ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಯೋಜನೆ; ಜನಮನದಲ್ಲಿ ನೆಲೆ

Last Updated 27 ಜನವರಿ 2018, 9:17 IST
ಅಕ್ಷರ ಗಾತ್ರ

ಕೊಪ್ಪಳ: ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸರ್ಕಾರ ಕೈಗೊಂಡ ಜನಪರ ಯೋಜನೆಗಳಿಂದಾಗಿಯೇ ಜನರ ಮನದಲ್ಲಿ ನೆಲೆಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 69ನೇ ಗಣರಾಜ್ಯೋತ್ಸವದ ನಿಮಿತ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಭಾರತೀಯರಾದ ನಾವು ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ವೈವಿಧ್ಯತೆ ಹೊಂದಿದ್ದರೂ, ಭೌಗೋಳಿಕ, ಪ್ರಾದೇಶಿಕವಾಗಿ ಭಿನ್ನತೆ ಹೊಂದಿದ್ದರೂ, ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ‘ನಾವೆಲ್ಲಾ ಒಂದು’ ಎಂದು ಘೋಷಿಸಿಕೊಂಡ ದಿನ 1950ರ ಜ. 26. ಭಾರತದ ಗಣರಾಜ್ಯ ಉದಯಗೊಂಡ ಬಳಿಕ, ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿಕೊಂಡಿರುವ ನಮ್ಮ ದೇಶದಲ್ಲಿ, ನಮಗೆ ನಾವೇ ಹಕ್ಕು ಮತ್ತು ಕರ್ತವ್ಯಗಳನ್ನು ನಿಶ್ಚಯಿಸಿಕೊಂಡು ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾಧಿಸಲು ಬದ್ಧತೆ ನಿಗದಿಪಡಿಸಿಕೊಂಡಿದ್ದೇವೆ. ಭಾರತಕ್ಕೆ ಇಂಥ ಸಂವಿಧಾನ ರಚಿಸಿಕೊಟ್ಟ ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಭಾರತೀಯರ ಮನದಲ್ಲಿ ಅಮರರಾಗಿ ಉಳಿದಿದ್ದಾರೆ ಎಂದರು.

ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗ್ಯನಗರದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾದಿಕ್ ಅಲಿ ಹಾಗೂ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೊಪ್ಪಳದ ಸತೀಶ್ ಮುರಾಳ ಅವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಪಥಸಂಚಲನದಲ್ಲಿ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಸೇವಾದಳದ ವಿದ್ಯಾರ್ಥಿಗಳು ಪ್ರಥಮ ಹಾಗೂ ಸರಸ್ವತಿ ವಿದ್ಯಾಮಂದಿರ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. 

ಸಂಸದ ಕರಡಿ ಸಂಗಣ್ಣ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪಂಚಾಯಿತಿ ಸಿಇಒ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ರವಿ ತಿರ್ಲಾಪುರ ಇದ್ದರು.

ಸರ್ವೋತ್ತಮ ಸೇವಾ ಪ್ರಶಸ್ತಿ

ಜಿಲ್ಲಾ ಸಂಖ್ಯಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ವೈದ್ಯ ಡಾ.ಈಶ್ವರ ಸವಡಿ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ಎಸ್.ಎನ್. ತಿಮ್ಮನಗೌಡ್ರ, ಬೆರಳಚ್ಚುಗಾರ ಮನೋಹರ್, ಜಿಲ್ಲಾ ಪಂಚಾಯಿತಿ ಮ್ಯಾನೇಜರ್ ತಾನಾಜಿ ನರಗುಂದ, ವೈದ್ಯಕೀಯ ರೇಡಿಯೋಲಾಜಿ ತಂತ್ರಜ್ಞ ಸುಧೀರ ಅವರಾದಿ, ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ. ಬಾಬು, ನಾಡ ಕಚೇರಿ ಹಿರೇವಂಕಲಕುಂಟಾದ ಉಪತಹಶೀಲ್ದಾರ್‌ ವಿಜಯಕುಮಾರ, ಅಗ್ನಿಶಾಮಕ ಸಿಬ್ಬಂದಿ ಶಿವರಾಜ, ಪೌರಕಾರ್ಮಿಕ ದುರುಗಪ್ಪ, ಬಸ್‍ ಚಾಲಕರಾದ ರೇವಣಸಿದ್ದಪ್ಪ, ಶಿವಕುಮಾರ, ಮುನಿರಾಬಾದ್‍ ಜೆಸ್ಕಾಂ ಎಇಇ ವೀರೇಶ ಎಂ., ದೋಟಿಹಾಳ ಪಿಡಿಒ ವೆಂಕಟೇಶ್ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಜೀವರಕ್ಷಕ ಪ್ರಶಸ್ತಿ ಪ್ರದಾನ

ಅಪಘಾತದಂಥ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ನೆರವಾದವರಿಗೆ ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ ಅಡಿ ಜಿಲ್ಲಾಮಟ್ಟದ ಜೀವ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಪ್ರಶಸ್ತಿ ಪುರಸ್ಕೃತರು: ಮಹೇಶಗೌಡ ಮರಟಗೇರಿ, ನಾಗಲಾಪುರ, ಕುಷ್ಟಗಿ ತಾಲ್ಲೂಕು. ಡಾ.ಶರಣಯ್ಯ ಸ್ವಾಮಿ ಸಿದ್ದಾಪುರ, ಗಂಗಾವತಿ ತಾಲ್ಲೂಕು. ರಾಮಣ್ಣ ಕನಕಪ್ಪ ಮನ್ನಾಪುರ, ಹಿರೇಅರಳಹಳ್ಳಿ ಕುಷ್ಟಗಿ ತಾಲ್ಲೂಕು.

* * 

ರಾಜ್ಯಸರ್ಕಾರ ಜಾರಿಗೆ ತಂದಿರುವ ಜನೋಪಯೋಗಿ ಯೋಜನೆಗಳು ಬಡವರ, ಶೋಷಿತರ, ಕೃಷಿಕರ, ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟಿವೆ.
-ಬಸವರಾಜ ರಾಯರಡ್ಡಿ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT