₹5 ಕೋಟಿ ವೆಚ್ಚದಲ್ಲಿ ಕನ್ನಡ ಭವನ

7

₹5 ಕೋಟಿ ವೆಚ್ಚದಲ್ಲಿ ಕನ್ನಡ ಭವನ

Published:
Updated:
₹5 ಕೋಟಿ ವೆಚ್ಚದಲ್ಲಿ ಕನ್ನಡ ಭವನ

ಬೀದರ್: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನಗರದ ಗುರುದ್ವಾರದ ಬಳಿ ₹5 ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು. ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ ಯೋಜನೆ (ಬಿಆರ್‌ಜಿಎಫ್‌) ಅಡಿ ತಕ್ಷಣ ₹50 ಲಕ್ಷ ಬಿಡುಗಡೆ ಮಾಡಿ ಚುನಾವಣೆ ಪೂರ್ವದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರಕಟಿಸಿದರು.

ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಭವನ ಒಪ್ಪಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭವನದ ನಿರ್ವಹಣೆ ಮಾಡಲಿದೆ’ ಎಂದು ತಿಳಿಸಿದರು.

‘ತಾಂತ್ರಿಕ ಕಾರಣಗಳಿಂದಾಗಿ ಇಂದಿರಾ ಕ್ಯಾಂಟೀನ್‌ ಕಾರ್ಯಾರಂಭ ವಿಳಂಬವಾಗಿದೆ. ಫೆಬ್ರುವರಿ 8ರಂದು ಬೀದರ್ ಹಾಗೂ ಭಾಲ್ಕಿಯಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಲಿವೆ. ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳಲ್ಲೂ ಆದಷ್ಟು ಬೇಗ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

‘ನಗರೋತ್ಥಾನ ಹಂತ–2 ಯೋಜನೆಯಡಿ ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಗಟಾರ ಕಾಮಗಾರಿಗೆ ಒಟ್ಟು ₹65 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಬೀದರ್‌ ನಗರದಲ್ಲಿ ಪೌರಾಡಳಿತ ಇಲಾಖೆಯ ನಗರೋತ್ಥಾನ ಯೋಜನೆಯ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಲು ಹೆಚ್ಚುವರಿಯಾಗಿ ₹35 ಕೋಟಿ ಮಂಜೂರು ಮಾಡಲಾಗುವುದು’ ಎಂದು ತಿಳಿಸಿದರು.

‘ಕಾರಂಜಾ ಜಲಾಶಯದ ಕಾಲುವೆ ಗಳನ್ನು ಆಧುನಿಕರಣಗೊಳಿಸಿ ಕೊನೆಯ ಅಂಚಿನ ರೈತರ ಭೂಮಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ₹432 ಕೋಟಿ ವಿನಿಯೋಗಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ’ ಎಂದು ತಿಳಿಸಿದರು.

‘ಈಗಿರುವ ಜಿಲ್ಲಾಡಳಿತ ಕಚೇರಿ ಜಾಗದಲ್ಲಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಕೆಲವು ತೊಡಕುಗಳು ಇದ್ದವು. ಜಾಗ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ಕಾರಣ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನೂ ಪಡೆಯಲಾಗಿದೆ’ ಎಂದರು.

‘ಪ್ರಾಥಮಿಕ ಸಹಕಾರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಮೂಲಕ ಅಲ್ಪಾವಧಿ ಬೆಳೆಸಾಲ ಪಡೆದ 68 ರೈತರ ₹26 ಲಕ್ಷ ಸಾಲ ಮನ್ನಾ ಮಾಡಲಾಗಿದೆ. ಸಾಲ ಮನ್ನಾ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆದ ಜಿಲ್ಲೆಗಳಲ್ಲಿ ಬೀದರ್‌ ಮೂರನೇ ಸ್ಥಾನದಲ್ಲಿದೆ’ ಎಂದು ತಿಳಿಸಿದರು.

‘ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿ 2013ರ ಏಪ್ರಿಲ್‌ ನಿಂದ ಈವರೆಗೆ ನಾಲ್ಕು ಗ್ರಾಮ ಪಂಚಾಯಿತಿಗಳು ಹಾಗೂ 56 ಗ್ರಾಮಗಳನ್ನು ಬಯಲು ಮಲ ವಿಸರ್ಜನೆ ಮುಕ್ತ ಎಂದು ಘೋಷಣೆ ಮಾಡಲಾಗಿದೆ’ ಎಂದು ಹೇಳಿದರು.

ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ, ವಿಜಯಸಿಂಗ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಪ್ರಕಾಶ ಪಾಟೀಲ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಸೆಲ್ವಮಣಿ ಉಪಸ್ಥಿತರಿದ್ದರು.

ಜಿಲ್ಲಾ ಸಶಸ್ತ್ರಪಡೆ, ಜಿಲ್ಲಾ ನಾಗರಿಕ ಪೊಲೀಸ್‌, ಮಹಿಳಾ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಎನ್‌ಸಿಸಿ ಕೆಡೆಟ್‌, ಸ್ಕೌಟ್ಸ್‌ ಮತ್ತು ಗೈಡ್ಸ್, ವಿವಿಧ ಶಾಲಾ ಮಕ್ಕಳು ಪಥ ಸಂಚಲನ ನಡೆಸಿದರು. ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಗುರುಕುಲ ಶಾಲೆಯ ಮಕ್ಕಳು ಮಲ್ಲಕಂಬ ಪ್ರದರ್ಶನ ನೀಡಿದರು. ದತ್ತಗಿರಿ ಶಾಲೆ ಹಾಗೂ ರವೀಂದ್ರ ಶಾಲೆಯ ಮಕ್ಕಳ ಸಮೂಹ ನೃತ್ಯ ಗಮನ ಸೆಳೆಯಿತು. ಚೆನ್ನಬಸವ ಹೇಡೆ ನಿರೂಪಿಸಿದರು.

ಸಿಹಿ ವಿತರಣೆ: ಟೀಮ್ ದ ಪ್ರವಾಹ ಸಂಸ್ಥೆಯ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ನೀಲಕಂಠ ವಳದೊಡ್ಡಿ, ಅಮರದೀಪ್, ಪ್ರದೀಪ, ರಾಹುಲ್ ಕೆ., ಅಭಿಷೇಕ, ಸೈಯದ್ ಮಿರಾಜ್, ಸಾಗರ ಸಾವಳಗಿ, ಯೋಹಾನ್, ಸಚಿನ್, ಗಜಾನಂದ ಮೇತ್ರೆ, ಕಲ್ಲಪ್ಪ, ರಾಹುಲ್, ಕೃಷ್ಣಾ ಎಸ್.ಡಬ್ಲ್ಯೂ ಹಾಗೂ ಆನಂದ ಸಿಹಿ ವಿತರಿಸಿದರು.

* * 

ರೈತ ಸುರಕ್ಷಾ ಪ್ರಧಾನಮಂತ್ರಿ ಕೃಷಿ ಬಿಮಾ ಯೋಜನೆ ಅಡಿ ಜಿಲ್ಲೆಯ 1.80 ಲಕ್ಷ ರೈತರು ಹೆಸರು ನೋಂದಾಯಿಸಿದ್ದು, ಬೀದರ್‌ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry