ಜಲಯಜ್ಞಕ್ಕೆ ಹೆಚ್ಚಿನ ಒತ್ತು

7

ಜಲಯಜ್ಞಕ್ಕೆ ಹೆಚ್ಚಿನ ಒತ್ತು

Published:
Updated:
ಜಲಯಜ್ಞಕ್ಕೆ ಹೆಚ್ಚಿನ ಒತ್ತು

ಬಾಗಲಕೋಟೆ: ‘ಮರೋಳದ ರಾಮಥಾಳ ಹನಿ ನೀರಾವರಿ ಯೋಜನೆ ಅನುಷ್ಠಾನ, ತೇರದಾಳದ ವೆಂಕಟೇಶ್ವರ ಏತನೀರಾವರಿಗೆ ಶಂಕುಸ್ಥಾಪನೆ ಹಾಗೂ ಮುಚಖಂಡಿ ಕೆರೆ ತುಂಬಿಸಿ ಸುತ್ತಲಿನ ಹಳ್ಳಿಗಳಲ್ಲಿ ಅಂತರ್ಜಲ ಹೆಚ್ಚಿಸುವ ಮೂಲಕ ಜಿಲ್ಲೆಯಲ್ಲಿ ಜಲಯಜ್ಞಕ್ಕೆ ಸರ್ಕಾರ ಕೈಜೋಡಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಇಲ್ಲಿನ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮುಚಖಂಡಿ ಕೆರೆಗೆ ₹12.5 ಕೋಟಿ ವೆಚ್ಚದಲ್ಲಿ ನೀರು ತುಂಬಿಸಲಾಗಿದೆ. ಇದರಿಂದ ಕಗಲಗೊಂಬ, ಸೂಳಿಕೇರಿ, ಕಟಗೇರಿ, ನೀರಲಕೇರಿ, ಮುಚಖಂಡಿ, ಮುಚಖಂಡಿ ತಾಂಡಾ ಮತ್ತು ಬಾಗಲಕೋಟ ನವನಗರದಲ್ಲಿ ಅಂತರ್ಜಲಮಟ್ಟ ಹೆಚ್ಚವಾಗಿದೆ. ಕೆರೆ ಪೂರ್ತಿ ತುಂಬಿದಲ್ಲಿ 450 ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ವೆಂಕಟೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಿಂದ ಒಟ್ಟು 10 ಗ್ರಾಮಗಳ 7.200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಲಭ್ಯವಾಗಲಿದೆ ಎಂದರು.

ಏಷ್ಯಾ ಖಂಡದಲ್ಲಿಯೇ ಅತೀ ದೊಡ್ಡ ಹನಿ ನೀರಾವರಿ ಯೋಜನೆಯಾದ ಮರೋಳ(ರಾಮಥಾಳ) ಹನಿ ನೀರಾವರಿ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದೆ. ಯೋಜನೆಯಿಂದ 24 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮೋಜಣಿ ತಂತ್ರಾಂಶದಡಿ ಒಟ್ಟು 1,09,006 ಪ್ರಕರಣಗಳು ಸ್ವೀಕೃತಿಯಾಗಿವೆ. ಇದರಲ್ಲಿ 94,186 ಪ್ರಕರಣ ವಿಲೇ ಮಾಡಿ ಶೇ 86 ರಷ್ಟು ಪ್ರಗತಿ ಸಾಧಿಸಲಾಗಿದೆ. ನಗರೋತ್ಥಾನ ಹಂತ- 3ರಡಿ ಜಿಲ್ಲೆಗೆ ಒಟ್ಟು ₹191.50 ಕೋಟಿ ಹಂಚಿಕೆಯಾಗಿದೆ. ಇದರಲ್ಲಿ ₹57.78 ಕೋಟಿ ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.

ಸ್ವಚ್ಛ ಭಾರತ ಮಿಷನ್ ಅಡಿ ಒಟ್ಟು 55 ಸಾವಿರ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಅದರಲ್ಲಿ 38 ಸಾವಿರ ಪೂರ್ಣಗೊಂಡಿವೆ. ಗ್ರಾಮ ವಿಕಾಸ ಯೋಜನೆಯಡಿ ಪ್ರತಿ ವಿಧಾನ ಮತಕ್ಷೇತ್ರಕ್ಕೆ ₹3.75 ಕೋಟಿಯಂತೆ ಒಟ್ಟು ₹26.25 ಕೋಟಿ ನಿಗದಿಪಡಿಸಿ ಒಟ್ಟು 24 ಗ್ರಾಮಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.

ಕೃಷಿ ಭಾಗ್ಯ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ 11,221 ಕೃಷಿ ಹೊಂಡ, ವಾಣಿಜ್ಯ ಬೆಳೆಗಳಿಗೆ 144 ನೆರಳು ಪರದೆ ನಿರ್ಮಿಸಿ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್.ವೈ.ಮೇಟಿ ವಹಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ, ಜಿಲ್ಲಾ ಪಂಚಾಯ್ತಿ ಸಿಇಒ ವಿಕಾಶ ಸುರಳಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಡಿ ಉಪಸ್ಥಿತರಿದ್ದರು.

ಆರಂಭದಲ್ಲಿ ಪೋಲಿಸ್ ಇಲಾಖೆಯಿಂದ ರಾಷ್ಟ್ರಗೀತೆ, ಪೊಲೀಸ್ ಪಡೆ, ಗೃಹ ರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ ಹಾಗೂ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ನೃತ್ಯರೂಪಕ, ಮಲ್ಲಕಂಬ ಪ್ರದರ್ಶನ, ಪೊಲೀಸ್ ಇಲಾಖೆಯಿಂದ ಡಾಗ್ ಶೋ ಜರುಗಿದವು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ..

ಅಭಿಷೇಕ್ ಪವಾರ, ತುಳಜಾನ ಜೋಶಿ (ಕ್ರೀಡೆ), ಉಷಾ ಪಾಟೀಲ, ಸ್ನೇಹಾ ಹುಲ್ಯಾಳ, ಸೃಷ್ಟಿ ಹುಲ್ಯಾಳ (ಭರತನಾಟ್ಯ), ನಾಗರಾಜ ಬಸೂದೆ (ಸಂಗೀತ), ಶರಣಬಸವ ಖಂಡೋಜಿ (ನಾಟಕ ಬರಹಗಾರ), ಮಹಾಂತೇಶ ಗೊರ್ಜನಾಳ (ಪತ್ರಿಕೆ), ಡಾ.ಎನ್.ಜಿ.ಕೊಪ್ಪ (ವೈದ್ಯಕೀಯ), ಈಶ್ವರ ಹೊರಟ್ಟಿ (ಭಜನೆ), ಗುರುಲಿಂಗಪ್ಪ ಚಿಂಚಲಿ (ನಾಟಕ), ಪ್ರಕಾಶ ಉಡಾಳ (ಚಿತ್ರಕಲೆ) ಹಾಗೂ ಸುಮಂಗಲಾ ಹದ್ಲಿ (ಸಮಾಜ ಸೇವೆ) ಅವರನ್ನು ಸನ್ಮಾನಿಸಲಾಯಿತು.

ಸರ್ವೋತ್ತಮ ಪ್ರಶಸ್ತಿ ಪ್ರದಾನ: ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಸವರಾಜ ಶಿರೂರ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅಮರೇಶ ನಾಯಕ, ಜಮಖಂಡಿ ತಹಶೀಲ್ದಾರ್ ಪ್ರಶಾಂತ ಚನಗೊಂಡ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ಮೆಳ್ಳಿಗೇರಿ ಪಿಡಿಒ ಅಶೋಕ ಜನಗೌಡ, ಕಂದಾಯ ಇಲಾಖೆ ಶಿರಸ್ತೇದಾರ ಶಾಂತಾ ಕುಗಾಟೆ ಅವರಿಗೆ ಜಿಲ್ಲಾಮಟ್ಟದ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry