ಶಾಂತಿಗೆ ಭಂಗ ತಂದರೆ ಕಠಿಣ ಕ್ರಮ

7

ಶಾಂತಿಗೆ ಭಂಗ ತಂದರೆ ಕಠಿಣ ಕ್ರಮ

Published:
Updated:
ಶಾಂತಿಗೆ ಭಂಗ ತಂದರೆ ಕಠಿಣ ಕ್ರಮ

ಕಾರವಾರ: ಜಿಲ್ಲೆಯ ಹೊನ್ನಾವರ, ಕುಮಟಾ, ಕಾರವಾರ, ಶಿರಸಿ ಭಾಗಗಳಲ್ಲಿ ಕೆಲ ಸಂಘಟನೆಗಳು ಶಾಂತಿ ಕದಡುವ ಕೆಲಸ ಮಾಡಿದವು. ಇದರಿಂದ ಜಿಲ್ಲೆಯ ಗೌರವಕ್ಕೆ ಧಕ್ಕೆಯಾಯಿತು. ಕಾನೂನು ಸುವ್ಯವಸ್ಥೆಗೆ ಅಡ್ಡಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಅಮಾಯಕರಿಗೆ ತೊಂದರೆ ಕೊಡುವವರು ತಾವು ಮಾಡಿದ್ದು ಸರಿಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಲಿ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ದಮನ ಆಗಬೇಕು. ಇದು ಪ್ರತಿ ಮಾನವನ ಕರ್ತವ್ಯ ಎಂದು ಪ್ರತಿಪಾದಿಸಿದರು.

ದೇಶದ ಅಭಿವೃದ್ಧಿಗಾಗಿ ಸ್ವಾಭಿಮಾನ, ಒಗ್ಗಟ್ಟು ಅಗತ್ಯ. ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯ್ ಪಟೇಲ್, ಜವಾಹರಲಾಲ್ ನೆಹರೂ ಮುಂತಾದವರ ಆದರ್ಶ ಮುಂದಿಟ್ಟುಕೊಂಡು ಹೆಜ್ಜೆ ಹಾಕಿದರೆ ಈ ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದರು.

ರಾಜ್ಯದಲ್ಲಿ ಈಗ ಅಭಿವೃದ್ಧಿ ಪರ್ವ ಶುರುವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪ್ರಯತ್ನದಿಂದ ಬಂದಷ್ಟು ಬಂಡವಾಳ ಬೇರೆ ಯಾವ ಸರ್ಕಾರದಲ್ಲೂ ಬಂದಿಲ್ಲ. ಈ ಮೂಲಕ ಸಾಮಾಜಿಕ ನ್ಯಾಯದ ಯುಗ ಆರಂಭವಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಕೇಂದ್ರದ ಎನ್‌ಡಿಎ ಸರ್ಕಾರ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಆದರೆ, ಆಗಲಿಲ್ಲ. 2025ರ ವೇಳೆಗೆ ನಮ್ಮ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಯುವಕರು ಇರಲಿದ್ದಾರೆ. ಆಗ ಅವರು ಎಲ್ಲಿರಬೇಕು? ಬೀದಿಲಯಲ್ಲೇ ಎಂದು ಅವರು ಪ್ರಶ್ನಿಸಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ 2019ರ ವೇಳೆಗೆ 15 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಅದರಂತೆ ಈಗಾಗಲೇ 12.63 ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗಿದೆ. ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಲೇ ಇವೆ. ಅವುಗಳ ಮೂಲಕ ನಮ್ಮ ಗುರಿಯನ್ನು ತಲುಪಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ವರ್ಷ ರಾಜ್ಯ ಸರ್ಕಾರದಿಂದ ಐದು ಲಕ್ಷ ಯುವಕರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿಯೇ ನಿಮ್ಮ ಮತಕ್ಕೆ ಮಾನದಂಡವಾಗಲಿ ಎಂದು ಪಕ್ಷಾತೀತವಾಗಿ ಹೇಳುತ್ತೇನೆ’ ಎಂದರು.

ಈಚೆಗೆ ಜಿಲ್ಲೆಯ ವಿವಿಧೆಡೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೇ ದಿನಗಳಲ್ಲಿ 543 ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ಇದೊಂದು ದಾಖಲೆ ಎಂದು ದೇಶಪಾಂಡೆ ಬಣ್ಣಿಸಿದರು.

ಸರ್ಕಾರದ ಹೊಸ ಯೋಜನೆ:

ಬಡವರ ಅನುಕೂಲಕ್ಕಾಗಿ ‘ಯೂನಿವರ್ಸಲ್ ಹೆಲ್ತ್ ಕೇರ್’ ಯೋಜನೆಯನ್ನು ಶೀಘ್ರವೇ ಜಾರಿ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ನಡುವಿನ ಸಹಭಾಗಿತ್ವದಿಂದಾಗಿ ಫಲಾನುಭವಿಗಳು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದು ವಿವರಿಸಿದರು. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಕೇವಲ 15 ದಿನಗಳಲ್ಲಿ ಅಡುಗೆ ಅನಿಲದ ಸಿಲಿಂಡರ್ ನೀಡಲಾಗುವುದು ಎಂದೂ ತಿಳಿಸಿದರು.

ಶಾಸಕ ಸತೀಶ್ ಸೈಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ನಾಯಕ್ ಅವರೂ ಉಪಸ್ಥಿತರಿದ್ದರು. ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ದೇಶಭಕ್ತಿ ಸಾರುವ ವಿವಿಧ ಹಾಡುಗಳಿಗೆ ಆಕರ್ಷಕ ನೃತ್ಯ ಮಾಡಿ ಗಮನ ಸೆಳೆದರು.

‘ಸರ್ವೋತ್ತಮ ಸೇವಾ’ ಪ್ರಶಸ್ತಿ

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಾ.ಸಂಗೀತಾ ಗಜಾನನ ಭಟ್, ಪಶು ವೈದ್ಯಾಧಿಕಾರಿ ವಿಶ್ವನಾಥ ಹೆಗಡೆ, ಉಪ ವಲಯ ಅರಣ್ಯಾಧಿಕಾರಿ ಎಸ್.ರವಿ, ಗ್ರಾಮ ಲೆಕ್ಕಾಧಿಕಾರಿ ಸಂದೇಶ ಎಸ್.ನಾಯ್ಕ, ಪಿಡಿಒ ವಿದ್ಯಾ ದೇಸಾಯಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಗೋವಿಂದ ಹನುಮಂತನಾಯ್ಕ ಅವರಿಗೆ ‘ಸರ್ವೋತ್ತಮ ಸೇವಾ’ ಪ್ರಶಸ್ತಿಯನ್ನು ಸಚಿವ ಆರ್.ವಿ.ದೇಶಪಾಂಡೆ ಪ್ರದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry