ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಜನರ ಸಹಭಾಗಿತ್ವ ಅಗತ್ಯ

Last Updated 27 ಜನವರಿ 2018, 9:44 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗಣತಂತ್ರ ವ್ಯವಸ್ಥೆ ಯಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯ ಅರ್ಥಪೂರ್ಣವಾಗಲಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಎಂ.ಸಿ. ಮೋಹನಕುಮಾರಿ ಅಭಿಪ್ರಾಯಪಟ್ಟರು.

ನಗರದ ಡಾ. ಬಿ.ಆರ್. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ 69ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಎಲ್ಲರೂ ಕಟಿಬದ್ಧರಾಗಿ ಕಾರ್ಯನಿರ್ವಹಿಸಬೇಕು. ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆ ಮುಂತಾದ ವಿಷಯಗಳನ್ನು ಬದಿಗೊತ್ತಿ, ಅನಕ್ಷರತೆ, ಬಡತನ, ನಿರುದ್ಯೋಗ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಪ್ರತಿಪಾದಿಸಿದರು.

ಚಂದ್ರಯಾನ ಮತ್ತು ಮಂಗಳಯಾನ ಯಾತ್ರೆ ಸೇರಿದಂತೆ ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತ ಅದ್ವಿತೀಯ ಕೊಡುಗೆ ನೀಡಿದೆ. ಆದರೆ, ದೇಶದಲ್ಲಿ ಇನ್ನೂ ಉಳಿದಿರುವ ಪ್ರಾಂತೀಯತೆ, ಕೋಮುಗಲಭೆ, ಜಾತಿ ಸಂಘರ್ಷ, ಭ್ರಷ್ಟಾಚಾರ, ಸಾಮಾಜಿಕ ಪಿಡುಗುಗಳು, ಭಯೋತ್ಪಾದನೆ, ರಾಜಕೀಯ ಕಲಹಗಳನ್ನು ನಾವು ತೊಡೆದುಹಾಕುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್‌ ಅವರ ಚಿಂತನೆಯ ಫಲವಾಗಿ ರೂಪಿತವಾದ ಸಂವಿಧಾನವು ದೇಶದ ಏಕತೆ, ದುರ್ಬಲ ವರ್ಗಗಳ ಏಳಿಗೆ, ಶೋಷಣೆ ವಿರುದ್ಧ ರಕ್ಷಣೆ, ಬಲಿಷ್ಠ ಒಕ್ಕೂಟ ಮಾದರಿ ಸರ್ಕಾರವನ್ನು ರಚಿಸಲು ನೆರವಾಗಿದೆ ಎಂದು ಹೇಳಿದರು.

ಭಾರತದ ಪ್ರಜೆಗಳಾದ ನಾವು ಈ ಸಂವಿಧಾನವನ್ನು ಹೃದಯ ಪೂರ್ವಕವಾಗಿ ಒಪ್ಪಿಕೊಂಡಿದ್ದೇವೆ. ಪ್ರತಿ ನಾಗರಿಕರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ ನೀಡಲಾಗಿದೆ ಎಂದು ಹೇಳಿದರು.

ದೇಶದ ಪ್ರತಿ ಪ್ರಜೆಗೆ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಸಂವಿಧಾನದ ಆಶಯಗಳನ್ನು ಈಡೇರಿಸಲು ಅವಶ್ಯವಿರುವ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸೇರಿದಂತೆ ವಿವಿಧ ಮಾರ್ಗದರ್ಶಿ ನಿಯಮಗಳನ್ನು ಸಂವಿಧಾನವೇ ನೀಡಿದ್ದು, ಇಡೀ ದೇಶ ಸಂವಿಧಾನದ ಆಶಯ ಮತ್ತು ನಿಯಮದಂತೆ ನಡೆಯಬೇಕಿದೆ ಎಂದು ತಿಳಿಸಿದರು.

ದೇಶವು ಗಣರಾಜ್ಯವಾದಾಗ ದೇಶದ ಎದುರು ಸಾವಿರಾರು ಸವಾಲುಗಳಿದ್ದವು. ನೆಹರು ಅವರ ಪಂಚವಾರ್ಷಿಕ ಯೋಜನೆಗಳು, ಕೈಗಾರಿಕೀಕರಣ, ಸಮಾಜವಾದ ಅರ್ಥವ್ಯವಸ್ಥೆ, ವಿದೇಶಾಂಗ ನೀತಿ, ನಿಶಸ್ತ್ರೀಕರಣ ನೀತಿಗಳು, ಇಂದಿರಾ ಗಾಂಧಿ ಅವರ ಗರೀಬಿ ಹಟಾವೊ, ರಾಷ್ಟ್ರೀಕರಣ ನೀತಿಗಳು, ರಾಜೀವ್ ಗಾಂಧಿ ಅವರ ವೈಜ್ಞಾನಿಕ ಕ್ರಾಂತಿ, ಮಾಹಿತಿ ತಂತ್ರಜ್ಞಾನ ಕ್ರಾಂತಿಗಳು ಮತ್ತು ಆನಂತರ ಜಾರಿಗೆ ಬಂದ ಉದಾರೀಕರಣ, ಜಾಗತೀಕರಣ, ಮುಕ್ತ ವ್ಯಾಪಾರ ನೀತಿಗಳು ಭಾರತವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಜಗತ್ತಿನ ಗಮನ ಸೆಳೆಯುವಂತೆ ಮಾಡಿದವು ಎಂದು ಹೇಳಿದರು.

ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದೇವೆ. ಕೃಷಿ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ, ಬಾಹ್ಯಾಕಾಶ, ರಕ್ಷಣೆ, ವಾಣಿಜ್ಯ, ವ್ಯಾಪಾರ, ಶಿಕ್ಷಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಬಡತನ ಹಾಗೂ ಅಸಮಾನತೆ ನಿವಾರಣೆಯಲ್ಲಿ ಭಾರತೀಯರ ಸಾಧನೆ ಶ್ಲಾಘನೀಯ ಎಂದರು.

ಪ್ರಗತಿಯತ್ತ ಜಿಲ್ಲೆ: ಜಿಲ್ಲೆಯು ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲಿಯೇ 9ನೇ ಸ್ಥಾನದಲ್ಲಿದೆ. ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿ ‘ನಮ್ಮ ಹೊಲ–ನಮ್ಮ ದಾರಿ’ ಕಾರ್ಯಕ್ರಮದ ಅನುಷ್ಠಾನದಲ್ಲಿ 2ನೇ ಹಾಗೂ ‘ನಮ್ಮೂರು ಕೆರೆ’ ಯೋಜನೆ ಅನುಷ್ಠಾನದಲ್ಲಿ 3ನೇ ಸ್ಥಾನದಲ್ಲಿದೆ ಎಂದು ಮೋಹನಕುಮಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಆರ್. ಉಮೇಶ್‌, ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಆರ್‌.ಎಂ. ರಾಜಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು, ಉಪಾಧ್ಯಕ್ಷ ಪಿ.ಎನ್. ದಯಾನಿಧಿ, ಚುಡಾ ಅಧ್ಯಕ್ಷ ಸುಹೇಲ್‌ ಆಲಿಖಾನ್‌, ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇದ್ದರು.

ಆಕರ್ಷಕ ಪಥಸಂಚಲನ

ಧ್ವಜಾರೋಹಣದ ಬಳಿಕ ಪೊಲೀಸ್‌ ಬ್ಯಾಂಡ್‌, ಜಿಲ್ಲಾ ಸಶಸ್ತ್ರ ಪೊಲೀಸ್‌ ತುಕಡಿ, ಸಿವಿಲ್‌ ಪೊಲೀಸ್‌ ತುಕಡಿ, ಗೃಹರಕ್ಷಕ ದಳ ಮತ್ತು 15 ಶಾಲೆಗಳ ಸೇವಾದಳ, ಸ್ಕೌಟ್ಸ್‌ ಹಾಗೂ ಗೈಡ್ಸ್‌ ವಿಭಾಗದ ವಿದ್ಯಾರ್ಥಿಗಳಿಂದ ನಡೆದ ಪಥಸಂಚಲನ ಗಮನ ಸೆಳೆಯಿತು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 5 ಶಾಲೆಗಳ ಒಟ್ಟು 1,220 ವಿದ್ಯಾರ್ಥಿಗಳು ಪ್ರೇಕ್ಷಕರನ್ನು ರಂಜಿಸಿದರು. ರಾಮಸಮುದ್ರದ ಬಾಲರಪಟ್ಟಣ ಶಾಲೆಯ ಮಕ್ಕಳು ಕಂಸಾಳೆ, ಗೊರವರ ಕುಣಿತ ಮತ್ತು ಡೊಳ್ಳುಕುಣಿತದ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರಿದರು.

ಸೇವಾಭಾರತಿ ಪ್ರೌಢಶಾಲೆ, ಸಂತ ಜೋಸೆಫರ ಶಾಲೆ ಮತ್ತು ಆದರ್ಶ ಶಾಲೆಯ ಮಕ್ಕಳು ದೇಶಭಕ್ತಿ ಸಾರುವ ಹಾಡುಗಳಿಗೆ ನರ್ತಿಸಿದರು. ಬ್ರಿಟಿಷ್ ಬ್ಯಾಂಡ್‌ ನುಡಿಸಿದ ಕೊಳ್ಳೇಗಾಲದ ಭವನ್ಸ್‌ಗೀತ ಶಾಲೆಯ ತಂಡ ಮೊದಲ ಸ್ಥಾನ ಪಡೆಯಿತು.

ಶೌರ್ಯ ಪ್ರಶಸ್ತಿ ಪ್ರದಾನ

ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿಯ ಉಡುತೊರೆ ಹಳ್ಳದಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಯುವಕನನ್ನು ಸಮಯಪ್ರಜ್ಞೆಯಿಂದ ಕಾಪಾಡಿದ ಬಸವರಾಜು ಮತ್ತು ರುದ್ರ ಅವರಿಗೆ ಸಚಿವೆ ಎಂ.ಸಿ. ಮೋಹನಕುಮಾರಿ ಜಿಲ್ಲಾ ಮಟ್ಟದ ಶೌರ್ಯ ಪ್ರಶಸ್ತಿ ಮತ್ತು ಪ್ರಶಂಸನಾ ಪತ್ರ ನೀಡಿದರು.

ವಿಷನ್‌ 2025 ಯೋಜನೆಯ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಾದ ಸಹನಾ ಮತ್ತು ಭಾವನಾ ಅವರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT