಲಕುಮಾರ ಜಮಾದಾರ, ಅಣವೀರಯ್ಯಸ್ವಾಮಿ, ಅನಿಲಕುಮಾರ ಜಮಾದಾರ ಇದ್ದರು. ಮಹೇಶ ಸ್ವಾಗತಿಸಿ, ನಿರೂಪಿಸಿದರು. ಭೀಮಣ್ಣ ವಂದಿಸಿದರು.ಶಾಸಕ -ಜಿ.ಪಂ ಸದಸ್ಯರ ಜುಗಲ್ ಬಂದಿ

‘ಕೋಡ್ಲಿಗೆ ಕಿತ್ತೂರು ಚನ್ನಮ್ಮ ಶಾಲೆ ಮಂಜೂರು ಮಾಡಿಸಿ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಹೀಗಾಗಿ, ಇದರ ಶ್ರೇಯಸ್ಸು ಮಾಜಿ ಸಚಿವ ಸುನಿಲ ವಲ್ಲ್ಯಾಪುರ ಅವರಿಗೆ ಸಲ್ಲುತ್ತದೆ’ ಎಂದು ಜಿ.ಪಂ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ್ ತಿಳಿಸಿದರು.

ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್ ಮಾತನಾಡಿ, ಸರ್ಕಾರದ ಮೇಲೆ ಒತ್ತಡ ಹೇರಿ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದೇನೆ. 2016ರಲ್ಲಿ ಶಿಲಾನ್ಯಾಸ ನೆರವೇರಿಸಿ, ಪೂರ್ಣಗೊಂಡ ಮೇಲೆ ಉದ್ಘಾಟಿಸಿದ್ದೇವೆ. ಶಾಲೆ ನಿಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದೆ ಎಂದರೆ ಒಪ್ಪುತ್ತೇವೆ. ಆದರೆ, ಕಟ್ಟಡ ನಿರ್ಮಾಣ ಮಾಡಿದ್ದು ನಮ್ಮ ಸರ್ಕಾರ ಇದಕ್ಕೆ ಹಣ ನೀಡಿದ್ದು ನಾವೇ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry