‘ರಾಮದುರ್ಗ ಅಭಿವೃದ್ಧಿಗೆ ₹ 2,500 ಕೋಟಿ ವೆಚ್ಚ’

7

‘ರಾಮದುರ್ಗ ಅಭಿವೃದ್ಧಿಗೆ ₹ 2,500 ಕೋಟಿ ವೆಚ್ಚ’

Published:
Updated:
‘ರಾಮದುರ್ಗ ಅಭಿವೃದ್ಧಿಗೆ ₹ 2,500 ಕೋಟಿ ವೆಚ್ಚ’

ರಾಮದುರ್ಗ: ಕ್ಷೇತ್ರದ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳಿಗಾಗಿ ₹ 2,500 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಇಲ್ಲಿನ ತೇರ ಬಜಾರದಲ್ಲಿ ಶುಕ್ರವಾರ ನಡೆದ 69ನೇ ಗಣರಾಜ್ಯೋತ್ಸವದ ನಿಮಿತ್ತ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಮೂಲಭೂತ ಸೌಲಭ್ಯಗಳ ಪೂರೈಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಯಲು ಬಹಿರ್ದೆಸೆ ಮುಕ್ತ ಮಾಡುವ ಉದ್ದೇಶದಿಂದ ತಾಲ್ಲೂಕಿನ 37 ಗ್ರಾಮ ಪಂಚಾಯ್ತಿಗಳಲ್ಲಿ ಗುರಿ ತಲುಪುವ ಪಂಚಾಯ್ತಿಗೆ ನಗದು ಬಹುಮಾನ ನೀಡಲಾಗುವುದು. ಮತಕ್ಷೇತ್ರದ ಎಲ್ಲ ಸರ್ಕಾರಿ, ಅರೆ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಹಾಗೂ ಕಾಲೇಜು ಸೇರಿದಂತೆ 60 ಸಾವಿರ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಬ್ಯಾಗ್‌ಗಳನ್ನು ಸ್ವಂತ ವೆಚ್ಚದಲ್ಲಿ ವಿತರಿಸಲಾಗಿದೆ ಎಂದು ಹೇಳಿದರು. ಮುಳ್ಳೂರ ಗುಡ್ಡದಲ್ಲಿ ಶಿವನಮೂರ್ತಿ ಕಾಮಗಾರಿ ಅತೀ ಭರದಿಂದ ಸಾಗಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಕರ್ಷಣ ನೃತ್ಯ: ಪಟ್ಟಣದ ಸಮರ್ಪಣ ವಿದ್ಯಾಪೀಠದ ಸುಮಾರು 72 ವಿದ್ಯಾರ್ಥಿಗಳು ಪ್ರದರ್ಶಿಸಿದ ಸಮೂಹ ನೃತ್ಯ ನೆರೆದಿದ್ದವರ ಗಮನ ಸೆಳೆಯಿತು. ಸಮರ್ಪಣ ವಿದ್ಯಾಪಿಠದ ವಿದ್ಯಾರ್ಥಿಗಳ ದೇಶಭಕ್ತಿ ಗೀತೆ ಮತ್ತು ವೀರಯೋಧರ ಬಗ್ಗೆ ನೃತ್ಯದ ಜೊತೆಯಲ್ಲಿ ಕಸರತ್ತಿನ ಕಲೆಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಕಟಕೋಳದಲ್ಲಿ ಸಂಭ್ರಮ: ಕಟಕೋಳದ ಎಸ್‌ಜಿಕೆ ಹೈಸ್ಕೂಲ್ ಮತ್ತು ಕಾಲೇಜು ಆವರಣದಲ್ಲಿ ಮುಖಂಡ ಅಡಿವೆಪ್ಪ ಸುರಗ ಧ್ವಜಾರೋಹಣ ನೇರವೇರಿಸಿದರು. ಶಿಕ್ಷಕ ರವಿ ಗೂರವರ, ಡಾ.ಪಿ.ಕೆ.ರಾಠೋಡ, ಪ್ರಾಚಾರ್ಯ ಎನ್.ಡಿ.ಪಾಟೀಲ, ಪ್ರಾಚಾರ್ಯ ಎಸ್.ಎಂ.ಹುದ್ದಾರ ಮಾತನಾಡಿದರು.

ಕಾರ್ಯದರ್ಶಿ ಎ.ಕೆ. ತೋರಣಗಟ್ಟಿ, ನಿರ್ದೇಶಕ ಸಿ.ಎ.ದೇಸಾಯಿ, ಎನ್.ಬಿ. ತೋಡಕರ, ಸಿ.ಬಿ. ಕಳಸಪ್ಪನವರ, ಮುಖ್ಯ ಗುರು ಎಂ.ಎನ್. ನಡುಗೇರಿ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಸುರೇಶ ಕೊಳ್ಳಾರ ಹಾಜರಿದ್ದರು.

ರಮೇಶ ಬಾರಕೇರ ನಿರೂಪಿಸಿ ಕಡೆಯಲ್ಲಿ ವಂದಿಸಿದರು.

ಕ್ರೀಡಾ ಶಾಲೆಯಲ್ಲಿ ಆಚರಣೆ: ಚಂದರಗಿಯ ಕ್ರೀಡಾ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸ್ಪೋಕೋ ಸಂಸ್ಥೆಯ ಅಧ್ಯಕ್ಷ ಆರ್.ಎ. ಪಾಟೀಲ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕ ಸಿದ್ದು ಮೇತ್ರಿ ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕ ಎಸ್. ಆರ್. ನವರಕ್ಕಿ, ಕನ್ನಡ ಮಾಧ್ಯಮದ ಪ್ರಾಚಾರ್ಯ ಎ.ಎನ್.ಮೋದಗಿ, ವ್ಯವಸ್ಥಾಪಕ ಜಗದೀಶ ಮುರಗೋಡ, ಕಾಲೇಜು ಪ್ರಾಚಾರ್ಯ ಎಸ್.ಎಂ.ಪಾಟೀಲ ಹಾಗೂ ಶಾಲೆಯ ಎಲ್ಲ ಶಿಕ್ಷಕ ಸಿಬ್ಬಂದಿಯವರು ಹಾಜರಿದ್ದರು.

ಶಾಲೆಯ ಎನ್‌ಸಿಸಿ ತಂಡದಿಂದ ಸೈಲಂಟ್ ಮಾರ್ಚ್ ಜರುಗಿತು. ಭಾಷಣ, ಸಂಗೀತ, ಚಿತ್ರಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry