ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಹಳ್ಳಿಗಳಲ್ಲಿ ನೀರಿನ ಜಪ!

Last Updated 27 ಜನವರಿ 2018, 9:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಿಂದುಳಿದ ತಾಲ್ಲೂಕುಗಳ ಹಣೆಪಟ್ಟಿ ಕಟ್ಟಿಕೊಂಡಿರುವ ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಅನೇಕ ವರ್ಷಗಳ ನಂತರ ಈ ಬಾರಿ ಪ್ರಮುಖ ಜಲಾಶಯಗಳು ಸೇರಿ ನೂರಾರು ಕೆರೆಕಟ್ಟೆಗಳು ತುಂಬಿದರೂ ಜನರಿಗೆ ಮಾತ್ರ ಈವರೆಗೆ ಫ್ಲೋರೈಡ್‌ ಮಿಶ್ರಿತ ನೀರು ಕುಡಿದು ಫ್ಲೋರೊಸಿಸ್‌ ಪೀಡಿತರಾಗುವ ವ್ಯಥೆ ಕಳೆದಿಲ್ಲ.

ಈ ಎರಡು ತಾಲ್ಲೂಕುಗಳ 190 ಗ್ರಾಮಗಳ ಜನರಿಗೆ ‘ಬಹುಗ್ರಾಮ’ ಯೋಜನೆಯಡಿ ಶುದ್ಧ ಕುಡಿಯುವ ನೀರು ನೀಡಬೇಕೆನ್ನುವ ಉದ್ದೇಶದಿಂದ ಕೋಟ್ಯಂತರ ವೆಚ್ಚದಲ್ಲಿ ಅನುಷ್ಟಾನಗೊಳಿಸಿದ ಎರಡು ಪ್ರಮುಖ ಯೋಜನೆಗಳು ಮಳೆರಾಯ ಮುನಿಸಿನಿಂದಾಗಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದವು.

‘ಮಳೆ ಇಲ್ಲದೆ ಜಲಾಶಯ ತುಂಬಿಲ್ಲ’ ಎನ್ನುವ ಕಾರಣ ಪದೇ ಪದೇ ಮುಂದು ಮಾಡಿ ಶುದ್ಧ ಕುಡಿಯುವ ನೀರು ಒದಗಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದ ಅಧಿಕಾರಿಗಳು ಇದೀಗ ಜಲಾಶಯಗಳು ತುಂಬಿ ನಾಲ್ಕು ತಿಂಗಳು ಕಳೆದರೂ  ಈವರೆಗೆ ವಂಡಮಾನ್‌ನಿಂದ 40 ಹಳ್ಳಿಗಳಿಗೆ ನೀರು ಹರಿಸಿರುವುದಾಗಿ ಲೆಕ್ಕ ನೀಡುತ್ತಿದ್ದಾರೆ. ಅದನ್ನು ಹೊರತುಪಡಿಸಿದರೆ 150 ಹಳ್ಳಿಗಳ ಜನರು ಶುದ್ಧ ನೀರಿಗಾಗಿ ಎದುರು ನೋಡುತ್ತಿದ್ದಾರೆ.

ಚಿತ್ರಾವತಿ ಮತ್ತು ವಂಡ್‌ಮಾನ್‌ ಜಲಾಶಯಗಳು ತುಂಬಿ ಹರಿದಿರುವ ಕಾರಣ ‘ಬಹುಗ್ರಾಮ’ಗಳ ಜನರಲ್ಲಿ ಶುದ್ಧ ಕುಡಿಯುವ ನೀರಿನ ಕುಡಿಯುವ ಆಸೆ ಚಿಗುರಿದೆ. ಆದರೆ ಈವರೆಗೆ ಸಮರ್ಪಕವಾಗಿ ನೀರು ಒದಗಿಸುವ ಕೆಲಸ ಮಾತ್ರ ನಡೆದಿಲ್ಲ. ಕೇಳಿದಾಗಲೆಲ್ಲ ಒಬ್ಬೊಬ್ಬ ಅಧಿಕಾರಿ ಒಂದೊಂದು ‘ಸಬೂಬು’ ಹೇಳುತ್ತಾರೆ.

ಜಿಲ್ಲಾಡಳಿತವಂತೂ ಶುದ್ಧ ಕುಡಿಯುವ ನೀರು ಒದಗಿಸುವ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತಳೆದಿದೆ. ಹೀಗಾಗಿ ದುಡ್ಡು ಕೊಟ್ಟು ಶುದ್ಧ ನೀರು ಕೊಳ್ಳುವ ‘ಅನಿವಾರ್ಯ ಕರ್ಮ’ ನಮಗೆ ತಪ್ಪುತ್ತಿಲ್ಲ ಎಂದು ಈ ಎರಡು ತಾಲ್ಲೂಕುಗಳ ನೂರಾರು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ನಂದಿಬೆಟ್ಟದ ತಪ್ಪಲಲ್ಲಿ ಹುಟ್ಟಿ ನೆರೆಯ ಆಂಧ್ರದ ಬುಕ್ಕಾಪಟ್ಟಣ ಕೆರೆ ಸೇರುವ ಚಿತ್ರಾವತಿ ನದಿ ನೀರಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಪರಗೋಡು ಸಮೀಪ ಆಣೆಕಟ್ಟೆ ಕಟ್ಟಿ ಅಲ್ಲಿಂದ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ 128 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಅನುಷ್ಟಾನಕ್ಕೆ ಬಂದು 14 ವರ್ಷಗಳು ಕಳೆದಿವೆ. ಆದರೆ ಈವರೆಗೆ ಬಾಗೇಪಲ್ಲಿ ತಾಲ್ಲೂಕಿನ 73 ಮತ್ತು ಗುಡಿಬಂಡೆ ತಾಲ್ಲೂಕಿನ 55 ಗ್ರಾಮಗಳಿಗೆ ಈ ಜಲಾಶಯದ ತೊಟ್ಟು ನೀರು ಹರಿದಿಲ್ಲ!

ಕಳೆದ ಆರು ವರ್ಷಗಳ ಬಳಿಕ ಇದೀಗ ಮೊದಲ ಬಾರಿ ಚಿತ್ರಾವತಿ ಜಲಾಶಯ ಉಕ್ಕಿ ಹರಿದಿದೆ. ಅದರೊಂದಿಗೆ ಚೆಂಡೂರು, ದಪರ್ತಿ, ಹಂಪಸಂದ್ರ, ಕಾರ್ಕೂರು, ಪರಗೋಡು, ತಟ್ಟಹಳ್ಳಿ, ಶ್ರೀನಿವಾಸಪುರ ಸೇರಿದಂತೆ ನೂರಾರು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ನೀರು ಮಾತ್ರ ಹರಿಯುತ್ತಿಲ್ಲ. ಕಾರಣಗಳನ್ನು ಕೇಳಹೋದರೆ ತರಹೇವಾರಿ ದೊರೆಯುತ್ತವೆ.

ಇನ್ನು, ಬಾಗೇಪಲ್ಲಿನ ತಾಲ್ಲೂಕಿನ ವಂಡಮಾನ್‌ ಜಲಾಶಯದಿಂದ 62 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ‘ಬಹುಗ್ರಾಮ’ ಯೋಜನೆಗೆ ಚಾಲನೆ ದೊರೆತು ಹತ್ತು ವರ್ಷಗಳು ಸಮೀಪಿಸುತ್ತ ಬಂದರೂ ಇತ್ತೀಚೆಗೆ 40 ಹಳ್ಳಿಗಳಿಗೆ ನೀರು ಹರಿಸಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇದನ್ನು ಮಾಜಿ ಶಾಸಕ ಎನ್.ಸಂಪಂಗಿ ಅವರು ಅಲ್ಲಗಳೆಯುತ್ತಾರೆ.

ವಂಡಮಾನ್ ಜಲಾಶಯದ ಬಳಿಯಲ್ಲಿಯೇ ಇರುವ ಶುದ್ಧೀಕರಣ ಘಟಕಗಳಲ್ಲಿನ ಯಂತ್ರಗಳು, ಜನರೇಟರ್, ಪೈಪ್‌ಗಳು ಈ ಹಿಂದೆ ಒಂದು ಬಾರಿ ಕಳ್ಳರ ಪಾಲಾಗಿವೆ. ಪುನಃ ಅದಕ್ಕಾಗಿ ಸರ್ಕಾರಕ್ಕೆ ₨75 ಲಕ್ಷ ಪ್ರಸ್ತಾವ ಕೊಟ್ಟು ಹೊಸ ಉಪಕರಣಗಳನ್ನು ಅಳವಡಿಸಿದರೂ ಈವರೆಗೆ ಸಮರ್ಪಕವಾಗಿ ಕುಡಿಯುವ ನೀರು ಕೊಡುವ ಕೆಲಸವಾಗಿಲ್ಲ ಎನ್ನುವುದು ಯೋಜನೆ ವ್ಯಾಪ್ತಿಯ ಜನರ ದೂರು.

‘ಜಲಾಶಯ ನೀರು ಹರಿಸಲು ಓವರ್‌ ಹೆಡ್‌ ಟ್ಯಾಂಕ್, ಶುದ್ಧೀಕರಣ ಘಟಕಗಳು, ನೀರು ಪೂರೈಸುವ ಪೈಪ್‌ಲೈನ್‌ ಅಳವಡಿಸಿ ಎಷ್ಟೋ ವರ್ಷಗಳು ಕಳೆದಿವೆ. ಇಷ್ಟರೊಳಗೆ ಜಲಾಶಯಗಳಿಂದ ನೀರು ಕೊಡಬೇಕಿತ್ತು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈವರೆಗೆ ಆ ಕೆಲಸವಾಗಿಲ್ಲ. ಈವರೆಗೆ ನಾವು ಕಾಯ್ದು ನೋಡಿ ಬೇಸರವಾಗಿದೆ. ಇನ್ನು ಮುಂದೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ’ ಎನ್ನುತ್ತಾರೆ ಈ ಯೋಜನೆಗಳಿಗಾಗಿ ಶ್ರಮಿಸಿದ ಮಾಜಿ ಶಾಸಕ ಎನ್.ಸಂಪಂಗಿ.

ಈ ಎರಡು ತಾಲ್ಲೂಕುಗಳ ಅನೇಕ ಹಳ್ಳಿಗಳಲ್ಲಿ ಜನರು ವಿಧಿಯಿಲ್ಲದೆ ಕುಡಿದ ಭೂಗರ್ಭದಾಳದ ಗಡುಸು ನೀರು ದೇಹದ ಗಡುಸುತನ ಕಳೆದು ಅನೇಕರಲ್ಲಿ ಹರೆಯದಲ್ಲೇ ವೃದ್ದಾಪ್ಯದ ನೆರಿಗೆ ಮೂಡಿಸುತ್ತಿದೆ. ಕೈ ಕಾಲು ಸಂದು ಹಿಡಿದುಕೊಂಡವರು, ಹಲ್ಲು ಹಳದಿಗಟ್ಟಿದವರ ಲೆಕ್ಕವೇ ಸಿಗುವುದಿಲ್ಲ. ಶುದ್ಧ ಕುಡಿಯುವ ನೀರಿಗೆ ಬರ ಬಂದರೆ ಜನಜೀವನದ ಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಎರಡು ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಜನರ ವ್ಯಥೆಯ ಕಥೆಗಳು ದಂಡಿಯಾಗಿ ಕಾಣಸಿಗುತ್ತವೆ.

ಏನಂತಾರೆ ಅಧಿಕಾರಿಗಳು?

20 ದಿನಗಳಲ್ಲಿ ನೀರು ಕೊಡುತ್ತೇವೆ

‘ಚಿತ್ರಾವತಿ ಜಲಾಶಯದಿಂದ 128 ಗ್ರಾಮಗಳಿಗೆ ನೀರು ಹರಿಸಬೇಕು. ಆದರೆ ಪಂಪ್‌ ಹೌಸ್‌ಗಳಿಗೆ ವಿದ್ಯುತ್ ಪೂರೈಕೆಯಾಗಬೇಕಿದೆ. ವಿದ್ಯುತ್‌ ಇಲ್ಲದಿದ್ದರೆ ಹೇಗೆ ನೀರು ಕೊಡುವುದು? ಅದಕ್ಕೆ 20 ದಿನಗಳಾದರೂ ಬೇಕು. ಬಳಿಕ ನೀರು ಕೊಡುತ್ತೇವೆ’ ಎನ್ನುತ್ತಾರೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸರೆಡ್ಡಿ.

ಪೈಪ್‌ಲೈನ್ ಧಕ್ಕೆಯಿಂದ ವಿಳಂಬ

‘ವಂಡಮಾನ್‌ ಜಲಾಶಯದಿಂದ 20 ಹಳ್ಳಿಗಳಿಗೆ ನೀರು ಪೂರೈಸುವುದು ಬಾಕಿ ಇದೆ. ಆದರೆ ನಾರೇಮದ್ದೆಪಲ್ಲಿ ಬಳಿ ರಸ್ತೆ ಕಾಮಗಾರಿ ಮತ್ತು ರೈತರು ಕಾಲುವೆ ಒಡೆದಿರುವ ಜಾಗದಲ್ಲಿ ಪೈಪ್‌ಲೈನ್‌ಗೆ ಧಕ್ಕೆಯಾಗಿದೆ ರಿಪೇರಿ ಮಾಡಬೇಕು. 12 ಹಳ್ಳಿಗೆ ಎರಡನೇ ಪಂಪ್‌ಹೌಸ್‌ನಿಂದ ನೀರು ಪೂರೈಸಬೇಕು. ಆದರೆ ಪಾತಪಾಳ್ಯ ಕೆರೆಯಲ್ಲಿ ಹಾಯ್ದು ಹೋಗಿರುವ ಪೈಪ್‌ಲೈನ್‌ ಒಡೆದಿದೆ. ಕೆರೆ ತುಂಬಿರುವ ಕಾರಣಕ್ಕೆ ರಿಪೇರಿ ಕಾರ್ಯ ವಿಳಂಬವಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಲಿಂಗಾರೆಡ್ಡಿ ಹೇಳಿದರು.

ನಾಗರಿಕರು ಹೇಳುವುದೇನು?

ಸಮುದ್ರದ ನಂಟು ಉಪ್ಪಿಗೆ ಬಡತನ

‘ನಮಗೆ ಪಕ್ಕದಲ್ಲಿಯೇ ಜಲಾಶಯವಿದ್ದರೂ ಊರಲ್ಲಿ ಮಾತ್ರ ಕುಡಿಯುವ ನೀರಿಗೆ ಹಾಹಾಕಾರವಿದೆ. ಹೀಗಾಗಿ ನಮ್ಮದು ‘ಸಮುದ್ರದ ನಂಟು ಉಪ್ಪಿಗೆ ಬಡತನ’ ಎಂಬ ಸ್ಥಿತಿ. ಊರಲ್ಲಿ ಹಾಕಿದ ಶುದ್ಧೀಕರಣ ಘಟಕ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆ ನೀರು ಕುಡಿದರೆ ನೆಗಡಿ, ಕೆಮ್ಮು ಬರುತ್ತದೆ. ಆದ್ದರಿಂದ ಬಾಗೇಪಲ್ಲಿಯಿಂದ ₨20 ಕ್ಯಾನ್‌ನಂತೆ ಕುಡಿಯುವ ನೀರು ಖರೀದಿಸಿ ಕುಡಿಯುತ್ತಿದ್ದೇವೆ’ ಎಂದು ಪರಗೋಡು ನಿವಾಸಿ ಶಂಕರಪ್ಪ ಅಳಲು ತೋಡಿಕೊಂಡರು.

ನೀರಿನ ಮುಖ ನೋಡಲೇ ಇಲ್ಲ

‘ನಮ್ಮೂರಲ್ಲಿ ಜಲಾಶಯ ನೀರು ಕೊಡುವುದಾಗಿ ಐದಾರು ವರ್ಷಗಳ ಹಿಂದೆಯೇ ಪೈಪ್‌ಲೈನ್‌ ಹಾಕಿದ್ದಾರೆ. ಆದರೆ ಒಂದೇ ಒಂದು ಬಾರಿ ಕೂಡ ನೀರು ಹರಿಸಿಲ್ಲ. ಪ್ಲೋರೈಡ್‌ ನೀರು ಕುಡಿದು ಕುಡಿದು ಬೆಳಿಗ್ಗೆ ಬೇಗ ಎದ್ದೇಳಲು ಆಗುವುದಿಲ್ಲ. ಕೈಕಾಲು ನೋವು ಬಾಧಿಸುತ್ತವೆ. ಸಂಪಂಗಿ, ಶ್ರೀರಾಮರೆಡ್ಡಿ, ಸುಬ್ಬಾರೆಡ್ಡಿ ಮೂರು ಜನರು ನಮಗೆ ಬಾಯಲ್ಲೇ ನೀರು ಕೊಡಿಸುತ್ತ ಬಂದರು. ಈವರೆಗೆ ನಾವಂತೂ ಆ ನೀರಿನ ಮುಖ ನೋಡಲೇ ಇಲ್ಲ’ ಎಂದು ತಟ್ಟಹಳ್ಳಿ ನಿವಾಸಿ ಗಂಗರಾಜು ಅಸಮಾಧಾನ ವ್ಯಕ್ತಪಡಿಸಿದರು.

* * 

ಜಲಾಶಯಗಳಿಂದ ಶುದ್ಧ ಕುಡಿಯುವ ನೀರು ಹರಿಸುವ ವಿಚಾರದಲ್ಲಿ ಅಧಿಕಾರಿಗಳು ಬೇಜಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪ್ರತಿಭಟನೆ ಶುರು ಮಾಡುತ್ತೇವೆ.
ಎನ್.ಸಂಪಂಗಿ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT